ಇತ್ತೀಚೆಗಷ್ಟೇ ರಾಜ್ಯ ಸರಕಾರವು 101 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ, ಮಳೆಯಿಲ್ಲದೆ ಬರದ ಬೇಗೆಗೆ ಸಿಲುಕಿ ನಲುಗುತ್ತಿರುವ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಕರಾವಳಿ ಹಾಗೂ ಕಲಬುರಗಿಯಂತಹ ಅನೇಕ ಪ್ರಮುಖ ಜಿಲ್ಲೆಗಳ ಬಹುತೇಕ ತಾಲೂಕುಗಳು ಈ ಪಟ್ಟಿಯಿಂದಲೇ ನಾಪತ್ತೆಯಾಗಿವೆ!
ಬರಗಾಲವು ರಾಜ್ಯದ ಅಂಗಳಕ್ಕೆ ಕಾಲಿಟ್ಟಾಗಲೆ, ವಾಸ್ತವಿಕ ಸಂಕಷ್ಟಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಅಂಕಿ-ಅಂಶಗಳನ್ನು ತಿರುಚುವ, ಪರಿಸ್ಥಿತಿಯ ಗಂಭೀರತೆಯನ್ನು ಮರೆಮಾಚುವ ಮತ್ತು ಸುಳ್ಳು ಸುದ್ದಿಗಳ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕಸರತ್ತುಗಳಿಗೆ ಸರಕಾರ ಮುಂದಾಗುತ್ತದೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕಂಗಾಲಾದ ರೈತರ ಕಣ್ಣೀರೊರೆಸುವ ಬದಲು, ಆಡಳಿತ ಯಂತ್ರವು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೊಸ ಹೊಸ ಆಖ್ಯಾನಗಳನ್ನು ಸೃಷ್ಟಿಸುವುದೇ ದೊಡ್ಡ ಸಾಧನೆ ಎಂದು ಭಾವಿಸುತ್ತದೆ.
ಆದರೆ ಇಂತಹ ಕೃತಕ ಹಾಗೂ ರಾಜಕೀಯ ಪ್ರೇರಿತ ಕಾರ್ಯಗಳು ಅನ್ನದಾತನ ಬದುಕನ್ನು ಇನ್ನಷ್ಟು ದುರ್ಬರಗೊಳಿಸುತ್ತವೆಯೇ ಹೊರತು ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ರೈತರು ಆಕಾಶ ನೋಡಿ ಮಳೆ ಬರುತ್ತದೆ ಎಂದು ಕಾಯುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ; ಮಳೆ ಕೈಕೊಟ್ಟು ಬೆಳೆ ಸಂಪೂರ್ಣವಾಗಿ ಒಣಗಿ ಹೋದರೂ, ತಾವು ಅಧಿಕೃತವಾಗಿ ‘ಬೀದಿಗೆ ಬಿದ್ದಿದ್ದೇವೆ’ ಎಂದು ಸಾಬೀತುಪಡಿಸಲು ಅನ್ನದಾತರು ಸರಕಾರದ ಬರಪೀಡಿತ ಪಟ್ಟಿಯ ಅಧಿಕೃತ ಆದೇಶಕ್ಕಾಗಿ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸರಕಾರವು 101 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ, ಮಳೆಯಿಲ್ಲದೆ ಬರದ ಬೇಗೆಗೆ ಸಿಲುಕಿ ನಲುಗುತ್ತಿರುವ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಕರಾವಳಿ ಹಾಗೂ ಕಲಬುರಗಿಯಂತಹ ಅನೇಕ ಪ್ರಮುಖ ಜಿಲ್ಲೆಗಳ ಬಹುತೇಕ ತಾಲೂಕುಗಳು ಈ ಪಟ್ಟಿಯಿಂದಲೇ ನಾಪತ್ತೆಯಾಗಿವೆ!
ಬೆಳೆ ಕಳೆದುಕೊಂಡ ರೈತರು ಕಣ್ಣೀರು ಹಾಕುತ್ತಿದ್ದರೆ, ಸರಕಾರ ಮಾತ್ರ ತನ್ನ ಕಚೇರಿಯ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ‘ನಮ್ಮ ಲೆಕ್ಕಾಚಾರ ಪಕ್ಕಾ ಇದೆ’ ಎಂದು ಬೆನ್ನು ತಟ್ಟಿಕೊಳ್ಳು ತ್ತಿದೆ. ವಾಸ್ತವದಲ್ಲಿ, ಸರ್ಕಾರದ ಈ ಪಟ್ಟಿಯಲ್ಲಿ ಮಾತ್ರವಲ್ಲ, ಅವರ ಮಾನವೀಯತೆಯಲ್ಲೂ ‘ಬರ’ ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಜಕೀಯ ಪ್ರತಿಷ್ಠೆ
ಇದು ಕೇವಲ ಕೆಲವೇ ಜಿಲ್ಲೆಗಳ ಸಮಸ್ಯೆಯಲ್ಲ. ಸರ್ಕಾರದ ಈ ಅವೈಜ್ಞಾನಿಕ ಪಟ್ಟಿಯ ವಿರುದ್ಧ ಇಡೀ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ವಿಜಯ ನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ರೈತರು ಇಡೀ ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟಿಸಿದ್ದಾರೆ.
ಬಳ್ಳಾರಿಯ ಸಿರುಗುಪ್ಪ, ಧಾರವಾಡದ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಬೀದರ್‌ನ ಕಮಲನಗರ, ಭಾಲ್ಕಿ, ಹಾಗೂ ವಿಜಯಪುರದ ಸಿಂದಗಿಯಂತಹ ಹತ್ತಾರು ತಾಲೂಕುಗಳಲ್ಲಿ ರೈತರು ರಸ್ತೆಗಿಳಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಶೇಕಡಾ 32ರಷ್ಟು ಮಳೆ ಕೊರತೆಯಿದೆ; ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಶೇಕಡಾ 44, ಉತ್ತರ ಒಳನಾಡಿನಲ್ಲಿ ಶೇಕಡಾ 36ರಷ್ಟು ಮಳೆ ಕೊರತೆಯಿದ್ದರೂ, ಕೇವಲ 101 ತಾಲೂಕುಗಳನ್ನು ಮಾತ್ರ ಪಟ್ಟಿಗೆ ಸೇರಿಸಿರುವುದು ವಿಪರ್ಯಾಸ.
ಇದೆಲ್ಲದರ ನಡುವೆ ರಾಜಕೀಯ ನಾಯಕರ ಪ್ರತಿಷ್ಠೆಯ ಆಟವೂ ಶುರುವಾಗಿದೆ. ಸ್ವತಃ ಆಡಳಿತ ಪಕ್ಷದ ಶಾಸಕರೊಬ್ಬರು ತಮ್ಮದೇ ಸರ್ಕಾರದ ಸಚಿವರ ವಿರುದ್ಧ ‘ವೈಯಕ್ತಿಕ ದ್ವೇಷದಿಂದ ನನ್ನ ಕ್ಷೇತ್ರವನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ’ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಅಂದರೆ ಬರಗಾಲದ ಪಟ್ಟಿ ತಯಾರಾಗುತ್ತಿರುವುದು ವೈಜ್ಞಾನಿಕ ವರದಿಗಳ ಆಧಾರದ ಮೇಲೆಯೋ ಅಥವಾ ರಾಜಕೀಯ ದ್ವೇಷದ ಆಧಾರದ ಮೇಲೆಯೋ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿದೆ.
ಬರಗಾಲವನ್ನು ನಿರ್ಧರಿಸಲು ಸರ್ಕಾರ ಅನುಸರಿಸುತ್ತಿರುವ ಮಾನದಂಡಗಳು ಮತ್ತು ಅದರ ಹಿಂದಿನ ತರ್ಕವನ್ನು ನಾವು ಗಂಭೀರವಾಗಿ ಪ್ರಶ್ನಿಸಲೇಬೇಕಿದೆ. ಸದ್ಯದ ವ್ಯವಸ್ಥೆಯಲ್ಲಿ, ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಮಳೆಯ ಪ್ರಮಾಣ, ಉಪಗ್ರಹ ಆಧಾರಿತ ಹಸಿರು ಹೊದಿಕೆಯ ಸೂಚ್ಯಂಕ ಹಾಗೂ ಮಣ್ಣಿನ ತೇವಾಂಶದ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಳ್ಳ ಲಾಗುತ್ತದೆ. ಆದರೆ, ಈ ತಂತ್ರಜ್ಞಾನಗಳು ಎಷ್ಟರಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿವೆ? ಮಣ್ಣಿನ ಗುಣ, ಬೆಳೆಯ ಸ್ಥಿತಿ ಹಾಗೂ ರೈತನ ಬವಣೆಗಳನ್ನು ಕೇವಲ ಅಂತರಿಕ್ಷದಲ್ಲಿರುವ ಉಪಗ್ರಹದಿಂದ ಅಳೆಯಲು ಸಾಧ್ಯವೇ? ಉಪಗ್ರಹದ ಕ್ಯಾಮೆರಾಗಳಿಗೆ ಭೂಮಿಯ ಮೇಲಿನ ಹಸಿರು ಬಣ್ಣ ಮಾತ್ರ ಕಾಣುತ್ತದೆಯೇ ಹೊರತು, ಆ ಹಸಿರು ಬಣ್ಣ ರೈತ ಬೆಳೆದ ಬೆಳೆಯದ್ದೋ ಅಥವಾ ಹೊಲದಲ್ಲಿ ಬೆಳೆದು ನಿಂತಿರುವ ಕಳೆಯದ್ದೋ ಎಂಬುದು ತಿಳಿಯುವುದಿಲ್ಲ.
ಪ್ರಯೋಗಾಲಯದಲ್ಲಿ ಕುಳಿತು ಕಂಪ್ಯೂಟರ್ ಕೋಷ್ಟಕದ ಮುಂದೆ ದತ್ತಾಂಶ ವಿಶ್ಲೇಷಣೆ ಮಾಡುವ ಅಧಿಕಾರಿಗಳಿಗೆ, ಹೊಲದಲ್ಲಿ ಒಣಗುತ್ತಿರುವ ಪೈರಿನ ನೈಜ ಚಿತ್ರಣ ಅರ್ಥವಾಗಲು ಹೇಗೆ ಸಾಧ್ಯ? ವಾಸ್ತವವಾಗಿ ಬೆಳೆಗಳು ಸಂಪೂರ್ಣ ನಾಶವಾಗಿದ್ದರೂ, ಕೇವಲ ಕಾಗದದ ಮೇಲಿನ ತಾಂತ್ರಿಕ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಈ ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ತಂತ್ರಜ್ಞಾನದ ಹೆಸರಿನಲ್ಲಿ ರೈತರಿಗೆ ಮಾಡಿದ ಅತಿ ದೊಡ್ಡ ವಂಚನೆಯಾಗಿದೆ.
ಕಳೆದುಹೋದ ಸಾಮಾನ್ಯ ಜ್ಞಾನ
ಸರ್ಕಾರದ ಈ ಅವೈಜ್ಞಾನಿಕ ಲೆಕ್ಕಾಚಾರದ ಅತಿ ದೊಡ್ಡ ವೈಫಲ್ಯ ಬಯಲಾಗುವುದು ಬಿತ್ತನೆ ಸಮಯದ ಮಳೆಯ ಮೌಲ್ಯಮಾಪನದಲ್ಲಿ. ರೈತರು ಮಳೆಗಾಲದ ಆರಂಭದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡುತ್ತಾರೆ. ಆದರೆ ಬಿತ್ತನೆ ಮಾಡಿದ ಮೊದಲ 30 ರಿಂದ 40 ದಿನಗಳ ಕಾಲ ಮಳೆಯೇ ಬರುವುದಿಲ್ಲ.
ತೇವಾಂಶವಿಲ್ಲದೆ ಮಣ್ಣಿನಲ್ಲಿಯೇ ಬೀಜಗಳು ಸತ್ತುಹೋಗುತ್ತವೆ ಅಥವಾ ಮೊಳಕೆಯೊಡೆದ ಬೆಳೆಗಳು ಒಣಗಿ ಕರಕಲಾಗುತ್ತವೆ. ವಾಸ್ತವದಲ್ಲಿ ಬೆಳೆ ಅಲ್ಲಿಗೇ ನಾಶವಾಗಿರುತ್ತದೆ ಮತ್ತು ರೈತ ಆರ್ಥಿಕವಾಗಿ ದಿವಾಳಿಯಾಗಿರುತ್ತಾನೆ. ಆದರೆ ಸರ್ಕಾರದ ವಿಪರ್ಯಾಸ ನೋಡಿ!
ಬಿತ್ತನೆ ಮುಗಿದು ಬೆಳೆ ನಾಶವಾದ ಎರಡು ತಿಂಗಳ ನಂತರ ಅಕಾಲಿಕವಾಗಿ ಭಾರಿ ಮಳೆಯಾಗುತ್ತದೆ. ಆಗ ಹೊಲದ ತುಂಬಾ ಕಳೆ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಇದೇ ಸಮಯದಲ್ಲಿ ಉಪಗ್ರಹದ ಮೂಲಕ ಫೋಟೋ ತೆಗೆಯುವ ಅಧಿಕಾರಿಗಳಿಗೆ ಹೊಲದ ತುಂಬಾ ‘ಹಸಿರು’ ರಾರಾಜಿಸುತ್ತಿರುವುದು ಕಾಣುತ್ತದೆ.
ತಕ್ಷಣವೇ ಅವರು ತೇವಾಂಶ ಚೆನ್ನಾಗಿದೆ, ಹಸಿರಿನ ಸೂಚ್ಯಂಕ ಉತ್ತಮವಾಗಿದೆ, ಹಾಗಾಗಿ ಇಲ್ಲಿ ಬರವಿಲ್ಲ ಎಂದು ವರದಿ ಬರೆದುಬಿಡುತ್ತಾರೆ! ಬಿತ್ತನೆ ಸಮಯದಲ್ಲಿ ಮಳೆಯಿಲ್ಲದೆ ಬೆಳೆ ನಾಶವಾಗಿ ರುವ ಪ್ರಾಥಮಿಕ ಹಂತವನ್ನು ಪರಿಗಣಿಸದೆ, ಕೇವಲ ನಂತರ ಬಂದ ಅಕಾಲಿಕ ಮಳೆಯನ್ನು ಆಧಾರವಾಗಿಟ್ಟುಕೊಂಡು ಬರಗಾಲವನ್ನು ನಿರ್ಧರಿಸುವುದು ಯಾವ ಸೀಮೆಯ ನ್ಯಾಯ? ರೈತರು ತಾವು ಬೆಳೆದ ಬೆಳೆಯ ಬದಲು, ಅಕಾಲಿಕ ಮಳೆಗೆ ಬೆಳೆದ ಕಳೆ ಗಿಡಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಮಾರಲು ಸಾಧ್ಯವೇ? ಎಂಬ ಕನಿಷ್ಠ ಸಾಮಾನ್ಯ ಜ್ಞಾನವೂ ಈ ಲೆಕ್ಕಾಚಾರ ಮಾಡುವವರಿಗಿಲ್ಲ.
ರೈತರು, ಹೋರಾಟಗಾರರು ಮತ್ತು ವಿರೋಧ ಪಕ್ಷದವರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ, ಈಗ ಸರ್ಕಾರ ಎಚ್ಚೆತ್ತುಕೊಂಡಂತೆ ನಟಿಸುತ್ತಿದೆ. ಮುಖ್ಯಮಂತ್ರಿಗಳು ಮುಂದಿನ 15 ದಿನಗಳಲ್ಲಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹಾಗೂ ಹಂತ ಹಂತವಾಗಿ ಇನ್ನಷ್ಟು ತಾಲೂಕು ಗಳನ್ನು ಸೇರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಇಲ್ಲಿ ಕಾಡುತ್ತಿರುವ ಮೂಲ ಪ್ರಶ್ನೆಯೆಂದರೆ, ಸರ್ಕಾರದ ಬಳಿ ಬರ ಘೋಷಣೆಗೆ ಸಂಬಂಧಿಸಿದಂತೆ ಯಾವುದಾದರೂ ನಿರ್ದಿಷ್ಟವಾದ ಮತ್ತು ಪಾರದರ್ಶಕವಾದ ತಂತ್ರಗಾರಿಕೆ ಇದೆಯೇ? ಒಂದು ವೇಳೆ ಮೊದಲ ಬಾರಿ ಮಾಡಿದ ವೈಜ್ಞಾನಿಕ ಸಮೀಕ್ಷೆ ನೂರಕ್ಕೆ ನೂರು ಸರಿಯಾಗಿದ್ದರೆ, ಈಗ ಕೇವಲ ಹೋರಾಟಕ್ಕೆ ಮಣಿದು ಪಟ್ಟಿಯನ್ನು ಬದಲಾಯಿಸುತ್ತಿರುವುದು ಏಕೆ? ಅಥವಾ ಈಗ ಮಾಡು ತ್ತಿರುವ ಪರಿಷ್ಕರಣೆ ಸರಿಯಾಗಿದ್ದರೆ, ಮೊದಲ ಬಾರಿ ಮಾಡಿದ ಸಮೀಕ್ಷೆಯಲ್ಲಿ ಅಷ್ಟೊಂದು ಬೃಹತ್ ತಪ್ಪುಗಳು ಆಗಲು ಕಾರಣವೇನು? ಇದು ಕೇವಲ ರಾಜಕೀಯ ವಿರೋಧವನ್ನು ತಣ್ಣಗಾಗಿ ಸಲು ಮತ್ತು ಜನರ ಕಣ್ಣೊರೆಸಲು ಮಾಡುತ್ತಿರುವ ನಾಟಕವೇ ವಿನಃ, ರೈತರ ನೈಜ ಸಮಸ್ಯೆಯನ್ನು ಅರಿತು ಮಾಡುತ್ತಿರುವ ಪರಿಹಾರವಲ್ಲ.
ಕೇವಲ ಹೋರಾಟ ಮಾಡಿದಾಗ ಮಾತ್ರ ತಾಲೂಕುಗಳನ್ನು ಸೇರಿಸುವುದಾದರೆ, ನಿಮ್ಮ ಹಿಂದಿನ ಸಮೀಕ್ಷೆ ಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂಬುದನ್ನು ಸರ್ಕಾರ ಮೊದಲು ಒಪ್ಪಿಕೊಳ್ಳ ಬೇಕು.
ತಕ್ಷಣದ ಪರಿಹಾರವೆಲ್ಲಿದೆ?
ಸರಿ, ವಿವಾದಗಳ ನಡುವೆಯೂ ಕೆಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಬರಗಾಲದಲ್ಲಿ ಅನ್ನದಾತನಿಗೆ ಸರ್ಕಾರದ ಆಸರೆ ಎಂದು ಭಾರಿ ಪ್ರಚಾರದೊಂದಿಗೆ ಸಾಮಾಜಿಕ ಜಾಲತಾಣ ಗಳಲ್ಲಿ ಆಕರ್ಷಕ ಪೋಸ್ಟರ್‌ಗಳನ್ನು ಹರಿಬಿಟ್ಟರೆ, ಹೊಲದಲ್ಲಿ ಕಣ್ಣೀರು ಹಾಕುತ್ತಿರುವ ರೈತನ ಹೊಟ್ಟೆ ತುಂಬುತ್ತದೆಯೇ? ಬೆಳೆ ಉಳಿಸಲು 28.52 ಕೋಟಿ ರೂಪಾಯಿ ವೆಚ್ಚದಲ್ಲಿ ‘ಮೋಡ ಬಿತ್ತನೆ’ ಮಾಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ, ಬಿತ್ತಿದ ಬೀಜ ಮೊಳಕೆಯೊಡೆಯದೆ,
ಬೆಳೆದು ನಿಂತ ಪೈರು ತೇವಾಂಶವಿಲ್ಲದೆ ಸಂಪೂರ್ಣ ಕರಕಲಾಗಿ ಹೋದ ಮೇಲೆ, ಈಗ ಮೋಡ ಬಿತ್ತನೆ ಮಾಡುವುದರಿಂದ ಏನು ಪ್ರಯೋಜನ? ಪ್ರಾಣ ಹೋದ ಮೇಲೆ ಸಂಜೀವಿನಿ ಕೊಟ್ಟಂತೆ, ಬೆಳೆಯೇ ಇಲ್ಲದ ಹೊಲಕ್ಕೆ ಈಗ ಮಳೆ ಬಂದರೆ ರೈತನಿಗೆ ಎಕರೆಗೆ ಲಕ್ಷಾಂತರ ರೂಪಾಯಿ ಲಾಭ ಬರುತ್ತದೆಯೇ? ಇದು ಕೇವಲ ಗುತ್ತಿಗೆದಾರರ ಜೇಬು ತುಂಬಿಸುವ ತಂತ್ರವೇ ಹೊರತು ರೈತನಿಗಾಗುವ ಲಾಭ ಶೂನ್ಯ. ಬೆಳೆ ಕಳೆದುಕೊಂಡು, ಸಾಲಗಾರರ ಕಾಟ ತಾಳಲಾರದೆ ಇಂದೇ ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವ ರೈತನಿಗೆ, ಆರು ತಿಂಗಳ ನಂತರ ಬರುವ ಪರಿಹಾರದಿಂದಲೋ ಅಥವಾ ಕೇವಲ ಬಣ್ಣದ ಪೋಸ್ಟರ್‌ಗಳ ಭರವಸೆಗಳಿಂದಲೋ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆತನಿಗೆ ಇಂದು, ಇದೇ ಕ್ಷಣಕ್ಕೆ ಆರ್ಥಿಕ ನೆರವಿನ ತುರ್ತು ಅವಶ್ಯಕತೆಯಿದೆ. ಹಾಗೂ ಎಲ್ಲ ಕೇಂದ್ರವೇ ಮಾಡಬೇಕಾದರೆ ರಾಜ್ಯ ಸರಕಾರಕ್ಕೇನು ಕೆಲಸ? ಬರಗಾಲದ ಸಮಯದಲ್ಲಿ ರೈತನ ಕೊರಳಿಗುರುಳಾಗಿ ಕಾಡುವ ಅತಿದೊಡ್ಡ ಭೂತ ಎಂದರೆ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಬೆಳೆ ಸಾಲ. ಬೆಳೆಯೇ ಇಲ್ಲದ ಮೇಲೆ ಆತ ಸಾಲ ತೀರಿಸುವುದಾದರೂ ಎಲ್ಲಿಂದ? ರಾಜ್ಯ ಸರ್ಕಾರವು ತನ್ನ ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಬಹುದು. ಆದರೆ, ಕನಿಷ್ಠಪಕ್ಷ ರೈತರು ಪಡೆದಿರುವ ಬೆಳೆ ಸಾಲದ ಮೇಲಿನ ‘ಬಡ್ಡಿಯನ್ನು’ ಒಂದು ವರ್ಷದ ಮಟ್ಟಿಗಾದರೂ ಸಂಪೂರ್ಣವಾಗಿ ಮನ್ನಾ ಮಾಡಲು ಸರ್ಕಾರಕ್ಕೆ ಏನು ಅಡ್ಡಿಯಿದೆ? ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರಿಂದ ಸಾಲ ವಸೂಲಿ ಮಾಡುವಂತಿಲ್ಲ ಎಂದು ಕಠಿಣ ಆದೇಶ ಹೊರಡಿಸಿರುವುದಾಗಿ ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದೆ.
ಇದು ಮೇಲ್ನೋಟಕ್ಕೆ ಬಹಳ ದೊಡ್ಡ ಪರಿಹಾರ ಎನಿಸಿದರೂ, ಇದರಿಂದ ಸಾಲದ ಮೇಲಿನ ಬಡ್ಡಿ ನಿಲ್ಲುತ್ತದೆಯೇ? ಖಂಡಿತ ಇಲ್ಲ! ಸಾಲ ವಸೂಲಾತಿಯನ್ನು ಕೇವಲ ತಾತ್ಕಾಲಿಕವಾಗಿ ಮುಂದೂಡ ಲಾಗುತ್ತಿದೆಯೇ ಹೊರತು, ಬಡ್ಡಿ ದಿನೇ ದಿನೆ ಏರುತ್ತಲೇ ಇರುತ್ತದೆ. ಬಡ್ಡಿಯನ್ನೇ ಸಂಪೂರ್ಣ ಮನ್ನಾ ಮಾಡದ ಹೊರತು ಈ ತಾತ್ಕಾಲಿಕ ತಡೆಯಾಜ್ಞೆಗಳಿಂದ ರೈತನ ಸಾವಿನ ದಿನಾಂಕ ಮುಂದೂಡಲ್ಪ ಡುತ್ತದೆಯೇ ವಿನಃ ಆತನಿಗೆ ಜೀವದಾನ ಸಿಗುವುದಿಲ್ಲ.
ಕೃಷಿ ಎಂಬುದು ಕೇವಲ ಅಂಕಿ-ಅಂಶಗಳ ಆಟವಲ್ಲ; ಅದು ಮಣ್ಣಿನ ಮಕ್ಕಳ ಬೆವರು ಮತ್ತು ರಕ್ತದ ಕಥೆ. ಉಪಗ್ರಹಗಳು ಮತ್ತು ತಂತ್ರಜ್ಞಾನಗಳು ನಮಗೆ ಮಾರ್ಗದರ್ಶಕವಾಗಬಹುದೇ ಹೊರತು, ರೈತನ ನೈಜ ಕಣ್ಣೀರನ್ನು ಅಳೆಯುವ ಮಾಪಕಗಳಾಗಲು ಸಾಧ್ಯವಿಲ್ಲ. ಗದಗ, ಹಾವೇರಿ, ಧಾರವಾಡ ಸೇರಿದಂತೆ ಕೈಬಿಟ್ಟುಹೋಗಿರುವ ಎಲ್ಲಾ ತಾಲೂಕುಗಳಿಗೆ ಆಗಿರುವ ಅನ್ಯಾಯವನ್ನು ತಕ್ಷಣವೇ ಸರಿಪಡಿಸಿ, ವಾಸ್ತವಿಕ ಹಾಗೂ ಮಾನವೀಯ ನೆಲೆಯಲ್ಲಿ ಬರ ಸಮೀಕ್ಷೆ ನಡೆಯಬೇಕಿದೆ.
ಕೇವಲ ಬರಗಾಲ ಪಟ್ಟಿಗೆ ಸೇರ್ಪಡೆ ಮಾಡುವ ಪಿಆರ್ ಸ್ಟಂಟ್ ಬದಲು ತ್ವರಿತಗತಿಯಲ್ಲಿ ಪರಿಹಾರ ವಿತರಣೆ ಮತ್ತು ಬೆಳೆ ಸಾಲದ ಸಂಪೂರ್ಣ ಬಡ್ಡಿ ಮನ್ನಾ ಮಾಡುವಂತಹ ದಿಟ್ಟ ಹೆಜ್ಜೆಗಳನ್ನು ಸರ್ಕಾರ ಇಡಬೇಕಿದೆ. ಹಗರಣದ ಹಾದಿ ಹಿಡಿಯುವ ಅಥವಾ ವರದಿಗಳನ್ನು ತಿರುಚುವ ಪ್ರಯತ್ನಗಳನ್ನು ಬಿಟ್ಟು, ಈ ಬಾರಿಯಾದರೂ ಸರ್ಕಾರವು ನೈಜ ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಂತ್ರಸ್ತ ರೈತರ ನಿಜವಾದ ಅಭಿವೃದ್ಧಿಗೆ ಕೈಜೋಡಿಸಲಿ ಎಂದು ಆಶಿಸೋಣ.
