ವಿದ್ಯಾರ್ಥಿಗಳು ದೇಶದ ಆಸ್ತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಮಾರ್ಗದರ್ಶನ ಸಹಿತ ಮಾನವ ಸಂಪನ್ಮೂಲದ ಸದ್ಬಳಕೆಯತ್ತ ದೃಷ್ಠಿ ನೆಟ್ಟು ಅವರಿಗೆ ಬೇಕಾದ ಅಗತ್ಯ ಮಾರ್ಗದರ್ಶನವನ್ನು ಶಿಕ್ಷಣ ತಜ್ಞರಿಂದ ನೀಡಲಾಗುವುದು. ವಿದ್ಯಾರ್ಥಿ ಪಥವು ವಿದ್ಯಾರ್ಥಿಗಳಲ್ಲಿ ಅದರಲ್ಲೂ ಯುವ ಸಮುದಾಯದಲ್ಲಿ ಭವಿಷ್ಯದ ಬಗ್ಗೆ ಉತ್ತಮ ರೀತಿಯಲ್ಲಿ ಆಲೋಚಿಸುವ ಮತ್ತು ಸವಾಲನ್ನು ಎದುರಿಸುವ ಕೈಂಕರ್ಯದಲ್ಲಿ ಸಹಾಯಕವಾಗಲಿದೆ.
ಪದವಿಪೂರ್ವ ಶಿಕ್ಷಣದ ನಂತರ ಮುಂದೇನು? ಎಂಬ ಪ್ರಶ್ನೆಗೆ ಉತ್ತರವಾಗಿ, ಪದವಿ ಶಿಕ್ಷಣದ ನಂತರ ಉದ್ಯೋಗದ ಭರವಸೆಯೇನು? ಎಂಬುದಕ್ಕೆ ಅಶಾವಾದಿಗಳಾಗಿ ಅವಕಾಶಗಳತ್ತ ಬೆಳಕು ಹರಿಸುವ ಪ್ರಯತ್ನ ಈ ಮೂಲಕ ನಡೆಯಲಿದೆ. ವಿದ್ಯಾರ್ಥಿ ಸಮೂಹದಲ್ಲಿ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಈ ಪಥದಿಂದ ಆಗಲಿದೆ. ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುವ ಕ್ಷೇತ್ರದಲ್ಲಿ ವಿದ್ಯಾರ್ಥಿ ಮಿತ್ರರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಪ್ರತಿಭೆಗೆ ಅನುಸಾರವಾಗಿ ಪ್ರೋತ್ಸಾಹ ಮತ್ತು ಉತ್ತೇಜನವನ್ನು ನೀಡುವ ಕಾರ್ಯ ಇದರಿಂದಾಗಲಿದೆ. ಬೈಂದೂರು ಕ್ಷೇತ್ರದಲ್ಲಿ ಹೆಚ್ಚಿನ ಯುವ ಕ್ರೀಡಾ ಸಾಧಕರು ಇದ್ದು ಇವರ ಮಾರ್ಗದರ್ಶನವೂ ವಿದ್ಯಾರ್ಥಿ ಸಮೂಹದಲ್ಲಿ ಧನಾತ್ಮಕ ಪರಿಣಾಮವನ್ನು ಬೀರಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು.