ಕರ್ನಾಟಕ ರಾಜ್ಯ ಸರ್ಕಾರ ತನ್ನ ಬಿಟ್ಟಿ ಭಾಗ್ಯಗಳನ್ನ ಪೂರೈಸುವ ಆಲೋಚನೆಯಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಉತ್ತರಿಸದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ರಾಜ್ಯದ ಜನರ ದುರದೃಷ್ಟವೋ ಅಥವಾ ಕಾಕಥಾಳಿಯೋ ಗೊತ್ತಿಲ್ಲ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಜನ ಬರಗಾಲ ಅನುಭವಿಸಿದ್ದೇ ಹೆಚ್ಚು.ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು,ಉಷ್ಣತೆ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆ ಕುಂಟಿತವಾದ ಹಿನ್ನೆಲೆ ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿ ನಿರ್ಣಯಗಳನ್ನು ಕೈಗೊಂಡರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಹುಡುಕಬಹುದಾಗಿದೆ. ರಾಜ್ಯ ಸರ್ಕಾರಕ್ಕೆ ಲೋಡ್ ಶೆಡ್ಡಿಂಗ್ ತಲೆ ನೋವಾಗಿ ಪರಿಣಮಿಸಿದ್ದು, ಕೇಂದ್ರ ಹಾಗೂ ಹೊರ ರಾಜ್ಯಗಳನ್ನ ಅವಲಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಮೇಲೂ ಸಾಕಷ್ಟು ತೀವ್ರ ಪರಿಣಾಮ ಬೀರಿದ್ದು, ಸರ್ಕಾರಕ್ಕೆ ಈ ಸಮಸ್ಯೆ ಗಂಭೀರ ತಲೆ ನೋವಾಗಿ ಪರಿಣಮಿಸಿದೆ.ಕಳೆದ ತಿಂಗಳು ಜುಲೈನಲ್ಲಿ ಸರಿ ಸುಮಾರು 8 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ಬೇಡಿಕೆ ಪ್ರಮಾಣ ಇದೀಗ 16 ಸಾವಿರಕ್ಕೆ ತಲುಪಿದೆ. ಇದೆ ಕಾರಣದಿಂದ ಇದೀಗ ಸರ್ಕಾರ ವಿದ್ಯುತ್ ಬಳಕೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಮುಂಗಾರು ಮಳೆ ಈ ಬಾರಿ ನಿರಾಸೆಯನ್ನ ಉಂಟುಮಾಡಿರುವ ಪರಿಣಾಮ ಇಂಧನ ಇಲಾಖೆಗಳು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಹೊರ ರಾಜ್ಯದ ಮೇಲೆಯೇ ಸರ್ಕಾರ ಅಲಂಬನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ. ಜಲಶಕ್ತಿಯಿಂದ 2,380 ಮೆಗಾವಾಟ್, ಪವನಶಕ್ತಿಯಿಂದ 850 ಮೆಗಾವಾಟ್, ಸೌರಶಕ್ತಿಯಿಂದ 5,900 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದು, ಮಳೆ ಇಲ್ಲದೆಯಿರುವ ಕಾರಣದಿಂದ ಮತ್ತು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿದ್ಯುತ್ ಉತ್ಪಾದನೆಯಲ್ಲಿ ನಿರ್ದಿಷ್ಟ ಮಟ್ಟ ತಲುಪಲು ಸಾಧ್ಯವಾಗಲಿಲ್ಲ. ಮಳೆಗಾಲದಲ್ಲೇ ಲೋಡ್ ಶೆಡ್ಡಿಂಗ್ ಮಾಡುವ ಪರಿಸ್ಥಿತಿಗೆ ತಲುಪಿದರೆ ಮುಂದೆ ಬೇಸಿಗೆಯಲ್ಲಿ ವಾರವಿಡೀ ಗಟ್ಟಲೆ ವಿದ್ಯುತ್ ಇಲ್ಲದ ಪರಿಸ್ಥಿತಿ ರಾಜ್ಯಕ್ಕೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ.
ಶತಮಾನಗಳಿಂದ ಕಂಡು ಕೇಳರಿಯದ ದಾಖಲೆಯ ಮಳೆ ಕೊರತೆ : ಅನ್ನದಾತ ಕಂಗಾಲು
ಮುಂಗಾರು ಮಳೆ ರೈತರ ಪಾಲಿಗೆ ಅಮೃತವಿದ್ದಂತೆ, ಈ ಮಳೆಗಾಗಿ ಕಾಯುವ ದೇವರ ಪೂಜೆ,ದೈವಗಳಿಗೆ ಹರಕೆ, ಕಪ್ಪೆಗಳ ಮದುವೆ ಇಂತಹ ಅನೇಕ ಸಂಪ್ರದಾಯಗಳನ್ನು ಪಾಲಿಸುತ್ತ ವರುಣನ ಆಗಮನಕ್ಕಾಗಿ ಹಾತೊರೆಯುತ್ತಾರೆ. ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆಯ ಕೊರತೆ ಕಳೆದ 123 ವರ್ಷದಲ್ಲೂ ಇಷ್ಟೊಂದು ಪ್ರಮಾಣದ ಮಳೆ ಕೊರತೆಯಾಗಿಲ್ಲ ಎನ್ನುವುದು ಹವಾಮಾನ ತಜ್ಞರ ವರದಿಯಾಗಿದ್ದು, ಈ ವರದಿಯನ್ನು ನೋಡಿದ ನನಗೆ ಒಂದೊಮ್ಮೆ ಕಣ್ಣು ತೇವವಾಗ ತೊಡಗಿದವು. ಹೌದು ಕರ್ನಾಟಕದ ರೈತರ ಕಷ್ಟ ನಿಜಕ್ಕೂ ಹೇಳತೀರದಂತಾಗಿದೆ, ಒಂದೊಮ್ಮೆ ಅತಿವೃಷ್ಟಿ ಇನ್ನೊಮ್ಮೆ ಅನಾವೃಷ್ಟಿಯಲ್ಲಿ ಸಿಲುಕಿ ರೈತ ದಿನೇ ದಿನೇ ಕಣ್ಣೀರಲ್ಲಿ ಕೈತೊಳೆಯುವ ಸಂಧಿಗ್ನ ಪರಿಸ್ಥಿತಿಗೆ ತಲುಪಿದ್ದಾನೆ.ಆಗಸ್ಟ್ ತಿಂಗಳ ವರದಿಯನ್ನು ಗಮನಿಸುವುದಾದ್ರೆ ವಾಡಿಕೆ ಪ್ರಕಾರ 22 ಸೆ. ಮೀ ಮಳೆಯಾಗಬೇಕು ಆದರೆ ರಾಜ್ಯದಲ್ಲಿ ಆಗಿದ್ದು 6 ಸೆ. ಮೀ ಮಳೆ ಈ ಮೂಲಕ ಒಟ್ಟು 75% ಮಳೆ ಕೊರತೆ ರಾಜ್ಯವನ್ನು ಕಾಡಿದೆ. ಅಷ್ಟೇ ಅಲ್ಲದೆ ಹವಾಮಾನ ಇಲಾಖೆ ದಾಖಲೆಯ ಪ್ರಕಾರ ಈ ಪ್ರಮಾಣದ ಮಳೆ ಕೊರತೆ ದಾಖಲೆಗಳಲ್ಲೇ ಇಲ್ಲಾ ಎನ್ನುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಹಾಗೇ 2023 ರ ಆಗಸ್ಟ್ ಮಳೆ ಕೊರತೆ ಶತಮಾನದ ಮಳೆ ಕೊರತೆಯ ತಿಂಗಳು ಎನ್ನುವ ದಾಖಲೆಗೆ ಕಾರಣವಾಗಿದೆ. ಹವಾಮಾನ ಇಲಾಖೆ 1901 ರಲ್ಲಿ ದೇಶದ ಮಳೆ ಪ್ರಮಾಣವನ್ನು ದಾಖಲು ಮಾಡುವ ಕೆಲಸ ಆರಂಭಿಸಿತು. ಈ ದಾಖಲೆಗಳ ಪ್ರಕಾರ ಕಳೆದ 123 ವರ್ಷಗಳಲ್ಲೇ ಈ ಮಟ್ಟದ ಮಳೆ ಕೊರತೆಯಾಗಿಲ್ಲ ಎನ್ನುವುದು ನಿಜಕ್ಕೂ ಬೇಸರವನ್ನ ತರಿಸಿದೆ.1972 ಹಾಗೂ 2016 ರ ನಡುವೆ ಶೇಕಡಾ 43% ಮಳೆ ಕೊರತೆ ಕರ್ನಾಟಕವನ್ನ ಕಾಡಿತ್ತು. ಆ ಕಾಲಘಟ್ಟಕ್ಕೆ ಅದುವೇ ಶತಮಾನದ ಅತ್ಯಧಿಕ ಮಳೆ ಕೊರತೆಯಾಗಿತ್ತು. ಆದರೆ ಇದೀಗ ಈ ಹಿಂದಿನ ದಾಖಲೆಯನ್ನು ಆಳಿಸಿ ಹಾಕಿ ಹೊಸ ದಾಖಲೆಗೆ ಕಾರಣವಾಗಿದೆ.
ಬರಗಾಲದತ್ತ ಕರ್ನಾಟಕ..
ಈಗಾಗಲೇ ವರುಣನ ಮುನಿಸು ಕರ್ನಾಟಕದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು ಸರಿ ಸುಮಾರು 195 ತಾಲೂಕನ್ನು ಈಗಾಗಲೇ ಬರದ ಪರಿಸ್ಥಿತಿಯುಳ್ಳ ತಾಲೂಕು ಎಂದು ಘೋಷಣೆ ಮಾಡಲಾಗಿದೆ.ಇವುಗಳ ಪೈಕಿ 161 ತಾಲೂಕನ್ನು ತೀವ್ರ ಬರಗಾಲ ತಾಲೂಕು ಹಾಗೂ 34 ತಾಲೂಕನ್ನು ಸಾಧಾರಣ ಬರಗಾಲ ತಾಲೂಕು ಎಂದು ಘೋಷಿಸಲಾಗಿದೆ. ಈ ಬಾರಿ ನಮ್ಮ ಕ್ಷೇತ್ರ ಬೈಂದೂರನ್ನೂ ಬರಗಾಲ ತಾಲೂಕಿಗೆ ಸೇರಿಸಿ ಒಂದಿಷ್ಟು ಸಹಕಾರ ನೀಡುವಂತೆ ಮನವಿ ನೀಡಿದ್ದರು ಯಾವುದೇ ಪ್ರಾಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಾದರೂ ಸರ್ಕಾರ ಈ ಬೈಂದೂರು ಕ್ಷೇತ್ರದತ್ತ ಗಮನಹರಿಸಬೇಕಿದೆ.ರೈತ ಬೆಳೆದ ಬೆಳೆಗಳೆಲ್ಲವೂ ರೈತನ ಕೈ ಹಿಡಿಯುವುದು ಕಷ್ಟ ಸಾಧ್ಯ ಎನ್ನಲಾಗಿದೆ. ಒಂದು ವೇಳೆ ಇನ್ನೊಂದು ವಾರಗಳ ಕಾಲ ಉತ್ತಮ ಮಳೆ ಬಂದರೆ ಸರಿಸುಮಾರು 50 ರಿಂದ 60 ರಷ್ಟು ಬೆಳೆ ಉಳಿಯಬಹುದು ಎನ್ನಲಾಗಿದೆ. ಹಾಗೇ ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕೂಡ ಸಮರ್ಪಕವಾಗಿಲ್ಲದ ಕಾರಣ ರೈತರ ಪಾಲಿಗೆ ಈ ವರ್ಷ ನಿಜಕ್ಕೂ ಘನಘೋರ ವರ್ಷವಾಗಲಿದೆ. ರಾಗಿ ಭತ್ತ ಸೇರಿದಂತೆ ಅನೇಕ ಬೆಳೆಗೆ ಬಿತ್ತನೆಯ ಕೊರತೆ ಉಲ್ಬಣಿಸಿದ್ದು, ಮಳೆ ಕೊರತೆ ಪರಿಣಾಮವಾಗಿ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಭತ್ತದ ಬಿತ್ತನೆ ಕೊರತೆ ಉಂಟಾಗಿದ್ದು, ರಾಗಿ 3.5 ಲಕ್ಷ, ತೊಗರಿ 2.5 ಲಕ್ಷ, ಹೆಸರು 2.36 ಲಕ್ಷ, ಶೇಂಗಾ 93 ಸಾವಿರ ಹೆಕ್ಟೇರ್ ಕೊರತೆಯಾಗಿದ್ದು, ಅನ್ನದಾತನ ಪರಿಸ್ಥಿತಿ ನಿಜಕ್ಕೂ ಹೇಳತೀರದಂತಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಅನ್ನದಾತ ಬೆಳೆ ಮಿಮೆ ಮಾಡಿಸಿದ್ದು ಕೇಂದ್ರ ಸರ್ಕಾರದಿಂದ ಈ ಬೆಳವಣಿಗೆಗೆ ಪ್ರಶಂಸೆ ವ್ಯಕ್ತವಾಗಿದೆ. ಒಟ್ಟು 16 ಲಕ್ಷ ಜನ ಬೆಳೆ ವಿಮೆಯಲ್ಲಿ ನೊಂದಣಿ ಮಾಡಿಸಿದ್ದು, ಒಟ್ಟು ರಾಜ್ಯದ 194 ಗ್ರಾಮ ಪಂಚಾಯತ್ ಗಳಲ್ಲಿ 35.90 ಕೋಟಿ ರೂಪಾಯಿ ಪರಿಹಾರ ದೊರಕಲಿದೆ.ಇನ್ನೂ 15 -20 ದಿನಗಳಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ರೈತರಿಗೆ ಸಿಗಲಿದ್ದು, ಅನ್ನದಾತನ ಕೊಂಚ ತೃಪ್ತಿಗೆ ಈ ಬೆಳೆ ವಿಮೆ ಕಾರಣವಾಗಲಿದೆ.
ಮಳೆಗಾಲದಲ್ಲೂ ಉಷ್ಣತೆಗೆ ತತ್ತರಿಸಿದ ಕರ್ನಾಟಕ ಜನ.
ಆಗಸ್ಟ್ ತಿಂಗಳಲ್ಲಿ ಮಳೆ ವಿಪರೀತವಾಗಿ ಸುರಿದು ಭುವಿ ತುಂಬೆಲ್ಲಾ ಹಸಿರು ಕಾಣುವ ಪರ್ವಕಾಲ ಈ ಹಿಂದೆ ನಾವು ನೋಡಿದ್ದೆವು. ಆದರೆ ಈ ಬಾರಿ ಮಾತ್ರ ಕರ್ನಾಟಕ ಮಳೆಯಿಲ್ಲದೆ ತತ್ತರಿಸಿ ಹೋಗಿದೆ. ಆಗಸ್ಟ್ 16 ರ ವರೆಗಿನ ಉಷ್ಣತೆ ಗಮನಿಸುವುದಾದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ 31.8 ಡಿಗ್ರಿ ಗರಿಷ್ಟ ತಾಪಮಾನ ದಾಖಲಾಗಿದ್ದು, ಕಳೆದ ಹತ್ತು ವರ್ಷಗಳಲ್ಲೇ ದಾಖಲೆಯ ಉಷ್ಣತೆ ಇದಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಈ ವರ್ಷವಿಡೀ ಮಳೆ ಕೊರತೆಯಿಂದ ರಾಜ್ಯ ಸಂಪೂರ್ಣ ಬರಗಾಲ ಎದುರಿಸುವ ಹಂತಕ್ಕೆ ತಲುಪುವ ಮುನ್ಸೂಚನೆ ಇದ್ದು, ಈಗಾಗಲೇ ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆಗಾಲದಲ್ಲೇ ನೀರಿಗೆ ಜನ ಹಾಹಾಕಾರ ಅನುಭವಿಸುವ ಸನ್ನಿವೇಶ ಉಂಟಾಗಿದ್ದು, ಇನ್ನೂ ಬೇಸಿಗೆ ಸಮಯ ಈ ಬಾರಿ ಸಾಕಷ್ಟು ನೀರಿನ ಅಭಾವ ಕಾಣಿಸಲಿದ್ದು, ಅನ್ನದಾತನ ಪರಿಸ್ಥಿತಿ ಶೋಚನೀಯ ವಾಗಲಿದೆ.ಮುಂಬರುವ ಬೇಸಿಗೆಗಾಲಕ್ಕೆ ಈಗಲೇ ಸಮರ್ಪಕ ನೀರಿನ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿದ್ದು, ಈ ವಿಚಾರವಾಗಿ ಸರ್ಕಾರ ಅಸಡ್ಡೆ ತೋರಿದರೆ ಕರ್ನಾಟಕದಲ್ಲಿ ಬಹುದೊಡ್ಡ ದುರಂತಕ್ಕೆ ಸರ್ಕಾರ ನಾಂದಿ ಹಾಡಿದಂತಿರುತ್ತದೆ. ರೈತ ತನ್ನ ಬೆಳೆಯನ್ನು ನಂಬಿಕೊಂಡು ಸಾಲ ಮಾಡಿ ಬಿತ್ತನೆ ಮಾಡಿ ಪಸಲಿ ನಿರೀಕ್ಷೆ ಮಾಡುತ್ತಿದ್ದ, ಆದರೆ ಈ ಬಾರಿ ಅಸಲು ಇಲ್ಲಾ ಪಸಲು ಇಲ್ಲಾ ಎನ್ನುವಂತ ಪರಿಸ್ಥಿತಿ ರಾಜ್ಯದ ರೈತರನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ದಿನ ಕಳೆದಂತೆ ರೈತರ ಸಂಖ್ಯೆಯು ಕಡಿಮೆಯಾಗುತ್ತಿದ್ದು, ವರುಣನ ಮುನಿಸು ಹೀಗೆ ಮುಂದುವರಿದರೆ ರೈತ ಕೃಷಿಯನ್ನು ಬಿಟ್ಟು ಕೂಲಿ ಮಾಡಿ ಜೀವನ ನೆಡೆಸಬೇಕಾದ ಪರಿಸ್ಥಿತಿ ಉಂಟಾಗಬಹುದು.
ರೈತರ ಮನೋಬಲ ಹೆಚ್ಚಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ.
ಕರ್ನಾಟಕ ರಾಜ್ಯದ ರೈತ ಈಗಾಗಲೇ ಹತಾಶೆಗೆ ಸಿಲುಕಿದ್ದಾನೆ, ಈ ಸಂದರ್ಭದಲ್ಲಿ ಆತನ ಮನಸ್ಸು ವಿಚಲಿತವಾಗಿ ಆತ್ಮಹತ್ಯೆಯಂತಹ ಅನೇಕ ವಿಚಾರಗಳು ಮನಸ್ಸಿಗೆ ಗಾಢವಾಗಿ ಪ್ರಭಾವ ಬೀರುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಮನೋಬಲ ತುಂಬುವ ಕೆಲಸ ಸರ್ಕಾರಗಳಿಂದ ಆಗಬೇಕಿದೆ.ಕೃಷಿಯನ್ನ ನಂಬಿ ಕುಳಿತ ಅನ್ನದಾತನಿಗೆ ಪರಿಹಾರವಾಗಿ ಒಂದಿಷ್ಟು ಸಹಾಯ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಈಗಾಗಲೇ ಘೋಷಣೆಯಾಗಿರುವ ಯೋಜನೆಗಳು ಜನರಿಗೆ ತಲುಪುತ್ತಿದೆಯೇ ಇಲ್ಲವೇ ಎನ್ನುವುದರ ಬಗ್ಗೆ ಕೂಡ ಸರ್ಕಾರ ಗಮನಹರಿಸಬೇಕಿದೆ. ಈಗಾಗಲೇ ಬರದ ಪರಿಸ್ಥಿತಿ ರಾಜ್ಯವನ್ನು ಕಾಡುತ್ತಿದ್ದು ಇದಕ್ಕೆ ಸೂಕ್ತ ಸಮಿತಿಯನ್ನು ರಚಿಸಿ ಬಡ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಅನ್ನದಾತರ ಪರಿಸ್ಥಿತಿಗಳಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡಿ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನ ಮಾಡಬೇಕಿದೆ. ಇನ್ನೂ ರಾಜ್ಯದಲ್ಲಿ ಪವರ್ ಕಟ್ ಈಗಾಗಲೇ ಶುರುವಾಗಿದ್ದು ಆದಷ್ಟು ಬೇಗನೆ ಈ ಸಮಸ್ಯೆ ರಾಜ್ಯ ಸರ್ಕಾರ ಪರಿಹಾರ ನೀಡದೆ ಇದಲ್ಲಿ ಮುಂಬರುವ ದಿನಗಳಲ್ಲಿ ಸಾಕಷ್ಟು ಸಮಸ್ಯೆಯನ್ನ ಸರ್ಕಾರ ಎದುರಿಸಬೇಕಾಗುತ್ತದೆ. ಪ್ರಜೆಗಳ ಜೀವನವನ್ನ ರಕ್ಷಿಸಲೆಂದೇ ನೀವು ಅಧಿಕಾರ ಬಂದಿರುವುದು ಎನ್ನುವ ವಿಚಾರ ಆಗಾಗ ನಾವು ನೆನಪು ಮಾಡುವ ಪರಿಸ್ಥಿತಿ ನಿಮಗೆ ಬಾರದಿರಲಿ ಎನ್ನುವುದೇ ನಮ್ಮ ಆಶಯ.
ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು.