ಪ್ರಾಕೃತಿಕವಾಗಿ ಸಮೃದ್ಧವಾಗಿರುವ ಬೈಂದೂರು ಕ್ಷೇತ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ವೈಶಿಷ್ಟ್ಯವನ್ನು ಹೊಂದಿದೆ. ಕ್ಷೇತ್ರದಲ್ಲಿರುವ ಪ್ರವಾಸಿ ಧಾಮಗಳಲ್ಲಿ ಇಕೋ ಟೂರಿಸಂಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕ್ಷೇತ್ರದಲ್ಲಿರುವ ಹಿನ್ನೀರು, ಸುಂದರ ಕರಾವಳಿ ತೀರ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಪೂರೈಸುವ ಮೂಲಕ ದೇಶ ವಿದೇಶಗಳ ಪ್ರವಾಸಿಗಳನ್ನು ಆಕರ್ಷಿಸುವತ್ತ ದೃಷ್ಠಿ ಹರಿಸಲಾಗಿದೆ.
ಪ್ರವಾಸೋದ್ಯಮ ಅದರಲ್ಲೂ ಇಕೋ ಟೂರಿಸಂ ಮೂಲಕ ಕರಕುಶಲ ಉತ್ಪನ್ನಗಳ ಮಾರುಕಟ್ಟೆ ಸಾಧ್ಯತೆಗಳು ವಿಪುಲವಾಗಲಿದ್ದು, ಗುಡಿ ಕೈಗಾರಿಕೆಗೂ ಉತ್ತೇಜನ ಸಿಗಲಿದೆ. ಬೆಂಗಳೂರು, ಮಂಗಳೂರು ಸಹಿತ ನಗರ ಪ್ರದೇಶಗಳ ಮಂದಿ ವಾರಾಂತ್ಯದಲ್ಲಿ ಬೈಂದೂರಿಗೆ ತಲುಪಿ ಇಲ್ಲಿನ ಕಡಲು, ಬೆಟ್ಟ, ಗುಡ್ಡ ಸಹಿತ ಅರಣ್ಯ ಪ್ರದೇಶಗಳನ್ನು ಅಸ್ವಾದಿಸುವ ರೀತಿಯ ಯೋಜನೆಗಳನ್ನು ರೂಪಿಸಲಾಗುವುದು. ಪುರಾಣ ಪ್ರಸಿದ್ಧ ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲಕ್ಕೂ ಹೊರ ರಾಜ್ಯದ ಹೆಚ್ಚಿನ ಸಂಖ್ಯೆಯ ಶ್ರದ್ಧಾಳುಗಳು ಆಗಮಿಸುತ್ತಿದ್ದು ಅವರನ್ನೂ ಕೂಡಾ ಇಕೋ ಟೂರಿಸಂನತ್ತ ಸೆಳೆಯಲು ವಿಶೇಷ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು.