ರಾಜ್ಯದಲ್ಲಿ ಇಪ್ಪತ್ತೊಂದು ಲಕ್ಷ ಸ್ವತ್ತುಗಳು ಅಧಿಕೃತ ಖಾತೆ ಹೊಂದಿದ್ದರೆ, 32 ಲಕ್ಷಕ್ಕೂ ಹೆಚ್ಚು ಅನಧಿಕೃತ ಸ್ವತ್ತುಗಳು ಅಧಿಕೃತ ಖಾತೆಗಳಾಗಲು ಕಾದುಕುಳಿತಿವೆ. ಹೀಗೆ ಅಳಿದುಳಿದಿರುವ ಎಲ್ಲ ಸ್ವತ್ತುಗಳಿಗೆ ಅಧಿಕೃತ ನೋಂದಣಿ ಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರ ಘೋಷಿಸಿರುವುದು, ಬಜೆಟ್ ಪೂರ್ವ ಮತ್ತು ನಿಗದಿತ ಅವಧಿಯೊಳಗೆ ಕಂದಾಯ ಸೇರಿ ವಿವಿಧ ಮೂಲಗಳಿಂದ ಆದಾಯ ಹೊಂದಿಸಲು ಮಾಡುತ್ತಿರುವ (ಒಳಿತೋ, ಕೆಡುಕೋ ತಿಳಿಯದಂತಹ ಭವಿಷ್ಯತ್ತಿನ ಪ್ರಶ್ನೆ ಇದರಲ್ಲಿದೆ!) ಮತ್ತೊಂದು ಬಗೆಯ ‘ಯೋಜನೆ’ ಇದಾಗಿದೆ.
ಇದರಿಂದ ಸುಮಾರು 4 ಸಾವಿರ ಕೋಟಿಯಷ್ಟು ಆದಾಯ ಹರಿದುಬರುತ್ತೆ ಎನ್ನಲಾಗಿದೆ! ಎಲ್ಲ ಭಾಗ್ಯಗಳಿಗೆ ಭಾಗ್ಯದ ಲಕ್ಷ್ಮೀ ಬಾರಮ್ಮ ಅಂದಂಗಾಯ್ತು. ಇದೀಗ ಎ-ಖಾತೆ, ಬಿ-ಖಾತೆ ಹಾಗೂ ಇ-ಖಾತೆಗಳ ಕತೆ ವ್ಯಥೆ.
ಕೃಷಿ ಆಧಾರಿತ ಬದುಕಿನ ಕರ್ನಾಟಕದಲ್ಲಿ ಕೃಷಿಭೂಮಿ ಕಡಿಮೆಯೇನಿಲ್ಲ. ಇಲ್ಲಿ, ಆಧುನಿಕ ಸೌಕರ್ಯ ಸೇರಿದಂತೆ, ಬಡಾವಣೆ ಇತ್ಯಾದಿಗಳನ್ನು ನಿರ್ಮಿಸಬೇಕಾದಲ್ಲಿ ಒಂದು ನಿರ್ದಿಷ್ಟ ಸಂಸ್ಥೆಯ ಮೂಲಕ ಎ-ಖಾತಾ ಪರವಾನಿಗೆ ಪಡೆಯಬೇಕಾಗುತ್ತದೆ. ಎ-ಖಾತಾ ಎಂದರೆ, ರೆವೆನ್ಯೂ ದಾಖಲೆಗೆ ಇರುವ ಒಂದು ಹೆಸರು ಇದಾಗಿದ್ದು, ಅಧಿಕೃತ ಲೇಔಟ್ (ಬಡಾವಣೆ) ಹೊಂದಿರುವ ಜಮೀನಿನ ದಾಖಲೆ ಎಂದು ನಾವು ಸಾಮಾನ್ಯವಾಗಿ ತಿಳಿಯಬಹುದು.
ಟೌನ್ ಪ್ಲಾನಿಂಗ್ ಕಾಯಿದೆಯಲ್ಲಿ ಬರುವ ಟೌನ್ ಪ್ಲಾನಿಂಗ್ ಅಥಾರಿಟಿಯು ಬಡಾವಣೆ ಗಳನ್ನು ಅನುಮೋದನೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ ಅಥವಾ ಸರಕಾರದ ಕೆಎಚ್‌ಬಿ, ಬಿಡಿಎ ಒಂದು ಬಡಾವಣೆ ನಿರ್ಮಿಸಬೇಕಾದರೆ, ಈ ಸಂಸ್ಥೆಗೆ ಒಂದು ನಿಗದಿತ ನೀಲನಕ್ಷೆ ನೀಡಿ, ನಿಗದಿತ ಶುಲ್ಕ ಕಟ್ಟಿ, ಕೃಷಿ ಜಮೀನನ್ನು ವಾಸಯೋಗ್ಯ, ವಾಣಿಜ್ಯ ಬಳಕೆಗೆ ಎಂದು ಅನುಮತಿ ಪಡೆಯಬೇಕಿರುತ್ತದೆ.
ಇಲ್ಲಿ ಅಧಿಕೃತ ಅನುಮತಿ ಪಡೆಯಬೇಕಿದ್ದರೆ, ಆ ಬಡಾವಣೆಯಲ್ಲಿ ಶೇ.55ರಷ್ಟು ವಾಸಕ್ಕೆ ಮೀಸಲಿಟ್ಟು. ಉಳಿದ ಶೇ.45ರಷ್ಟು ಜಾಗವನ್ನು ಸರಕಾರಕ್ಕೆ ಪರಿತ್ಯಾಜ್ಯ ಪತ್ರದ ಮೂಲಕ ಬಿಟ್ಟುಕೊಡಬೇಕಿರುತ್ತದೆ. ಅಂದರೆ, ಬಡಾವಣೆ ನಿರ್ಮಿಸುವವರು, ಪ್ರಾಧಿಕಾರವು ನಿಗದಿ ಮಾಡಿರುವ ರಸ್ತೆ, ಉದ್ಯಾನ, ಒಳಚರಂಡಿ ವ್ಯವಸ್ಥೆ, ಬೀದಿದೀಪ, ಕ್ಲಿನಿಕ್, ಆಟದ ಮೈದಾನ ಇತ್ಯಾದಿ ನಿರ್ಮಿಸಿ ಸರಕಾರಕ್ಕೆ ದಾಖಲೆ ಸಲ್ಲಿಸಿದಾಗ, ಇದಕ್ಕೆ ಸಿಗುವ ಪರವಾನಿಗೆ ದಾಖಲೆಯನ್ನು ನಾವು ಎ-ಖಾತಾ ಎಂದು ಕರೆಯಬಹುದಾಗಿದೆ.
ಇದರ ಡಿಜಿಟಲ್ ಆವೃತ್ತಿಯೇ ಇ-ಖಾತಾ ಎಂದಾಗಿದೆ. ಇದರ ನೊಂದಣಿಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲಾಗಿದೆ. ಮೇಲಿನಂತೆ ಶೇ.45ರಷ್ಟು ಜಾಗವನ್ನು ಮೀಸಲಿಡದೇ, ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಕನ್ವರ್ಷನ್ ಮಾಡಿಸದೇ ಅನಧಿಕೃತ ಸೈಟುಗಳಾಗಿ ಮಾರಾಟವಾಗಿದ್ದರೆ, ಸರಕಾರಕ್ಕೆ ಸಲ್ಲಬೇಕಾದ ರೆವೆನ್ಯೂ(ಕಂದಾಯ) ಕೊಡದೇ ಇರುವ ಬಡಾವಣೆಗಳನ್ನು ಬಿ-ಖಾತಾ (ರೆವೆನ್ಯೂ ಸೈಟ) ಎಂದು ಕರೆಯಬಹುದು.
ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಮತ್ತು ಅನಧಿಕೃತ ವ್ಯವಹಾರಗಳು ನಡೆದು ಹತ್ತಾರು ವಿಚಾರಗಳು ಕೋರ್ಟ್, ಕಚೇರಿ ಮೆಟ್ಟಿಲುಗಳನ್ನು ಸಹ ಏರಿವೆ. ಹೀಗಿದ್ದರೂ, ಪ್ರಸ್ತುತ ರಾಜ್ಯ ಸರಕಾರ, ಇಲ್ಲಿಯವರೆಗೆ ಆಗಿರುವುದನ್ನು ಬಿಟ್ಟುಬಿಡಿ, ಇನ್ನು ಮುಂದೆ ಅನಧಿಕೃತ ಬಡಾವಣೆ, ಮನೆಗಳ ನಿರ್ಮಾಣವನ್ನು ನಾವು ಸಹಿಸೋದಿಲ್ಲ. ಇಲ್ಲಿಂದ ಮುಂದೆ ಯಾವುದೇ ಅನಽಕೃತ ಬಡಾವಣೆ ತಲೆಯೆತ್ತಿದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಸರಕಾರ ಹೇಳಿಕೆ ಕೊಟ್ಟಿದೆ!
ಕಳೆದ 30 ವರ್ಷಗಳಿಂದ ನಡೆದುಕೊಂಡು ಬಂದಿರುವ ಬಹುದೊಡ್ಡ ದಂಧೆ ಮತ್ತು ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಬಿ-ಖಾತಾ ಆಗಿರುವ ಮತ್ತು ಬಿ-ಖಾತಾ ನೊಂದ ಣಿಯೂ ಆಗದಿರುವ ಸೈಟುಗಳಿವೆ. ಹೀಗಿದ್ದರೂ, ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು, ಒಂದು ಬಾರಿ ಎಲ್ಲರನ್ನೂ ಕ್ಷಮಿಸಿಬಿಡೋಣ, ಇದೊಂದು ಸಲ ಎಲ್ಲರಿಗೂ ಬಿ-ಖಾತಾ ಕೊಡುತ್ತೇವೆ. ಮುಂದೆ ಇನ್ನೆಂದೂ ರೆವೆನ್ಯೂ ಬಡಾವಣೆ ನಿರ್ಮಿಸಲು ಬಿಡೋ ಲ್ಲ ಎಂದಿದ್ದಾರೆ.
ರೆವೆನ್ಯೂ ಸೈಟುಗಳನ್ನು ನೊಂದಣಿ ಮಾಡಿಸಬೇಕಿದ್ದರೆ, ಸಾಲುಸಾಲು ಮಧ್ಯವರ್ತಿಗಳನ್ನು ಭೇಟಿಮಾಡಿ ಹಣ ಸುರಿಯಬೇಕಿತ್ತು, ಕಂದಾಯ ಕಟ್ಟಲಾಗುತ್ತಿರಲಿಲ್ಲ, ಇಂತಹ ಜಾಗ ಗಳನ್ನು ಖರೀದಿಸಬೇಕಿದ್ದರೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡುತ್ತಿರಲಿಲ್ಲ. ಹಾಗಾಗಿ, ಜನರು ಬಿ-ಖಾತಾ ಹೊಂದಲು ಯತ್ನಿಸುವುದು ಸಾಮಾನ್ಯವಾಗಿತ್ತು.
ಸದ್ಯಕ್ಕೆ ಇಂತಹ 32 ಲಕ್ಷಕ್ಕೂ ಅಧಿಕ ಆಸ್ತಿಗಳು ಅಧಿಕೃತ ದಾಖಲೆಗೆ ಕಾಯುತ್ತಿವೆ ಎನ್ನ ಲಾಗಿದೆ. ಮೂರು-ನಾಲ್ಕು ದಶಕಗಳಿಂದ ವಂಚಿಸುತ್ತಲೋ, ರೆವೆನ್ಯೂ ತಪ್ಪಿಸುತ್ತಲೋ ಬಂದಿರುವ ಹಿಂದಿನವರ ಅಪರಾಧಿತನ ಏನಾಗಬೇಕು ಎಂದು ಕೇಳಿದರೆ, ಸರ್ಕಾರ ಮತ್ತು ಕಂದಾಯ ಸಚಿವರ ಬಳಿ ಉತ್ತರವಿಲ್ಲ!
ನೊಂದಣಿ, ಕನ್ವರ್ಷನ್ ಆಗದಿರುವ, ಯಾವುದೇ ಬಗೆಯ 2024ರ ಸೆಪ್ಟೆಂಬರ್ 10ರ ಮುಂಚೆ ಇದ್ದಂತಹ ಅಷ್ಟೂ ಅನಧಿಕೃತ ಬಡಾವಣೆಗಳಿಗೆ, ರಾಜ್ಯ ಬಜೆಟ್ ಮಂಡನೆ ಮಾಡುವುದಕ್ಕೂ ಮೊದಲು ರಾಜ್ಯಾದ್ಯಂತ ಬಿ-ಖಾತಾ ಕೊಡಲಾಗುವುದು ಎಂದಿದೆ ಸರಕಾರ!
ಇದೆಲ್ಲವೂ ನಗರ ಪರಿಧಿಯಲ್ಲಿ ನಡೆದ ಮತ್ತು ಅಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ನಡೆದ – ನಡೆಯುತ್ತಿರುವ ವಿಚಾರವಾಗಿದೆ ಎಂದುಕೊಳ್ಳೋಣ. ಇದೇ ಮಾದರಿಯ ಸೂತ್ರವನ್ನು ರಾಜ್ಯದ ಇತರೆ ಭಾಗಗಳಿಗೆ, ಚಿಕ್ಕ ಜಿಗಳಿಗೆ, ಚಿಕ್ಕಚಿಕ್ಕ ಗ್ರಾಮಗಳಿಗೆ ಅನ್ವಯಿಸಿ ಜಾರಿಗೊಳಿಸಿ ದರೆ ಆಗುವ ಅನಾಹುತವನ್ನು ಎಂಥವರೂ ಊಹಿಸಿಕೊಳ್ಳಬಹುದು. ಏನು ಆಗಬಾರದಿತ್ತು ಎಂದು ಜನರು ಅಂದುಕೊಂಡಿದ್ದರೋ ಅದೇ ಆಗಿಬಿಟ್ಟಿದೆ. ಖಾತೆಗಳ ಗೋಜಲಿನ ಸರ್ಕಾರಿ ಕಿರಿಕಿರಿಯು ಇತರೆ ಭಾಗದ ಜನರಿಗೆ ಇನ್ನಿಲ್ಲದಂತೆ ಜೀವ ಹಿಂಡುತ್ತ, ಜಿಗೊಂದೊಂದು ಬಗೆಯ ಅಧ್ವಾನ, ಅನಾಹುತಗಳನ್ನು ಸೃಷ್ಟಿಸಿಬಿಟ್ಟಿದೆ.
ಈ ಮೊದಲು ಎಲ್ಲವೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಹಾಗೋ ಹೀಗೋ ಎಂಬಂತೆ ನಡೆಯುತ್ತಿತ್ತು. ಈಗ, ಕಂದಾಯ ಇಲಾಖೆಗೆ ಜವಾಬ್ದಾರಿ ವರ್ಗಾಯಿಸಿ, ಒಬ್ಬ ಅಧಿಕಾರಿ ಯನ್ನು ಇದಕ್ಕೆ ನೇಮಿಸಿದ್ದು, ಅನ್ಯಪ್ರದೇಶದ ವ್ಯಕ್ತಿಗೆ ಸ್ಥಳೀಯ ಸಮಸ್ಯೆಗಳು ಹೇಗೆ ಅರ್ಥ ವಾಗಬಲ್ಲವೋ ಎಂಬುದನ್ನು ನೇಮಿಸಿದವರೇ ಹೇಳಬೇಕು! ಕರಾವಳಿಯ ಸಮಸ್ಯೆ ಅರ್ಥ ಮಾಡಿಕೊಳ್ಳದಿರುವ ಅಧಿಕಾರಿಗಳಿಂದ ಹೈರಾಣಾಗುತ್ತಿರುವುದು ಮಾತ್ರ ಸ್ಥಳೀಯ ಕರಾವಳಿ ಗರು!
ಖಾತೆಗಳ ವಿಚಾರಕ್ಕೆ ಬಂದರೆ, ನಮೂನೆ-9 ಎಂಬುದನ್ನು ಡಿಸಿ ಕನ್ವರ್ಷನ್, ಗ್ರಾಮ ಪಂಚಾಯಿತಿ ಅನುಮತಿ, ಸರಕಾರಿ ಯೋಜನೆಗಳಿಂದ ಬಂದ ಜಾಗಗಳಿಗೆ ಮತ್ತು ನಮೂನೆ-11ಎ ಎಂದರೆ, ಭೂಮಿ, ಕಟ್ಟಡದ ತೆರಿಗೆಗಳ ಬೇಡಿಕೆ- ವಸೂಲಿ ರಿಜಿಸ್ಟರ್ ಮತ್ತು ನಮೂನೆ-11ಬಿ ಎಂದರೆ, ತೆರಿಗೆ ವಸೂಲಿ ರಿಜಿಸ್ಟರ್ ಮೂಲಕ ತಾತ್ಕಾಲಿಕವಾಗಿ ನೀಡುವ ನಮೂನೆ ಯಾಗಿದ್ದು, ಹೀಗೆ ಮೂರು ಪ್ರಕಾರದ ಸ್ವತ್ತು ನೊಂದಣಿ ನಮೂನೆಗಳು ಪಂಚಾಯ್ತಿ ವ್ಯಾಪ್ತಿ ಯಲ್ಲಿ ಬರುತ್ತವೆ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ, 1993ರ ಪ್ರಕಾರ, ಗ್ರಾಮ ಪಂಚಾಯಿತಿಗಳು ಆಸ್ತಿ ತೆರಿಗೆ ಸಂಗ್ರಹಿಸಲು ಮತ್ತು ಆಸ್ತಿ ವಹಿವಾಟುಗಳ ಮೇಲ್ವಿಚಾರಣೆ ಮಾಡಲು ಅಧಿಕಾರ ಹೊಂದಿವೆ. ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಕೃಷಿಯೇತರ ಆಸ್ತಿಗಳನ್ನು ನೋಂದಾ ಯಿಸಲು ನಮೂನೆ 9 (ಹೆಚ್ಚಿನ ಮಾಹಿತಿ ಕೇಳುವ ನಮೂನೆ- 10ನ್ನು ಸೇರಿ) ಮತ್ತು 11 ಅಗತ್ಯವಿದೆ. ಆಸ್ತಿ ನೋಂದಣಿಗಾಗಿ ಕಂದಾಯ ಇಲಾಖೆ 2013ರಲ್ಲಿ ಈ ನಮೂನೆಗಳನ್ನು ಕಡ್ಡಾಯಗೊಳಿಸಿತು.
ಹೀಗಾಗಿ, ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಅರ್ಜಿ ಸಲ್ಲಿಸುವ ನಾಗರಿಕರು ನೋಂದ ಣಿ ಅವಶ್ಯಕತೆಗಳನ್ನು ಅನುಸರಿಸಲು ಗ್ರಾಮ ಪಂಚಾಯತಿಗಳಿಂದ ನಮೂನೆ -9 ಮತ್ತು ನಮೂನೆ -11 ಅನ್ನು ಪಡೆಯಬೇಕಿದೆ.
ಕರ್ನಾಟಕದಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗಾಗಿ ಗ್ರಾಮ ಪಂಚಾಯತ್ ಫಾರ್ಮ್-9 ಅನ್ನು ಸೃಷ್ಟಿಸುವ ಅಧಿಕಾರ ಹೊಂದಿದೆ. ಇದನ್ನು ಖಾತಾ-ಎ ಎಂದೂ ಕರೆಯಲಾಗುತ್ತದೆ ಮತ್ತು ಇದರ ಅನುಷ್ಠಾನವನ್ನು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಬಜೆಟ್ ಮತ್ತು ಲೆಕ್ಕಪತ್ರ ನಿರ್ವಹಣೆ) ನಿಯಮಗಳು 2006ರ (ನಿಯಮ 28) ತಿದ್ದುಪಡಿ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ.
ಹೀಗಿದ್ದ ವಿಚಾರವನ್ನು ಈಗ ಕಂದಾಯ ಇಲಾಖೆಗೆ ವರ್ಗಾಯಿಸಿ, ಗ್ರಾಮೀಣಭಾಗದ ಜನರು ಇನ್ನಿಲ್ಲದ ಸಮಸ್ಯೆ ಎದುರಿಸುವಂತೆ ಮಾಡಿದ್ದಾರೆ. ಸದ್ಯ ಕರಾವಳಿ ಜಿಲ್ಲೆ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ನಡುವೆ, ಪ್ರಯೋಜನವಿಲ್ಲದ, ಆಡಳಿತ ವ್ಯವಸ್ಥೆ ನಿರ್ಮಿತ ಅಡೆತಡೆಗಳು ಮಾತ್ರ ಜಾಸ್ತಿಯೇ ಕಾಡುತ್ತಿವೆ. 25 ಸೆಂಟ್ಸ್ (1 ಸೆಂಟ್ ಜಮೀನು 435.5 ಚದುರ ಅಡಿಗೆ ಸಮ) ಜಮೀನಿನವರೆಗೆ ಗ್ರಾಮ ಪಂಚಾಯಿತಿಯಲ್ಲಿಯೇ ನೊಂದಾಯಿತ ಎಂಜನಿಯರ್ ಮಾಡಿಕೊಟ್ಟ ಏಕ ನಿವೇಶನ ನಕ್ಷೆ ವಿನ್ಯಾಸಕ್ಕೆ ಅನುಮೋದನೆ ನೀಡಲಾಗುತ್ತಿತ್ತು.
ಈಗ, ನಗರ-ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಹೊಣೆ ಹೊರಿಸಿ, ಇದರ ಕಚೇರಿಯನ್ನು ತಾಲೂಕು/ಜಿಲ್ಲಾ ಮುಖ್ಯಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಮೊದಲೇ, ಸಿಬ್ಬಂದಿಯ ಕೊರತೆ. ಇರುವ ಕೆಲಸಗಳನ್ನೇ ಸರಿಯಾದ ಸಮಯಕ್ಕೆ ಮಾಡಲಾಗದ ಸ್ಥಿತಿಯಲ್ಲಿರುವ ವ್ಯವಸ್ಥೆಗಳಲ್ಲಿ ಇದೊಂದು ಬೇರೆ ಹೊರೆ ಎಂಬಂತಾಗಿ, ಗ್ರಾಮೀಣ ಜನರು ಸರಿಯಾದ ಸಮಯಕ್ಕೆ ಇದರ ಸೇವೆ ಪಡೆಯಲಾಗುತ್ತಿಲ್ಲ. ಇಡೀ ದಿನ ಕಚೇರಿಯ ಮುಂದೆ ದುಡಿಮೆ ಬಿಟ್ಟು ನಿಂತರೂ, ಮತ್ತೆ ನಾಳೆ ಬನ್ನಿ, ಸರ್ವರ್ ಸಮಸ್ಯೆ, ಆ ಸಮಸ್ಯೆ-ಈ ಸಮಸ್ಯೆ ಎಂಬ ನೆಪ ಹೇಳಿ ಅದೇ ಕೆಲಸಕ್ಕೆ ವಾರಗಟ್ಟಲೇ ಅಲೆದಾಡುವಂತಾಗಿದೆ.
ಅತಿ ಗಂಭೀರ ಸಮಸ್ಯೆಯೆಂದರೆ, ಖಾಸಗಿ ರಸ್ತೆಗಳಾವುವು, ಪಂಚಾಯಿತಿಗೆ ಸೇರಿದ ರಸ್ತೆಗಳಾವುವು ಎಂಬ ಸ್ಪಷ್ಟತೆಯಿಲ್ಲದೆ ಭೂಪರಿವರ್ತನೆ ಸಮಯದಲ್ಲಿ ನಮೂದಿಸಲಾದ ಸಂಪರ್ಕ ರಸ್ತೆಗಳನ್ನೆಲ್ಲ (ಗ್ರಾಮಪಂಚಾಯಿತಿಗೆ ವರ್ಗಾವಣೆಯಾಗದಿದ್ದರೂ) ಪಂಚಾಯತ್ ರಸ್ತೆಗಳೆಂದು ದಾಖಲಿಸಲು ಇಲಾಖೆಯಿಂದ ಪ್ರಯತ್ನಗಳು ನಡೆಯುತ್ತಿರುವುದು ಮಾತ್ರ ಬಹುದೊಡ್ಡ ಗೊಂದಲಕ್ಕೆ ಕಾರಣವಾಗಿದೆ.
ಬೆಂಗಳೂರು ಮತ್ತು ಇತರೆ ಮಹಾನಗರಕ್ಕೆ ಹೊಂದಬಲ್ಲ ಯೋಜನೆಯನ್ನು ಗ್ರಾಮೀಣ ಭಾಗಕ್ಕೆ ತಂದು, ವಿನ್ಯಾಸ ಅನುಮೋದನೆ ನೀಡುವಾಗ, ಸಂಪರ್ಕ ರಸ್ತೆಗಳನ್ನು ದಾನಪತ್ರವಾಗಿ ನೀಡಲು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಪೂರ್ವಿಕರ ಎರಡು-ಮೂರು ತಲೆಮಾರಿನ ಆಸ್ತಿಯನ್ನು ಈಗ ಅದ್ಹೇಗೆ ಭೂಪರಿವರ್ತನೆಗೊಳಿಸಿ ದಾನಪತ್ರ ನೀಡಲು ಬರುತ್ತದೆ? ಮತ್ತು ಮೂಲ ವಾರಸುದಾರರ ಹೆಸರಿನ ಆಸ್ತಿಯಿದ್ದರೂ, ನಾಲ್ಕೈದು ಬಾರಿ ಮಾರಾಟವಾದ ಆಸ್ತಿಗೆ ಈಗಿನವರು ಅದ್ಹೇಗೆ ದಾನಪತ್ರ ಮಾಡಿಸಬೇಕು ಎಂಬ ಗೊಂದಲವನ್ನು ಸರಕಾರಿ ಅಧಿಕಾರಿಗಳು, ಕಂದಾಯ ಸಚಿವರು ಸಾರ್ವಜನಿಕರಿಗೆ ತಕ್ಷಣವೇ ಸ್ಪಷ್ಟನೆ ನೀಡಬೇಕಿದೆ.
ಎಲ್ಲೋ ದೂರದ ಕಚೇರಿಯಲ್ಲಿ ಅಧಿಕಾರಿಗಳು ಕುಳಿತು, ವಿನ್ಯಾಸಗಳ ಅನುಮೋದನೆಗೆ ಕುಂಟು ನೆಪ ಹೇಳುತ್ತ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಮೇಲಾಗಿ, ಇತರೆ ಜಿಲ್ಲೆಗಳಿಗಿಂತ ಕರಾವಳಿ ಜಿಲ್ಲೆಗಳು ಭೌಗೋಳಿಕವಾಗಿ ವಿಭಿನ್ನವಾಗಿದ್ದು, ಹೆಚ್ಚಾಗಿ ತುಂಡುಭೂಮಿಯನ್ನೇ ಹೊಂದಿರುವ ಜನರಿದ್ದಾರೆ. ವಿನ್ಯಾಸ ಅನುಮೋದನೆಗೆ ವಿಪರೀತ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ, ಆಸ್ತಿ ಮಾರಾಟಕ್ಕೆ, ಸಾಲಕ್ಕೆ ಸೇರಿದಂತೆ ಇತರೆ ಯಾವುದೇ ವ್ಯವಹಾರಕ್ಕೆ ಬಹುದೊಡ್ಡ ಅಡೆತಡೆಯಾಗುತ್ತಿದೆ.
ಕಾರ್ಕಳ, ಕಿನ್ನಿಗೋಳಿಯ ಜನರು ಕೋರ್ಟ್‌ಗೆ ಹೋಗಿ ತಮ್ಮ ಹಕ್ಕು ಸ್ಥಾಪಿಸಿಕೊಂಡಿದ್ದಾರೆ. ಇನ್ನು ಕೆಲವರು ಕೋರ್ಟಿನಲ್ಲಿ ಎರಡು ಮೂರು ವರ್ಷಗಳಿಂದ ಕೇಸು ನಡೆಸುತ್ತಿದ್ದಾರೆ. ಇದರಲ್ಲಿ 73ರ ವೃದ್ಧರೂ, ಶಸ್ತ್ರಚಿಕಿತ್ಸೆ ಹೊಂದಿರುವವರು ಇರುವುದು ಮಾತ್ರ ವಿಪ ರ್ಯಾಸ!
ಇದು ನಮ್ಮ ಕಂದಾಯ ಇಲಾಖೆಯ ಸ್ಥಿತಿಗತಿ. ಹಿಂದಿನವರನ್ನು ಕ್ಷಮಿಸುವುದಾದರೆ, ಪಂಚಾಯಿತಿಗೆ ಅಧಿಕೃತ ಕಂದಾಯಗಳನ್ನು ಕಟ್ಟಿಯೂ ಸರಕಾರದಿಂದ ಅಕ್ರಮವೆಂದು ಪರಿಗಣಿಸಿದ ಬಡಾವಣೆಯವರು ಸುಪ್ರೀಂಕೋರ್ಟ್ ವರೆಗೂ ಹೋಗಿದ್ದಾರೆ. 15 ವರ್ಷಗಳಿಂದ ನ್ಯಾಯಾಲಯದಲ್ಲಿರುವ ಇಂತಹ ಕೇಸುಗಳನ್ನು ಕ್ಷಮಿಸುವವರು ಯಾರು? ಇನ್ನು, ಜಮೀನುಗಳು ಇರುವ ಪಂಚಾಯಿತಿ ವ್ಯಾಪ್ತಿ ಬೇರೆ, ಮತ ಹಾಕುವ ವ್ಯಾಪ್ತಿ ಬೇರೆಯಾದ್ದರಿಂದ ಮತ ಪಡೆದ ಪಂಚಾಯಿತಿ ಸದಸ್ಯರಿಂದ ಆಗುತ್ತಿರುವ ಅನುಕೂಲವೂ ಅಷ್ಟಕ್ಕಷ್ಟೆ ಎನ್ನುತ್ತಿದ್ದಾರೆ ನೊಂದವರು.
ಇರುವ ಸಮಸ್ಯೆಗಳನ್ನೇ ಸರಿಪಡಿಸಿ, ಸುಗಮ-ಸರಳ ಆಡಳಿತ ನಡೆಸಬೇಕಾದ ಸಮಯದಲ್ಲಿ, ಆಡಳಿತ ಯಂತ್ರದಿಂದಲೇ ಹತ್ತಾರು ಕಗ್ಗಂಟುಗಳು ಸೃಷ್ಟಿಯಾಗುತ್ತಿರುವುದು ಜನಸಾಮಾನ್ಯರಿಗೆ ತಡೆಯಲಾರದ ಸಮಸ್ಯೆಯಾಗಿದೆ. ಮೊದಲೇ ಬೇಸತ್ತಿರುವ ಜನರು ಇಲಾಖಾವಾರು ಅಧಿಕಾರಿಗಳ ಕಚೇರಿಗೆ ಧಂಗೆಯೆದ್ದು, ಮುತ್ತಿಗೆ ಹಾಕಿ ಪ್ರತಿಭಟಿಸುವ ಹಂತಕ್ಕೆ ಸರಕಾರ, ಸಚಿವರು ಬಿಡಲಾರರು ಮತ್ತು ಸೂಕ್ತ ಪರಿಹಾರೋಪಾಯಗಳನ್ನು ಜನರಿಗೆ ನೀಡಬೇಕಾದುದು ಸಚಿವರ, ಆಡಳಿತ ಯಂತ್ರದ ಗುರುತರ ಜವಾಬ್ದಾರಿಯಾಗಿದೆ ಎಂಬುದನ್ನು ಸಂಬಂಧಿತರು ಅರಿತು ನಡೆಯಲಿ!