ಜನರು ತಮ್ಮ ಕಷ್ಟ-ಸುಖಗಳನ್ನು ತೊಡೆದು ಸಾಮಾಜಿಕ ಬದುಕಿಗೆ ಒಂದಿಷ್ಟು ಅನುಕೂಲ ಮಾಡಿಕೊಡುತ್ತಾರೆಂಬ ಭರವಸೆಯೊಂದಿಗೆ ಮತ ಹಾಕುವ ಮೂಲಕ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆರಿಸಿ ರಾಜಧಾನಿಗೆ ಕಳುಹಿಸುತ್ತಾರೆ.
ಇಂತಹ ಜನಪ್ರತಿನಿಧಿಗಳು, ಜನರ ಸಮಸ್ಯೆಗಳನ್ನು ಕಡಿಮೆ ಮಾಡಬೇಕೆ ಹೊರತು, ಇರುವ ಸಂಪನ್ಮೂಲಗಳನ್ನು ನಾಶಮಾಡುವಂತಹ ಹಾಗೂ ಮತ್ತಷ್ಟು ಸಮಸ್ಯೆಗಳನ್ನು ಹೆಚ್ಚಿಸುವಂತಹ ಕೆಲಸಗಳನ್ನು ಜನಪ್ರತಿನಿಧಿಗಳಾಗಲಿ, ಜನಸೇವೆಗೆಂದು ದೊಡ್ಡ ದೊಡ್ಡ ಹುದ್ದೆ ಸೇರುವ ಅಧಿಕಾರಿಗಳಾಗಲಿ ಮಾಡಬಾರದು.
ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆಯೆಂದರೆ, ರಾಜ್ಯದ ಪ್ರತಿಷ್ಠಿತ ಯೋಜನೆಯಾದ ಎತ್ತಿನಹೊಳೆ ನೀರಾವರಿ ಯೋಜನೆ.
ಇದೆಲ್ಲ ಆಯ್ತ್…! ಆದರೆ, ಆಳುವವರಿಗೆ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಪರಿಸರ ಪ್ರಜ್ಞೆ, ನಿಸರ್ಗದ ಮೇಲೆ ಕಾಳಜಿಯೂ ಇರಬೇಕಲ್ಲ.!!
ಸಸ್ಯ ಸಂಕುಲವನ್ನು ಬೆಳೆಸದೆ, ನೆಡದೆ…, ಈಗೇನಿದ್ದರೂ, ಸಾಲುಮರದ ತಿಮ್ಮಕ್ಕನಂಥವರನ್ನು ಹುಡುಕಿ ಅವರಿಗೆ ಪ್ರಶಸ್ತಿ ಕೊಟ್ಟು, ಪಕ್ಕದಲ್ಲಿ ನಿಂತು ಫೋಟೋ ಎತ್ಕೊಳ್ಳೋದೇ ಬಹುದೊಡ್ಡ ಸಾಧನೆಯಾಗಿರುವಾಗ, ಸಕಲ ಜೀವರಾಶಿಗಳಿಗೆ ಪೋಷಕರಂತೆ ಜೀವವಾಯುವನ್ನು ಕೊಟ್ಟು ಸಲಹುವ ಮರಗಳನ್ನು, ಕಾಡುಗಳನ್ನು ಕಡೆಯುವ ಮತ್ತು ಪರಿಸರ ಮತ್ತು ಜಲಚಕ್ರವನ್ನು (Nature Cycle & Water Memory Cycle ) ಅರಿಯದೇ ಜನರ ದುಡ್ಡಿನಲ್ಲಿ ವಯಕ್ತಿಕ ಲಾಭಾಂಶಗಳನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಸರ್ಕಾರಗಳಿಗೆ ಜನರೇ ಉತ್ತರಿಸಬೇಕಿದೆ.
ಇಲ್ಲಿನ ಸಮಸ್ಯೆಯೂ ಇದೆ ಆಗಿದೆ. ನಾನಿಲ್ಲಿ, ಆ ಪಕ್ಷ – ಈ ಪಕ್ಷ ಎನ್ನುತ್ತ, ಸರ್ಕಾರಗಳ ಸರಿತಪ್ಪುಗಳ ಬಗ್ಗೆ ಹೇಳುತ್ತಿಲ್ಲ. ಅವರವರು ಮಾಡಿದ ವಿಚಾರಗಳನ್ನು ವಾಸ್ತವವಾಗಿ ನಿಮ್ಮ ಮುಂದೆ ಇಡಬಯಸುತ್ತಿದ್ದೇನೆ.
ನೇತ್ರಾವತಿ – ಕರ್ನಾಟಕದ ಕರಾವಳಿಯ ಪ್ರಮುಖ ಜೀವನದಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ದೊಡ್ಡದು. ಕರ್ನಾಟಕದ ಚಿಕ್ಕಮಂಗಳೂರು ಜಿಲ್ಲೆಯ ಕುದುರೇಮುಖದಲ್ಲಿರುವ ಬಂಗ್ರಬಳಿಗೆ ಕಣಿವೆ, ಏಳನೀರು ಎಂಬಲ್ಲಿ ಪ್ರಾರಂಭಗೊಂಡು ಪಶ್ಚಿಮಾಭಿಮುಖವಾಗಿ ಸಾಗುತ್ತ, ಒಟ್ಟು ಸುಮಾರು 160 ಕಿಮೀ. ದೂರ ಹರಿದು ಮಂಗಳೂರಿನ ಪಡುಬದಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಸಹ ಇದೇ ನದಿಯ ನೀರನ್ನು ಬಳಸಲಾಗುತ್ತದೆ. ಇದರೊಟ್ಟಿಗೆ, ಇಲ್ಲಿನ ಜನರ ಮತ್ತೊಂದು ಪ್ರಮುಖ ಉದ್ಯೋಗವಾದ ಮೀನು ಕೃಷಿಗೆ ಮತ್ತು ಮೀನುಗಾರಿಕೆ ಸಹ ನಡೆಯುತ್ತದೆ.
ನೀರಾವರಿ ತಜ್ಞ ದಿವಂಗತ ಡಾ. ಜಿ.ಎಸ್. ಪರಮಶಿವಯ್ಯ ಅವರ ವರದಿ ಆಧರಿಸಿ ಶುರು ಮಾಡಿದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಆರಂಭದಿಂದಲೂ ಒಂದಲ್ಲ ಒಂದು ಆತಂಕ ಎದುರಾಗಿದೆ. 2014ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮಘಟ್ಟದಿಂದ ಕೋಲಾರಕ್ಕೆ ನೀರು ಹರಿಯುತ್ತದೆ ಎಂದು ಹೇಳಿ, ಒಂದು ದಶಕ ಕಳೆದರೂ ಒಂದೇ ಒಂದು ಹನಿ ನೀರು ಸಹ ಫಲಾನುಭವಿಗಳಿಗೆ ಸಿಕ್ಕಿಲ್ಲ.
ಯೋಜನೆಯ ಮೂಲ ಉದ್ದೇಶ: ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು.
ಎತ್ತಿನಹೊಳೆಯಲ್ಲಿ ಎರಡು, ಕಾಡುಮನೆ ಹಳ್ಳದ ಮೇಲೆ ಎರಡು, ಕರಿಹಳ್ಳದ ಮೇಲೆ ಒಂದು, ಹೊಂಗಡ ಹಳ್ಳದ ಮೇಲೆ ಒಂದು ಮತ್ತು ಅದರ ಉಪನದಿಗಳಲ್ಲಿ ಎರಡು ಸೇರಿದಂತೆ ಈ ಯೋಜನೆಯು ಎಂಟು ಸಣ್ಣ ಅಣೆಕಟ್ಟುಗಳ ನಿರ್ಮಾಣವನ್ನು ಒಳಗೊಂಡಿದೆ. ಈ ಶೇಖರಣಾ ಅಣೆಕಟ್ಟುಗಳಿಂದ, ನೀರನ್ನು 3 ವಿತರಣಾ ಕೋಣೆಗಳಿಗೆ ಪಂಪ್ ಮಾಡಿ, ಈ ಚೇಂಬರ್‌ಗಳಿಂದ ಸಕಲೇಶಪುರ ಸಮೀಪದ ಹರವನಹಳ್ಳಿ ಜಲಾಶಯಕ್ಕೆ ಮತ್ತೆ ನೀರು ಎತ್ತಲಾಗುತ್ತದೆ. ಇಲ್ಲಿಂದ ತುಮಕೂರು ಕಡೆಗೆ ನೀರು ಕೆಳಮುಖವಾಗಿ ಹರಿಯುತ್ತ, ದೇವರಾಯನದುರ್ಗದ ಬಳಿ ನೀರಿನ ಸಂಗ್ರಹಕ್ಕಾಗಿ ನಿರ್ಮಿಸಲಾಗಿರುವ ಜಲಾಶಯವನ್ನು ಸೇರುತ್ತದೆ. ಇಲ್ಲಿಂದ ನಂದಿದುರ್ಗದ ನದಿಗಳ ಮೂಲಕ ನೀರನ್ನು ಹರಿಸಲಾಗುತ್ತದೆ.
ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ. ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ–1,2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ.
ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್ ಮಾಡಿ ನೀರು ಹರಿಸಲಾಗುತ್ತದೆ. ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನುಷ್ಠಾನವಾಗಬೇಕು. 260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆಯಾಗಿದೆ. ಇದು ಸರ್ಕಾರದ ಯೋಜನಾ ಲೆಕ್ಕಾಚಾರ!
ಸರ್ಕಾರಿ ಯೋಜನೆಯ ಲೆಕ್ಕಚಾರವೇನೋ ಕೇಳಲು, ಓದಲು ಚಂದ ಅನಿಸ್ತದೆ. ಆದರೆ ವಾಸ್ತವದಲ್ಲಿ, ಪರ್ವತದ ತುದಿಯ ಮೇಲಿಂದ ಸಣ್ಣಗೆ ಝರಿಯಾಗಿ ಹರಿಯುವ ನದಿ ಕನಿಷ್ಠ ಕೆಲ 70-80 ಕಿಮೀ. ಗಳಷ್ಟು ದೂರ ಹೋದಾಗ ಸ್ವಲ್ಪ ಹಿರಿದಾಗುತ್ತ ನದಿಯಾಗಿ ಮತ್ತೂ ಮುಂದಕ್ಕೆ ಹರಿದಂತೆಲ್ಲ ದೊಡ್ಡ ನದಿಯಾಗಿ, ಮುಂದೆ ಸಮುದ್ರ ಸೇರುತ್ತದೆ. ಇದು ವಾಸ್ತವ. ಆದರಿಲ್ಲಿ, ಸಣ್ಣದಾಗಿ ಶುರುವಾಗುವ ತೊರೆಯಂತಹ ಜಾಗದಲ್ಲೇ ಯೋಜನೆ ಆರಂಬಿಸಿರುವುದರಿಂದ ಇದು ಮುಂದೆ ಬಹುದೊಡ್ಡ ಅಪಾಯಕ್ಕೆ ಎಡೆಮಾಡಿಕೊಡಬಹುದು. ಕೆಲ ಕಿ.ಮೀ.ಗಳ ದೂರಕ್ಕೆ ಸಮಗ್ರ ಅಧ್ಯಯನ ನಡೆಸಿ ಈ ಯೋಜನೆ ಮಾಡಿದ್ದರೆ ಚಿಂತೆಯಿರಲಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ವಿವಾದಿತ ಎತ್ತಿನಹೊಳೆ ಯೋಜನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (IISC) ಸೇರಿದಂತೆ ತಜ್ಞರು ಸೂಕ್ಷ್ಮ ಸಂವೇದಿ(Remote Sensing) ನಂತಹ ತಂತ್ರಜ್ಞಾನಗಳನ್ನು ಆಧರಿಸಿ ಪರಿಷ್ಕೃತ ವರದಿ ನೀಡಿದ್ದು, ಎತ್ತಿನಹೊಳೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ 9.55 ಟಿಎಂಸಿ ಮಾತ್ರ ಎಂದು ದೃಢೀಕರಿಸಿದ್ದಾರೆ. ವರದಿಯಲ್ಲಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ 9.55 ಟಿಎಂಸಿ ಇದ್ದು, ಅದರಲ್ಲಿ 5.84 ಟಿಎಂಸಿ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿಯೇ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಪುನರುಚ್ಚರಿಸಿದ್ದಾರೆ.
ರಿಮೋಟ್ ಸೆನ್ಸಿಂಗ್ ಮತ್ತು ಜಲವಿಜ್ಞಾನದ ದತ್ತಾಂಶಗಳನ್ನು ಆಧರಿಸಿ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಭಾರತೀಯ ಹವಾಮಾನ ಇಲಾಖೆ, ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ, ತಾಪಮಾನ, ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ, ಅದರಂತೆ ಎತ್ತಿನಹೊಳೆ ಜಲಾನಯನ ಪ್ರದೇಶದ ಒಟ್ಟಾರೆ ವ್ಯಾಪ್ತಿಯ ಪೈಕಿ ಶೇ. 45.08ರಷ್ಟು ಪರಿಸರ ಅರಣ್ಯ, ಶೇ. 29.05 ಕೃಷಿ, ಶೇ. 24.06 ಹುಲ್ಲುಗಾವಲು ಪ್ರದೇಶವಾಗಿದೆ. ಅಲ್ಲಿ ಬೀಳುವ ವಾರ್ಷಿಕ ಮಳೆ 3000-5000 ಮಿ.ಮೀ. ಆಗಿದ್ದು, 5.84 ಟಿಎಂಸಿ ನೀರು – ಕೃಷಿ, ತೋಟಗಾರಿಕೆ, ಜಾನುವಾರು ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೆ, ಉಳಿದ 2 ಟಿಎಂಸಿ ಜಲಚರಗಳಿಗೆ ಮೀಸಲಾಗಿದೆ ಎಂದು 14 ಪುಟಗಳ ತನ್ನ ವರದಿಯಲ್ಲಿ ತಿಳಿಸಿದೆ.
ಆಯ್ತು, ಜನೋಪಯೋಗಿ ನೀರಿನ ಕೆಲಸವಾಗುತ್ತಿದೆ ಎಂದುಕೊಂಡರೂ ಈ ಮೂಲಕ ಪರಿಸರ ನಾಶಕ್ಕೆ ಕೈಹಾಕಿದ್ದು ಯಾಕೆ ಎಂದು ಜನರು, ಪರಿಸರ ತಜ್ಞರು ಆಕ್ರೋಶಭರಿತರಾಗಿ ಪ್ರಶ್ನಿಸುತ್ತಿದ್ದಾರೆ. ಕಾರಣ, ಇದುವರೆಗೂ 3,000 ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ. ಇನ್ನೂ 2,300 ಕ್ಕೂ ಹೆಚ್ಚು ಮರಗಳು ಜೀವ ಕಳೆದುಕೊಳ್ಳಲಿವೆ. ಒಟ್ಟಾರೆ 14 ಹೆಕ್ಟೆರ್ ಅರಣ್ಯಭೂಮಿಯನ್ನು ಈ ಯೋಜನೆಗೆ ಉಪಯೋಗಿಸುತ್ತಿದ್ದು, ಇದಕ್ಕೆ ಪೂರಕವಾಗಿ ಸಸಿ ನೆಡುವ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಳ್ಳದಿರುವುದು ಕೂಡ ಈ ಯೋಜನೆಯ ನಿರ್ಲಕ್ಷ್ಯತೆ ಎದ್ದು ತೋರಿಸುತ್ತದೆ.
ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಸಾವಿರಾರು ಮರಗಳನ್ನು ಕಡಿಯುವುದರಿಂದ ಪರಿಸರ ಅಸಮತೋಲನಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ವಿಶ್ವದಲ್ಲೇ ಅಪರೂಪದ ಸಸ್ಯ ಮತ್ತು ವನ್ಯಜೀವಿಗಳಿರುವ ದಟ್ಟ ಅರಣ್ಯಪ್ರದೇಶವಾಗಿದೆ ಈ ಯೋಜನೆಯ ಆಯ್ಕೆ ಮತ್ತು ತಿರುವು ಅರಬ್ಬಿ ಸಮುದ್ರಕ್ಕೆ ಹರಿಯುವ ನೀರನ್ನು ಕಡಿಮೆ ಮಾಡುತ್ತದೆ ಮತ್ತು ಇದು ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಎಂದು ಪರಿಗಣಿಸಲಾದ ನೇತ್ರಾವತಿ ನದಿಯ ಲವಣಾಂಶವನ್ನು ಹೆಚ್ಚಿಸಬಹುದು ಎಂಬಿತ್ಯಾದಿ ಅಂಶಗಳನ್ನು ಮುಂದಿಟ್ಟುಕೊಂಡು, ಪರಿಸರ ಕಾರ್ಯಕರ್ತರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಬಾಗಿಲು ತಟ್ಟಿದರು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು, ಪಶ್ಚಿಮಘಟ್ಟದ ವಿಚಾರವಾಗಿ ಕೇಂದ್ರಸರ್ಕಾರವು ಮೃದುಧೋರಣೆ ತಳೆಯುತ್ತಿರುವುದು ಸರಿಯಲ್ಲ. ಈ ಕುರಿತು ಸರ್ಕಾರಕ್ಕೆ ಜವಾಬ್ದಾರಿಯೇ ಇದ್ದಂತಿಲ್ಲ’ ಎಂದಿತು.
ಯೋಜನೆಗಾಗಿ ಒಟ್ಟು 13.90 ಹೆಕ್ಟೆರ್ ಅರಣ್ಯ ಭೂಮಿ ಉಪಯೋಗಿಸುತ್ತಿದ್ದು, 4,995 ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸುತ್ತಿದ್ದಂತೆಯೇ, ‘ಯೋಜನೆ ಗಾಗಿ ಈಗಾಗಲೇ ಒಟ್ಟು 2,700 ಮರ ಕಡಿಯಲಾಗಿದೆ. ಅದಕ್ಕೆ ಬದಲಾಗಿ ಸಸಿ ನೆಡುವ ಕುರಿತು ಯೋಚಿಸಲಾಗಿದೆಯೇ’ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು, ಪಶ್ಚಿಮಘಟ್ಟದಲ್ಲಿನ ಜೀವವೈವಿಧ್ಯಕ್ಕೆ ಸಾಕಷ್ಟು ಧಕ್ಕೆ ಉಂಟಾಗಲಿದ್ದು, ಈ ಯೋಜನೆ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು. ಈ ಮೂಲಕ, ಈ ಪ್ರಕರಣ ಇನ್ನೂ ಎನ್.ಜಿ.ಟಿ.ಯಲ್ಲಿ ಇತ್ಯರ್ಥವಾಗಬೇಕಿದೆ.
ಇಂತಹ ಯೋಜನೆಗೆ, ಆರಂಭಿಕ ಅನುದಾನ ೧೨,೯೧೨ ಕೋಟಿಯಷ್ಟಿದ್ದು, ಆನಂತರದಲ್ಲಿ 25,000 ಕೋಟಿ ತಲುಪಿತು. ಈ ಮೂಲಕ ಬಲಾಢ್ಯ ಗುತ್ತಿಗೆದಾರರ ಪೋಷಣೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಬಹಿರಂಗವಾಗಿಯೇ ಕೇಳಿಬರುತ್ತಿದೆ. ಈ ಕುರಿತಂತೆ, ಪರಿಸರವಾದಿಗಳು ಈ ಕಾಮಗಾರಿಯಲ್ಲಿ ಬಂದಿರುವ ಸುಮಾರು 2 ಮಿಲಿಯನ್ ಟನ್ ಗಳಷ್ಟು ಕಲ್ಲು-ಮಣ್ಣಿನ ರಾಶಿಯನ್ನು ಹರಿಯುವ ನದಿಗೆ ಮತ್ತು ಸುರಿಯುವ ಮಳೆಯಲ್ಲಿ ಹರಿದು ಹೋಗುವಂತೆ ಹೇಗೆ ಬೇಕೋ ಹಾಗೆ ಬಿಸಾಡಿದ್ದಾರೆಂದು ಬಹಳ ಗಂಭೀರ ಆರೋಪ ಮಾಡಿದ್ದು ಜೊತೆಗೆ ಈ ಕುರಿತು ಪ್ರಶ್ನಿಸಿದವರನ್ನು ಮಟ್ಟಹಾಕುವ ಯತ್ನಗಳೂ ನಡೆದಿವೆ ಎಂದು ಪತ್ರಿಕೆಗಳಲ್ಲಿ ವರದಿಗಳಾಗಿವೆ.
ಇಂತಹ ಕಾಮಗಾರಿಗಳಲ್ಲಿ ಬರುವ ಮಣ್ಣು ಮತ್ತು ಕಲ್ಲಬಂಡೆಗಳನ್ನು ಒಂದು ಸೂಕ್ತ ಪ್ರದೇಶದಲ್ಲಿ ಸುರಿಯುತ್ತ ಅದನ್ನು ಬೆಟ್ಟಗುಡ್ಡದಂತೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಅದಕ್ಕೆ ಗಿಡಮರ, ಸಸ್ಯಗಳನ್ನು ನೆಡುವ ಒಂದು ಪ್ರಕ್ರಿಯೆಯನ್ನು ವಿದೇಶದಲ್ಲಿ ʼಮಕ್ ಬ್ಯಾಂಕ್ʼ ಎನ್ನುತ್ತಾರೆ. ದೇಶದ ಹಲವೆಡೆ ಇದನ್ನು ಮಾಡಲಾಗಿದೆ ಕೂಡ.
ಇದರೊಟ್ಟಿಗೆ ದೊಡ್ಡ ದೊಡ್ಡ ಕಬ್ಬಿಣದ ಪೈಪುಗಳನ್ನು ಸುಮ್ಮನೆ ಮಣ್ಣನ್ನು ಅಗೆದು ಅದರಲ್ಲಿ ಜೋಡಿಸುತ್ತ ಹೋಗಿದ್ದಾರೆ. ಈ ಪೈಪುಗಳು ಮಣ್ಣು, ಮಳೆ ಮತ್ತು ತೇವಾಂಶದೊಂದಿಗೆ ತುಕ್ಕುಹಿಡಿದು ಯಾವಾಗ ಬೇಕಾದರೂ ಅವಘಡ ಉಂಟಾಗಬಹುದು. ಜೊತೆಗೆ, ಕೇವಲ ಹೊರಬದಿಗೆ ಮಾಡುವಂತಹ ತೇಪೆ ವೆಲ್ಡಿಂಗ್ (Tack Weld) ಮಾಡಿದ್ದು ಕೂಡ ಕರ್ತವ್ಯಲೋಪ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ. ಇದರಲ್ಲಿ, ಮತ್ತೂ ಒಂದು ಅಪರಾಧವೆಂದರೆ, ನೀರಿನ ಹರಿಯುವಿಕೆಯ ಒತ್ತಡವನ್ನು (ಒಂದು ಪ್ರಮಾಣದ ನೀರು ಎಷ್ಟು ಎತ್ತರಕ್ಕೆ ಏರಿ ಹರಿಯುವಾಗ ಎಷ್ಟು ಒತ್ತಡ, ಪೈಪುಗಳ-ಯಂತ್ರಗಳ ಮೇಲೆ ಉಂಟಾಗುತ್ತದೆ ಎಂಬುದು) ವೈಜ್ಞಾನಿಕವಾಗಿ ಅಳೆಯದಿರುವುದು.
ದಶಕಗಳ ಕಾಲ ಉಳಿಯಬೇಕಾದ ಯೋಜನೆಯನ್ನು ತರಾತುರಿಯಲ್ಲಿ ಮಾಡಿರುವ ಕಾರಣವಾದರೂ ಏನು? ಎಂದು ಪ್ರಶ್ನಿಸುತ್ತ, ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಪರಿಸರವಾದಿಗಳು ಮತ್ತೆ ಕೋರ್ಟ್ ಮೆಟ್ಟಿಲೇರುವ ಯತ್ನದಲ್ಲಿದ್ದಾರೆಂದು ಮಾದ್ಯಮಗಳು ವರದಿ ಮಾಡಿವೆ.
ಇದು ಈ ಕತೆಯಾದರೆ, ಭೂಸ್ವಾಧೀನವಿಲ್ಲದೇ ಟೆಂಡರ್ ಕರೆದಿರುವುದು ಇನ್ನೊಂದು ವ್ಯಥೆ! ಈ ಯೋಜನೆಗೆ ಬೇಕಾಗಿರುವುದು 12,600 ಎಕರೆ ಜಾಗ. ಆದರೆ, ಸ್ವಾಧೀನಪಡಿಸಿಕೊಂಡಿದ್ದು 330 ಎಕರೆಗಳಷ್ಟು ಮಾತ್ರ! ಇದರೊಟ್ಟಿಗೆ, ಭೂಮಿಯ ಪರಿಹಾರದ ಮೊತ್ತ ಎಷ್ಟು ಎಂಬುದು ನಿಷ್ಕರ್ಷೆಯಾಗಿಲ್ಲ. ಇದಕ್ಕೆ ಅಂತ ಯಾವ ನಿಧಿಯೂ ಬಿಡುಗಡೆಯಾಗಿಲ್ಲ. ವರ್ಷ ಕಳೆದಂತೆ, ಪರಿಹಾರದ ಮೊತ್ತ, ಕಾಮಗಾರಿಯ ವೆಚ್ಚದ ಬಿಲ್ ಇತರೆ ಬಡ್ಡಿ ದುಪ್ಪಟ್ಟಾಗುತ್ತಲೇ ಇದೆ. ಯೋಜನೆಯ ಹನಿನೀರೂ ಮುಂದೆ ಚಲಿಸಿಲ್ಲ.
ಡಿಪಿಆರ್ ಸಿದ್ಧಪಡಿಸುವ ಪುಣ್ಯಾತ್ಮನನ್ನು ಸದಾ ನೆನಪಿಟ್ಟುಕೊಳ್ಳಬೇಕು. ಈ ಒಂದು ಇಡೀ ಯೋಜನೆಗೆ ಬೇಕಾಗುವ ವಿದ್ಯುತ್ ಖರ್ಚಿನ ಯಾವ ವಿವರವನ್ನು ಪರಿಗಣಿಸಿಲ್ಲ. ವಿದ್ಯುತ್ ಇಲ್ಲದೇ ಈ ಯೋಜನೆಯಲ್ಲಿ ಸಂಗ್ರಹವಾಗುವ ನೀರನ್ನು ಸೂಮಾರು 950 ಅಡಿಗಳಷ್ಟು ಮೇಲಕ್ಕೆ ಪಂಪ್ ಮಾಡಲು ಹೇಗೆ ಸಾಧ್ಯ ಎಂಬುದನ್ನು ಈ ಪುಣ್ಯಾತ್ಮರೇ ಹೇಳಬೇಕು.
ಇದೆಲ್ಲದರ ನಡುವೆ, ತೊರೆಗಳಿಂದ ನೀರನ್ನು ಮೇಲೆತ್ತಲು 8 ವೈರ್‌ಗಳನ್ನು ನಿರ್ಮಿಸುವ ಪ್ರದೇಶವು ಆನೆ -ಮಾನವ ಸಂಘರ್ಷ ಪ್ರದೇಶಗಳನ್ನು ಒಳಗೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶಗಳಾಗಿವೆ ಎಂದು ಸ್ಥಳೀಯರ ವಿರೋಧ ಕೂಡ ಆಗಿದೆ.
ಹೀಗೆ, ಒಟ್ಟಾರೆಯಾಗಿ ಯಾವೊಂದು ಪೂರ್ವಸಿದ್ಧತೆಯಿಲ್ಲದೇ, ಜನೋಪಯೋಗಿಯಲ್ಲದ, ಅಪಾರ ಹಣ ಮತ್ತು ಶ್ರಮ ಬಳಸಿ ದೀರ್ಘಕಾಲ ಬಳಕೆಗೆ ಬರದಂತಹ ಬಲವಂತದ ಯೋಜನೆ ಅಗತ್ಯವಿತ್ತೆ ಎಂಬುದು ನಾಡಿನ ಪ್ರಾಜ್ಞರ ಪ್ರಶ್ನೆ.
ಇದೆಲ್ಲದರ ಮದ್ಯೆ, 90 ಸಾವಿರ ಕೋಟಿ ವೆಚ್ಚದ ಶ್ರೀಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು ದಾಖಲೆ ಮಿತಿಯಲ್ಲಿ ಪೂರ್ಣಗೊಳಿಸಿದ ಅಲ್ಲಿನ ರಾಜಕೀಯ ಇಚ್ಛಾಶಕ್ತಿಗೆ ಒಂದು ಧನ್ಯವಾದ ಹೇಳಬೇಕೆನಿಸಿತು.