300 ಟ್ರೀಸ್

ಇದು ಸಮೃದ್ಧ ಬೈಂದೂರಿನ ವಿನೂತನ ಯೋಜನೆಗಳಲ್ಲೊಂದು. ಆಧುನಿಕ ಕಾಲಘಟ್ಟದಲ್ಲಿ ಸರಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳಿಗೆ ಉತ್ತೇಜನ ನೀಡುವುದರ ಜೊತೆಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸುವ ಪ್ರಯತ್ನವೇ ಈ ಯೋಜನೆ. ಬೈಂದೂರು ಕ್ಷೇತ್ರದಲ್ಲಿರುವ ಇಂತಹ ಸರಕಾರಿ ಕನ್ನಡ ಶಾಲೆಗಳನ್ನು ಗುರುತಿಸಿ, ಅಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಇರಾದೆ ಸಮೃದ್ಧ ಬೈಂದೂರಿನದ್ದು. ಕನ್ನಡ ಕಲಿಕೆಯ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಗ್ರಾಮೀಣ ಸೊಗಡು ಸಹಿತ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ 300 ಟ್ರೀಸ್‌ ಮೂಲಕ ನಡೆಯಲಿದೆ.

ಈಗಾಗಲೇ ಹಲವು ಮಂದಿ ಈ ಯೋಜನೆಗೆ ಆರ್ಥಿಕ ನೆರವು ಮತ್ತು ಸಹಕಾರವನ್ನು ನೀಡಿದ್ದು ಶಾಲೆಗಳ ಗುರುತಿಸುವಿಕೆ ಮತ್ತು ಆದ್ಯತೆಯ ಮೇರೆಗೆ ಮೂಲ ಸೌಕರ್ಯವನ್ನು ಕಲ್ಪಿಸುವ ಕಾರ್ಯ ಆರಂಭಗೊಂಡಿದೆ. ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವುದು 300 ಟ್ರೀಸ್‌ ಯೋಜನೆಗೆ ಗುರಿಯಾಗಿದೆ. ಶಿಕ್ಷಣದ ಜೊತೆಜೊತೆಯಲ್ಲಿ ಸ್ವಚ್ಛತೆ, ವ್ಯಕ್ತಿತ್ವ ವಿಕಸನ, ಕ್ರೀಡೆ ಸಹಿತ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ಕೆ 300 ಟ್ರೀಸ್‌ ಸಹಕಾರಿಯಾಗಲಿದೆ. ಪ್ರಥಮ ಹಂತದಲ್ಲಿ ಉತ್ತಮ 30 ಶಾಲೆಗಳನ್ನು ಗುರುತಿಸಿ ಎರಡನೇ ಹಂತದಲ್ಲಿ ನಿರ್ದಿಷ್ಟ ಶಾಲೆಗೇ ಏನು ಅವಶ್ಯಕತೆ ಇದೆಯೋ ಅದನ್ನು ಕಲ್ಪಿಸುವ ಪ್ರಯತ್ನ ನಡೆಯಲಿದೆ. ಆಧುನಿಕ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಗುಂಗನ್ನು ತಪ್ಪಿಸು ಉದ್ದೇಶವೂ ಇದೆ. ಮೂರನೇ ಹಂತದಲ್ಲಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಒಟ್ಟು ಮೂರು ಶಾಲೆಗಳನ್ನು ರಾಜ್ಯಕ್ಕೆ ಪರಿಚಯಿಸುವ ಕಾರ್ಯವೂ ನಡೆಯಲಿದೆ ಮಾತ್ರವಲ್ಲ ಇವುಗಳನ್ನು ಮಾದರಿ ಶಾಲೆಗಳೆಂದು ಘೋಷಿಸಲಾಗುತ್ತದೆ.

ಈ ಯೋಜನೆಯ ಮೂಲಕ ಕನ್ನಡ ಭಾಷಾ ಕಲಿಕೆಗೆ ಉತ್ತೇಜನ, ಕನ್ನಡ ಶಿಕ್ಷಕರಿಗೆ ಪ್ರೋತ್ಸಾಹ ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ನಡೆಯಲಿದೆ. ದೇಶದ ಪ್ರಾಚೀನ ಗುರುಕುಲ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳನ್ನು ಶಾಲೆಗಳಲ್ಲಿ ಅಳವಡಿಸಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಉದ್ದೇಶವೂ 300 ಟ್ರೀಸ್ ಯೋಜನೆಯದ್ದು.