ಸರ್ಕಾರದ ಆರೋಗ್ಯ ಇಲಾಖೆಗಳ ನಿಯಮಗಳ ನಿರ್ಬಂಧನೆಗಳು ಗ್ರಾಮೀಣ ಭಾಗದ ಆರೋಗ್ಯ ಸಮಸ್ಯೆಗಳು ಇದೆಲ್ಲದರ ಪರಿಣಾಮವಾಗಿ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಇರುವ ಹಲವಾರು ಡಯಾಲಿಸಿಸ್ ಬಡ ರೋಗಿಗಳಿಗೆ ಬೈಂದೂರು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ತುರ್ತು ಚಿಕಿತ್ಸೆ ಮತ್ತು ವಿಶೇಷ ಆರೋಗ್ಯ ಸೇವೆಗಳ ಆರಂಭದ ಮೂಲಕ ನಿಟ್ಟುಸಿರು ಬಿಡುವಂತಾಗಿದೆ ಎಂದು ಸಮೃದ್ಧ ಬೈಂದೂರು ಜನ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ ಹೇಳಿದ್ದಾರೆ. ಶನಿವಾರ ಅಂಜಲಿ ಆಸ್ಪತ್ರೆಯಲ್ಲಿ ಹೊಸ ಅರೋಗ್ಯ ಸೇವೆಗಳನ್ನು ಉದ್ಘಾಟಿಸಿದ ಸಂದರ್ಭ ಅವರು ಮಾತನಾಡಿದರು.
ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಹೊಸ ಆರೋಗ್ಯ ಸೇವೆಗಳಿಂದ ವಂಚಿತವಾಗಿರುವ ಪ್ರದೇಶಗಳಿಗೆ ವೈದ್ಯಕೀಯ ಪ್ರವೇಶವನ್ನು ವಿಸ್ತರಿಸುವ ಮಹತ್ವವನ್ನು ಒತ್ತಿ ಹೇಳಿದರು. ಅಂಜಲಿ ಆಸ್ಪತ್ರೆಯ ಮುಖ್ಯಸ್ಥ ಡಾ. ಅಣ್ಣಪ್ಪ ಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಇದೇ ಸಂದರ್ಭ ಹೊಸ ಸೇವೆಗಳಿಗೆ ಕೈಜೋಡಿಸಿದ ದಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ನಾಕಟ್ಟೆ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಈ ಹೊಸ ಸೌಲಭ್ಯವು ಜೀವಗಳನ್ನು ಉಳಿಸುವಲ್ಲಿ ಮತ್ತು ಅಗತ್ಯ ತುರ್ತು ಸೇವೆಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಶೇಷ ಆರೈಕೆ ನೀಡುವ ಮಹತ್ವದ ಬಗ್ಗೆ ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅದಕ್ಕೆ ದಾನಿಗಳೂ ಕೈ ಜೋಡಿಸಬೇಕು ಎಂದು ಅವರು ಈ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಈ ಪ್ರದೇಶಕ್ಕೆ ವಿಶ್ವ ದರ್ಜೆಯ ಆರೋಗ್ಯ ಸೇವೆಗಳನ್ನು ತರುವ ಪ್ರಯತ್ನಗಳನ್ನು ಶ್ಲಾಘಿಸಿದರು.
ಮಾಹೆ ಬೋಧನಾ ಆಸ್ಪತ್ರೆಯ ಸಿಒಒ ಡಾ. ಆನಂದ್ ವೇಣುಗೋಪಾಲ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೊಲ್ಲೂರು ದೇವಳದ ಆಡಳಿತ ವ್ಯವಸ್ಥಾಪಕ ಬಾಬು ಶೆಟ್ಟಿ, ಡಿಹೆಚ್ಒ ಡಾ. ನಾಗಭೂಷಣ ಉಡುಪ, ಡಾ. ಟಿಎಚ್ಒ ಡಾ. ಪ್ರೇಮಾನಂದ ಮೊದಲಾದವರು ಉಪಸ್ಥಿತರಿದ್ದರು.