
ಬೈಂದೂರು ಕ್ಷೇತ್ರದಲ್ಲಿ ಜಾರಿಗೊಳಿಸಬೇಕಾದ ಮಗದೊಂದು ಜನಸ್ನೇಹಿ ಯೋಜನೆ ಸೇವೆಯೆ ಸೇತುವೆ. ಸಮೃದ್ಧ ಸಮಾಜದ ನಿರ್ಮಾಣ ಆಗಬೇಕೆಂದರೆ, ಸಮರ್ಥ ಆರೋಗ್ಯಪೂರ್ಣ ಸಶಕ್ತ ನಾಗರೀಕರ ಅಗತ್ಯವೂ ಇದೆ ಎಂಬ ಪರಿಕಲ್ಪನೆಯೊಂದಿಗೆ ಇದು ರಿಹ್ಯಾಬ್ ಸೆಂಟರ್ ನಂತೆ ಕಾರ್ಯ ನಿರ್ವಹಿಸುತ್ತದೆ. ಅಶಕ್ತರು, ನಿರ್ಗತಿಕರು, ಅನಾಥರು, ಎಂಡೋಸಲ್ಫಾನ್ ಪೀಡಿತರು, ವಿಶೇಷ ಚೇತನರು, ತೃತೀಯ ಲಿಂಗಿಗಳು , ಹೆಚ್. ಐ.ವಿ ಪೀಡಿತರು, ಅಪರೂಪದ ಅನಾರೋಗ್ಯ ಸಮಸ್ಯೆಗಳಾದ ಹಿಮೋಫಿಲಿಯಾ , ತಲಿಸೀಮಿಯಾ, ಸೀಕಲ್ ಸೆಲ್ ಡಿಸೀಸ್, ಬೆನ್ನುಹುರಿ ಸಮಸ್ಯೆ ಹಾಗೂ ಮೂಳೆ ಮುರಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಸಂತೈಸುವ ಕಾರ್ಯ ಮಾಡಿದಾಗ, ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿ ಉತ್ಸಾಹಭರಿತ ಜೀವನ ನಡೆಸಲು ಸಹಕಾರಿಯಾಗುತ್ತದೆ.
ಅದಕ್ಕಾಗಿ ಸಮೃದ್ಧ ಬೈಂದೂರು ಯೋಜನೆಯಡಿಯಲ್ಲಿ “ ಸೇವಾ ಸೇತು – ನಮ್ದೆ ಮನಿ ಮಕ್ಳು“ ಎಂಬ ಉಪ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬೆನ್ನು ಹುರಿ ಸಮಸ್ಯೆಯುಳ್ಳವರಿಗೆ ಪುನರ್ವಸತಿ ಕೇಂದ್ರ, ಡಯಾಲಿಸಿಸ್ ಸೆಂಟರ್ , ವಿಶೇಷ ಚೇತನರ ಬಗ್ಗೆ ಕಾಳಜಿ ಮತ್ತು ಆರೈಕೆ, ಅನಾಥಾಶ್ರಾಮ , ವೃದ್ದಾಶ್ರಮ , ನಿರ್ಗತಿಕರಿಗೆ ಆಶ್ರಯ ಕೇಂದ್ರ, ಎಂಡೋಸಲ್ಪಾನ್ ಆರೈಕೆ ಕೇಂದ್ರ – ಇವೆಲ್ಲವನ್ನೂ ಮಾಡಲು ಉದ್ದೆಶಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಮೇಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಅಗತ್ಯ ಆರೋಗ್ಯ ಚಿಕಿತ್ಸೆ , ಶುಶ್ರೂಷೆ , ಔಷಧೋಪಚಾರ ಮತ್ತು ಆರೈಕೆಯನ್ನು ಪಡೆಯುವಂತೆ ಮಾಡುವ ಆಲೋಚನೆಯನ್ನೂ ಮಾಡಲಾಗಿದೆ.
ಸಶಕ್ತ ಸಮಾಜ ನಿರ್ಮಾಣದಲ್ಲಿ ಕ್ಷೇತ್ರದ ಜನತೆಯ ಆರೋಗ್ಯ ಬಹುಮುಖ್ಯವಾಗಿದ್ದು ಈ ದಿಕ್ಕಿನಲ್ಲಿ ಯೋಜನೆಯು ಅನೇಕ ಕುಟುಂಬಗಳ ಕಣ್ಣೀರು ಒರೆಸಲಿದೆ. ಈ ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವವರು ಅವರ ಮನೆಗೆ ಹಾಗೂ ಸಮಾಜಕ್ಕೆ ಹೊರೆ ಎಂದು ಎನಿಸದೆ , ಆ ವ್ಯಕ್ತಿಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರು ಮತ್ತೆ ವಿಶ್ವಾಸದಿಂದ ಬದುಕುವ ರೀತಿಯಲ್ಲಿ ನೆಮ್ಮದಿಯನ್ನು ಆ ವ್ಯಕ್ತಿಗೂ ಮತ್ತು ಅವರ ಕುಟುಂಬದ ಸದಸ್ಯರಿಗೂ ಕಲ್ಪಿಸುವುದೆ ಈ ಯೋಜನೆಯ ಧ್ಯೇಯವಾಗಿದೆ.
ಸೇವಾಸೇತು ಯೋಜನೆಯಲ್ಲಿ ಮಾಡಲು ಉದ್ದೇಶಿಸಿರುವ ಕಾರ್ಯಗಳು :
1. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಡಯಾಲಿಸಿಸ್ ಕೇಂದ್ರದ ಅಗತ್ಯತೆ ತೀವ್ರವಾಗಿದ್ದು ಈ ನಿಟ್ಟಿನಲ್ಲಿ ಕ್ಷೇತ್ರದ ಮೂರು ಕಡೆಗಳಲ್ಲಿ ಡಯಾಲಿಸಿಸ್ ಕೇಂದ್ರ ಗಳನ್ನು ಸ್ಥಾಪಿಸುವುದು.
2. ಬೆನ್ನುಹುರಿ ಸಮಸ್ಯೆಗೊಳಗಾದ 40 ಮಂದಿ ಕ್ಷೇತ್ರದಲ್ಲಿದ್ದು ಇವರ ಬದುಕು ಬಹಳ ಶೋಚನೀಯವಾಗಿದೆ. ಇವರ ಆರೈಕೆ ದೃಷ್ಟಿಯಿಂದ ಪುನರ್ವಸತಿ ಕೇಂದ್ರ ಸ್ಥಾಪಿಸುವುದು.
3. ಹೆಚ್.ಐ.ವಿ. ಸೋಂಕಿತರು ಮತ್ತು ತೃತೀಯ ಲಿಂಗಿಗಳು ಸಮಾಜದ ಮುಖ್ಯ ವಾಹಿನಿಗೆ ಬರುವ ಉದ್ದೇಶದಿಂದ ಅಗತ್ಯ ಕೌನ್ಸಿಲಿಂಗ್ ಮತ್ತು ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದು.
4. ಎಂಡೋಸಲ್ಪಾನ್ ಪೀಡಿತರ ನೆಮ್ಮದಿಯ ಬದುಕಿಗಾಗಿ ಕ್ಷೇತ್ರದಲ್ಲಿ ಪುನಶ್ಚೇತನ ಮತ್ತು ಆರೈಕೆ ಕೇಂದ್ರ ಸ್ಥಾಪನೆ ಮಾಡುವುದು.
5. ಅನಾಥ ಮತ್ತು ಅಶಕ್ತ ಹಿರಿಯ ನಾಗರಿಕರು ಆತ್ಮವಿಶ್ವಾಸದ ಬದುಕನ್ನು ಸಾಗಿಸುವ ಸಲುವಾಗಿ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಸ್ಥಾಪಿಸುವುದು.
6. ವಿಶೇಷಚೇತನರು, ಅಶಕ್ತರು, ಹಿರಿಯನಾಗರಿಕರು , ಮಾನಸಿಕ ಅಸ್ವಸ್ಥರು, ಬುದ್ದಿ ಮಾಂದ್ಯರು ಹಾಗೂ ಬೆನ್ನುಹುರಿ ಸಮಸ್ಯೆಯುಳ್ಳವರನ್ನು ಸಮಾಜವು ಯಾವುದೇ ರೀತಿಯಲ್ಲೂ ನಿರ್ಲಕ್ಷಿಸಬಾರದೆಂಬ ಉದ್ದೇಶದಿಂದ ಇವರೆಲ್ಲರ ಗ್ರಾಮ ಮಟ್ಟದ ಸಮೀಕ್ಷೆಯನ್ನು ಮಾಡುವುದು .
7. ವಿಕಲಚೇತನರಿಗೆ ಹೊಂದಾಣಿಕೆ ಆಗುವಂತಹ ಸಾಧನ ಸಲಕರಣೆಗಳನ್ನು ನೀಡುವುದು.
8. ವಿಶೇಷಚೇತನ ವ್ಯಕ್ತಿಗಳಿಗೆ ಉದ್ಯೋಗ ಅವಕಾಶದೊಂದಿಗೆ ಅವರ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು. ಜೊತೆಗೆ ಬೆನ್ನುಹುರಿ ಸಮಸ್ಯೆ ಇರುವವರಿಗೆ ಬೆಡ್ ಸೋರ್ ಆಗದಂತೆ ತಡೆಯಲು ವಾಟರ್ ಬೆಡ್, ಆಂಟಿ ಬಯೊಟಿಕ್ ಮಾತ್ರೆಗಳು , ಕ್ಯಾತಟ್ರಿಕ್ ಮುಂತಾದ ವೈದ್ಯಕೀಯ ಸೌಲಭ್ಯಗಳು ಸುಲಭವಾಗಿ ದೊರೆಯುಂತೆ ಕ್ರಮವಹಿಸುವುದು.
9. ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ವಿಶೇಷಚೇತನರಿಗೆ ಆರೋಗ್ಯ ಪುನರ್ವಸತಿ, ವೈದ್ಯಕೀಯ ಉಪಚಾರ ಮತ್ತು ಆಪ್ತ ಸಮಾಲೋಚನೆ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸುವುದು.
10. ವಿಶೇಷಚೇತನರ ಸಮೀಕ್ಷೆಯನ್ನು ಪ್ರಥಮ ಆದ್ಯತೆಯಲ್ಲಿ ಕೈಗೊಂಡು, ಸರ್ಕಾರದ ಸಹಾಭಾಗಿತ್ವದಲ್ಲಿ 21 ರೀತಿಯ ವಿಶೇಷಚೇತನರನ್ನು ಗುರುತಿಸಿ ಅವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವುದು.
11. ಹಿಮೋಫೀಲಿಯಾ , ತಲಿಸೀಮಿಯಾ , ಮತ್ತು ಸೀಕಲ್ ಸೆಲ್ ಸಮಸ್ಯೆ ಹೊಂದಿರುವವರನ್ನು ಗುರುತಿಸುವುದು ಮತ್ತು ಅವರಿಗೆ ಪೂರಕ ಆರೈಕೆ ಮಾಡುವುದು
12. ವಿಶೇಷಚೇತನರ ಪುನರ್ವಸತಿಗಾಗಿ ಎಲ್ಲಾ ಇಲಾಖೆಯವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿ , ಅವರಿಗಾಗಿ ಪ್ರಾಯೋಗಿಕ ಕಾರ್ಯಕ್ರಮವನ್ನು ಬೈಂದೂರು ತಾಲೂಕಿನಿಂದಲೇ ಪ್ರಾರಂಭಿಸಿ ಮಾದರಿ ತಾಲೂಕನ್ನಾಗಿ ಮಾಡುವುದು.
ಈ ಎಲ್ಲಾ ಯೋಜನೆಗಳನ್ನು ಸರ್ಕಾರದ ಇಲಾಖೆಗಳು , ಸರ್ಕಾರೇತರ ಸಂಸ್ದೆಗಳು , ಖಾಸಗಿ ಆಸ್ಪತ್ರೆಗಳು, ದಾನಿಗಳು , ವೈದ್ಯರು, ವಿವಿಧ ಸಂಘ ಸಂಸ್ದೆಗಳು ಹಾಗೂ ಕ್ಷೇತ್ರದ ಜನತೆ ಮತ್ತು ಕಾರ್ಯಕರ್ತರ ಸಹಕಾರದಿಂದ ಮಾಡಲು ಉದ್ದೇಶಿಸಿದ್ದು, ಇದಕ್ಕೆ ನಿಮ್ಮೆಲ್ಲರ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿ ಮುಂದಡಿ ಇಡುತ್ತಿದ್ದೇವೆ. ಬನ್ನಿ, ಬೈಂದೂರನ್ನು ಸಮೃದ್ದಗೊಳಿಸುವತ್ತ ಜೊತೆಯಾಗಿ ಹೆಜ್ಜೆ ಹಾಕೋಣ.