Know Us

ಸಮೃದ್ಧ ಬೈಂದೂರು

ಕರ್ನಾಟಕದ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿ ಹೊದೆದು ಮಲಗಿದ ನಯನ ಮನೋಹರ ಭೂ ಪ್ರದೇಶ ನಮ್ಮ ಬೈಂದೂರು.

ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತದೆ. ಆಯಾ ಪ್ರದೇಶದ ಭೌಗೋಳಿಕ ಅಂಶಗಳಿಗೆ ಅನುಗುಣವಾಗಿ, ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ಬೆಂಗಳೂರು-ಮಂಗಳೂರಿನಂಥ ನಗರಗಳಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳಿಗೂ ಬೈಂದೂರಿನಂಥ ಮಲೆನಾಡ ಊರಿನಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳಿಗೂ ಬಹಳ ವ್ಯತ್ಯಾಸಗಳಿರ್ತವೆ. ಬೈಂದೂರಿನ ಪರಿಸರಕ್ಕೆ ಅನುಗುಣವಾಗಿ ಯಾವೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯೊಂದಿಗೆ, ‘ಸಮೃದ್ಧ ಬೈಂದೂರು’ ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.

ಪ್ರಾರಂಭಿಕ ಹಂತದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಾ, ಅವುಗಳಿಗೆ ಅಗತ್ಯ ಸ್ಪಂದನೆಗಳನ್ನು ನೀಡುತ್ತಾ ಬರಲಾಗುತ್ತಿದೆ. ಪ್ರತಿದಿನ ಸಂಜೆ ಆರು ಘಂಟೆಯ ನಂತರ ‘ಗ್ರಾಮ ಮಿಲನ್’ ಎಂಬ ಕಾರ್ಯಕ್ರಮದ ಅಡಿ, ದಿನಕ್ಕೊಂದು ಗ್ರಾಮಕ್ಕೆ ಹೋಗಿ ಅಲ್ಲಿನ ಜನರ ಅಹವಾಲುಗಳಿಗೆ ಕಿವಿಯಾಗುತ್ತಿದ್ದೇವೆ.

ನೇರವಾಗಿ ಬಂದು ಅಹವಾಲು ನೀಡಲು ಸಾಧ್ಯವಾಗದೇ ಇರುವವರಿಗಾಗಿ, ವಿಶೇಷವಾಗಿ ವಾಟ್ಸಾಪ್‌ ಮುಖಾಂತರವೂ ಸಂಪರ್ಕಿಸಲು ಅವಕಾಶ ಮಾಡಿಕೊಡಲಾಗಿದೆ. ಆ ಮೂಲಕ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ಬಂದಿವೆ. ಸಾವಿರಾರು ಅಹವಾಲುಗಳು ಬರುತ್ತಿರುವಾಗ, ಅವುಗಳ ಶೀಘ್ರ ವಿಲೇವಾರಿಗಾಗಿ ಸುಮಾರು ೧೩ ಜನರ ತಂಡವನ್ನೂ ಮಾಡಿಕೊಂಡಿದ್ದೇವೆ.

ಇನ್ನು, ಬೈಂದೂರು ಕ್ಷೇತ್ರದಲ್ಲಿ ಕೊಲ್ಲೂರು ದೇವಾಲಯ, ವಾರಾಹಿ ಯೋಜನೆ, ಡಿಗ್ರಿ ಕಾಲೇಜುಗಳು, ಕೆ ಪಿ ಸಿ ಪವರ್ ಪ್ರಾಜೆಕ್ಟ್ ಮುಂತಾದವುಗಳಿಂದ ಬರುವ ಕೋಟಿ-ಕೋಟಿ ಆದಾಯ ನೇರವಾಗಿ ಸರ್ಕಾರಕ್ಕೆ ಹೋಗುತ್ತದೆ. ಆದರೆ, ಆ ಆದಾಯದಲ್ಲಿ ಒಂದಷ್ಟು ಪಾಲು ಅವುಗಳಿಗೆ ಜಾಗ ಕೊಟ್ಟಂಥ ಬೈಂದೂರಿಗೂ ಬರಬೇಕು, ಇಲ್ಲಿನ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆ ಆದಯಾಯದ ವಿನಿಯೋಗ ಆಗಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ.

ಸಮೃದ್ಧ ಬೈಂದೂರಿಗಾಗಿ ಸುಮಾರು ೨೬ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸುವ ಕನಸು ನಮ್ಮದು. ಈ ನಿಟ್ಟಿನಲ್ಲಿ ಈಗಾಗಲೇ ಎಂಟು ಯೋಜನೆಗಳ ಕಾರ್ಯಾರಂಭವಾಗಿದೆ. ಅವುಗಳೆಂದರೆ,
1) ಮಾದರಿ ಸರಕಾರಿ ಶಾಲೆಗಳು
2) ಸ್ವಚ್ಛ ಬೈಂದೂರು
3) ಗೋ ಸಂರಕ್ಷಣೆ
4) ಕೆರೆ ಅಭಿವೃದ್ಧಿ ಮತ್ತು ಅಂತರ್ಜಲ ಮರುಪೂರಣ
5) ಇಕೋ ಟೂರಿಸಂ
6) ಒನ್ ವಿಲೇಜ್ ವನ್ ಪ್ರೊಡಕ್ಟ್
7) ಸ್ವ ಉದ್ಯೋಗ / ಗುಡಿ ಕೈಗಾರಿಕೆ
8) ವಿದ್ಯಾರ್ಥಿ ಪಥ

ಹೀಗೆ ಸುಂದರ ಬೈಂದೂರನ್ನು ಸಮೃದ್ಧ ಬೈಂದೂರನ್ನಾಗಿಸುವತ್ತ ನಮ್ಮ ಪಯಣ ಸಾಗುತ್ತಿದೆ.