ಸಕಲ ಮೂಲಭೂತ ಸೌಕರ್ಯಗಳನ್ನು ಕೊಡಮಾಡಿ ಸರಕಾರಿ ಶಾಲೆಗಳಲ್ಲಿ ಆಧುನಿಕ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ ಬೈಂದೂರು. ಸರಕಾರಿ ಶಾಲೆಗಳನ್ನು ಕನಿಷ್ಠವಾಗಿ ನೋಡದೆ ಗರಿಷ್ಠ ಮಟ್ಟದಲ್ಲಿ ಭೌತಿಕ ಸೌಕರ್ಯಗಳನ್ನು ಕೊಡಮಾಡುವ ಧ್ಯೇಯ ನಮ್ಮದು. ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ನಿರ್ಮಲ ಪರಿಸರ ಸಹಿತ ಸೂಕ್ತ ಶೌಚಾಲಯದ ವ್ಯವಸ್ಥೆಗಳನ್ನು ಇಲ್ಲಿ ಹಂತ ಹಂತವಾಗಿ ಪೂರೈಸಲಾಗುತ್ತಿದೆ. ಮಕ್ಕಳ ಸರ್ವಾಂಗೀಣ ಶೈಕ್ಷಣಿಕ ಆದ್ಯತೆಗಳನ್ನು ಗಮನದಲ್ಲಿರಿಸಿ ಶಾಲೆಯ ಕ್ರೀಡಾ ಮೈದಾನಗಳ ಅಭಿವೃದ್ಧಿ ಸಹಿತ ಇಲ್ಲಿನ ಗ್ರಂಥಾಲಯ, ಪ್ರಯೋಗಾಲಯಗಳಿಗೆ ಆದ್ಯತೆ ನೀಡುವುದು ನಮ್ಮ ಲಕ್ಷ್ಯ.
ಆಧುನಿಕ ಶಿಕ್ಷಣ ನೀತಿ ಅದರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸುವ ಬಗ್ಗೆ ಗಮನ ಹರಿಸಲಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಇತರೆ ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗಿಂತ ಎಲ್ಲಾ ಕಲಿಕಾ ವಲಯಗಳಲ್ಲೂ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಬೇಕು ಎಂಬುದು ನಮ್ಮ ಉದ್ದೇಶಗಳಲ್ಲೊಂದು.