ವಿಬಿ-ಜಿ ರಾಮ್ ಜಿ ಯೋಜನೆ ನಿಯಮ ಬದಲಾವಣೆಗೆ ಶಾಸಕ ಗಂಟಿಹೊಳೆ ಆಗ್ರಹ

ಕುಂದಾಪುರ: ಕರಾವಳಿ ಜಿಲ್ಲೆಗಳ ಭೌಗೋಳಿಕ ಹಾಗೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿಬಿ-ಜಿ ರಾಮ್ ಜಿ ಯೋಜನೆಯ ನಿಯಮಗಳಲ್ಲಿ ಮಾರ್ಪಾಡು ಮಾಡಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ವಿಬಿ ಜಿ ರಾಮ್ ಜಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಇತರ ಭಾಗಗಳಿಗೆ ಅನ್ವಯಿಸುವ ನಿಯಮಗಳನ್ನೇ ಕರಾವಳಿಗೂ ಅನ್ವಯಿಸುವುದರಿಂದ ಹಲವು ಪ್ರಾಯೋಗಿಕ ಹಾಗೂ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಅಧಿಕಾರಿಗಳು ಸಮಸ್ಯೆಗಳನ್ನು ಗುರುತಿಸಿ ಕೂಡಲೇ ಸರ್ಕಾರದ ಗಮನಕ್ಕೆ ತರಬೇಕು. ಯೋಜನೆಯಲ್ಲಿ ನಿಯಮಗಳನ್ನು ಬಿಗಿಗೊಳಿಸಿರುವುದು ಸೋರಿಕೆ ಹಾಗೂ ದುರುಪಯೋಗ ತಡೆಯುವ ಉದ್ದೇಶದಿಂದಲೇ ಹೊರತು, ಕಾಮಗಾರಿಗಳ ಅನುಷ್ಠಾನಕ್ಕೆ ಅಡ್ಡಿಪಡಿಸುವುದಕ್ಕಲ್ಲ. ನರೇಗಾ ಯೋಜನೆಯಲ್ಲೂ ಇಂತಹ ಸಮಸ್ಯೆಗಳು ಎದುರಾದಾಗ ಸರ್ಕಾರದ ಗಮನಕ್ಕೆ ತಂದು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಅದೇ ರೀತಿ ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿನ ಸಮಸ್ಯೆಗಳ ಪಟ್ಟಿಮಾಡಿ ವರದಿ ಸಲ್ಲಿಸಬೇಕು. ಪಿಡಿಒಗಳ ಮೇಲೆ ಅನಗತ್ಯ ಒತ್ತಡ ಹೇರಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಯೋಜನೆಯಡಿ ಶಾಲಾ ಕಟ್ಟಡ, ವಾಚನಾಲಯ, ಅಂಗನವಾಡಿ ಸೇರಿದಂತೆ ಸಾರ್ವಜನಿಕ ಆಸ್ತಿಗಳ ನಿರ್ಮಾಣಕ್ಕೆ ಅವಕಾಶವಿದೆ. ನೀರಿನ ಸಮಸ್ಯೆ ಪರಿಹಾರಕ್ಕೂ ಆದ್ಯತೆ ನೀಡಬೇಕು. 60ಃ40 ಅನುಪಾತ ಸೇರಿದಂತೆ ಕೆಲವು ನಿಯಮಗಳ ಪಾಲನೆಯಲ್ಲಿ ಕರಾವಳಿ ಭಾಗದಲ್ಲಿ ಪ್ರಾಯೋಗಿಕ ತೊಂದರೆಗಳಿದ್ದು, ಅವುಗಳಿಗೆ ಅಗತ್ಯ ಮಾರ್ಪಾಡು ಮಾಡಬೇಕು. ಈ ವರ್ಷ ಕ್ರಿಯಾ ಯೋಜನೆ ಮಂಜೂರಾತಿ ವಿಳಂಬವಾಗಿದ್ದು, ಸದ್ಯ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ನರೇಗಾ ಯೋಜನೆಯಡಿ 266 ಹಾಗೂ ವಿಬಿ ಜಿ ರಾಮ್ ಜಿ ಯೋಜನೆಯಡಿ 318 ಕಾಮಗಾರಿಗಳನ್ನು ಗುರುತಿಸಲಾಗಿದೆ. ಕೈಬಿಟ್ಟ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುರೇಶ್ ತಿಳಿಸಿದರು.

ಎನ್‌ಎನ್‌ಎಂಎಸ್ ಆ್ಯಪ್, ಇಂಗು ಗುಂಡಿ ಅನುದಾನ ಕಡಿತ, ತಾಂತ್ರಿಕ ಮಂಜೂರಾತಿ, ಕೆ2 ಮೂಲಕ ಪಾವತಿ ಹಾಗೂ ಇಲಾಖಾವಾರು ಲಾಗಿನ್ ವ್ಯವಸ್ಥೆಯ ಕೊರತೆಯಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯವಿದೆ ಎಂದು ಜಿ.ಪಂ ಸಹಾಯಕ ನಿರ್ದೇಶಕ ವಿಜಯ ಶ್ಯಾಮ್ ಹೇಳಿದರು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆಗಳ ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲು ಅವಕಾಶವಿದ್ದರೂ, ಲಾಗಿನ್ ವ್ಯವಸ್ಥೆಯ ಕೊರತೆಯಿಂದ ಅಂದಾಜು ಪಟ್ಟಿ ತಯಾರಿಸಲು ತೊಂದರೆಯಾಗುತ್ತಿದೆ. ಯೋಜನೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಯಲು ಸ್ಥಳೀಯವಾಗಿಯೇ ಕೆಲಸ ಒದಗಿಸುವ ಉದ್ದೇಶದಿಂದ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಲಾಗಿನ್ ಸಮಸ್ಯೆಯಿಂದಾಗಿ ಕೆಲವು ಇಲಾಖೆಗಳು ಅಂದಾಜು ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಕುಂದಾಪುರ ತಾ.ಪಂ ಇಒ ಮಹೇಶ್ ಕೆ.ಜಿ, ಬೈಂದೂರು ತಾ.ಪಂ ಇಒ ನಾಗಶಯನ, ನರೇಗಾ ಸಹಾಯಕ ನಿರ್ದೇಶಕ ರಾಜೇಶ್ ಪಾಲ್ಗೊಂಡಿದ್ದರು.