ಸಾಧಕರ ಸಾಧನೆ ಕಿರಿಯರಿಗೆ ಪ್ರೇರಣೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಹುಟ್ಟಿಬೆಳೆದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸಾಧಕರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ 108ನೇ ಜನ್ಮ ದಿನೋತ್ಸವದ ಪ್ರಯುಕ್ತ ಅಯೋಜಿಸಿದ್ದ ಅಡಿಗ ಸಂಸ್ಮರಣೆ ಮತ್ತು ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.

ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶತಮಾನ ಪೂರೈಸಿದ ಅಡಿಗರು ಕಲಿತ ಮಾಧ್ಯಮಿಕ ಶಾಲೆ ಕುರಿತು ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಹೋಬಳಿದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಗೇರಿ ಸಮಷ್ಟಿ ಪುರಸ್ಕಾರ ಶಾಶ್ವತ ಫಲಕವನ್ನು ಕೆ. ಪುಂಡಲೀಕ್ ನಾಯಕ್ ಇವರಿಗೆ ನೀಡಲಾಯಿತು. ಶಾಲಾ ಮಕ್ಕಳಿಗೆ ರಂಗೋಲಿ ಪ್ರಾತ್ಯಕ್ಷಿಕೆಯೊಂದಿಗೆ ರಂಗೋಲಿ ಸ್ಪರ್ಧೆಯನ್ನು ಡಾ.ಭಾರತಿ ಮರವಂತೆ ನಡೆಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಬೈಂದೂರು ಸಿಟಿ ಅಧ್ಯಕ್ಷ ಚೈತ್ರಾ ಸತೀಶ್, ಬೈಂದೂರು ಅರಣ್ಯ ಇಲಾಖೆ ಗಸ್ತು ಅರಣ್ಯ ಪಾಲಕ ವಿಜಯ್, ಶಾಲಾ ಅಭಿವೃದ್ಧಿ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭಾಸ್ಕರ್ ದೇವಾಡಿಗ ಉಪಸ್ಥಿತರಿದ್ದರು.
ಡಾ.ಭಾರತಿ ಮರವಂತೆ ಸ್ವಾಗತಿಸಿ ವೀಣಾ ಹೆಗಡೆ ಮತ್ತು ಜಯ ಕಾರ್ಯಕ್ರಮ ನಿರೂಪಿಸಿದರೆ, ಸಹ ಶಿಕ್ಷಕರಾದ ಶಶಿರೇಖಾ ವಂದಿಸಿದರು.
ಸಂಜಿ ನಡೆದ ಸಮಾರೋಪ ಸಮಾರಂಭದಲ್ಲಿ ಚಿಂತಕಿ, ಲೇಖಕಿ ಡಾ. ರೇಖಾ ಬನ್ನಾಡಿ ಮತ್ತು ವಿಮರ್ಶಕ ರಾಜೀವ ನಾಯಕ್ ಉಪನ್ಯಾಸ ನೀಡಿದರು. ಸಾಹಿತಿ ಗಣೇಶ್ ಅಡಿಗರ ಕವಿತ್ವದ ಕುರಿತು ಮಾತನಾಡಿದರು. ಹಿರಿಯ ಕೃಷಿಕ ಭದ್ರಪ್ಪ ಗೌಡ ಎಂ.ಗೋಪಾಲಕೃಷ್ಣ ಅಡಿಗರ ಹಾಡುಗಳನ್ನು ಹಾಡಿದರು.
ಡಾ.ಗಣನಾಥ ಎಕ್ಕಾರು ಆಶಯ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಂದ್ರಶೇಖರ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಪಿ.ಪದ್ಮನಾಭ, ಡಾ.ಕಾರಂತ ಟ್ರಸ್ಟ್‌ನ ಸದಸ್ಯರಾದ ಡಾ.ಭಾರತಿ ಮರವಂತೆ, ಡಾ.ಚೇತನ್ ಶೆಟ್ಟಿ ಕೋವಾಡಿ, ಅಡಿಗ ಟ್ರಸ್ಟ್‌ನ ಪ್ರವರ್ತಕ ಜಯರಾಮ ಅಡಿಗ ಉಪಸ್ಥಿತರಿದ್ದರು.
