
ಬಾಲ್ಯದಿಂದಲೂ ನಾಟಕಗಳಲ್ಲಿ ಆಭಿನಯ, ನಿರ್ದೇಶನ, ಗೀತ ರಚನೆ, ಸಂಗೀತ ಸಂಯೋಜನೆ ಸಂಗೀತ ನಿರ್ದೇಶನದಲ್ಲಿ ಪಳಗಿದ ಹಿರಿಯ ರಂಗಕರ್ಮಿ ಶ್ರೀ ಯು. ಶ್ರೀನಿವಾಸ ಪ್ರಭು ಅವರು ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರು., 2000ರಲ್ಲಿ ಉದ್ಯೋಗದಲ್ಲಿ ಸ್ವಯಂ ನಿವೃತ್ತಿ ಪಡೆದ ಬಳಿಕ ಕಲಾರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು. ಅವರು ಹುಟ್ಟಿದ್ದು ಕುಂದಾಪುರದ ಉಪ್ಪುಂದದಲ್ಲಿ 20.12.1952ರಲ್ಲಿ. ಇವರ ತಂದೆ ದೇವಿದಾಸ ಪ್ರಭು ಮತ್ತು ತಾಯಿ ಲಕ್ಷ್ಮಿ.
ಶ್ರೀ ಪ್ರಭು ಅವರು ಕನ್ನಡ, ಕೊಂಕಣಿ, ಇಂಗ್ಲಿಷ್ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ‘ಮೀನಿನ ಹೆಜ್ಜೆ’, ‘ಹೂವು ಮುಳ್ಳು’, ‘ಗೌಡ್ರ ಗದ್ದಲ’, ‘ಬೇಲಿ ಹಣ್ಣು’, ‘ಪುತ್ಥಳಿ’, ‘ಮಾಂತರೇಲಿ ವಾರ್ಡಿಕ್ ಅಳಿಯ ರಾಮರಾಯ ಇತರ ನಾಟಕಗಳಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ‘ಗುರುದಕ್ಷಿಣಿ’, ‘ಗೋವಿನ ಗೀತೆ’, ‘ಪುಣ್ಯಕೋಟಿ’, ‘ಕೃಷ್ಣಾವತಾರ’ ಇತರ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ಅಷ್ಟಲಕ್ಷ್ಮಿಯರು’, ‘ಕಿಸಾಗೌತಮಿ, ಇತರ ಗೀತರೂಪಕಗಳನ್ನೂ ನಿರ್ದೇಶಿಸಿದ್ದಾರೆ. ಯಕ್ಷಗಾನ, ತಬಲ, ಭರತನಾಟ್ಯ, ಯಕ್ಷಗಾನ, ಹಾರ್ಮೋನಿಯಂ ಕೀಬೋರ್ಡ್, ಡೋಲಕ್‌ಗಳಲ್ಲಿಯೂ ಪರಿಣತಿ ಹೊಂದಿದ್ದಾರೆ. 38 ವರ್ಷದಿಂದ ಬೈಂದೂರಿನ ಕಲಾ ಸಂಸ್ಥೆ ಲಾವಣ್ಯ ವನ್ನು ಮುನ್ನಡೆಸಿಕೊಂಡು ಬರುತಿದ್ದಾರೆ. ಶ್ರೀ ಯು. ಶ್ರೀನಿವಾಸ ಪ್ರಭು ಅವರಿಗೆ 2013ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಬೆಳಗಾವಿಯಲ್ಲಿ 2011ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಂಗಗೀತೆಗಳ ಕಾರ್ಯಕ್ರಮವನ್ನು ಶ್ರೀ ಪ್ರಭು ಅವರು ನಡೆಸಿಕೊಟ್ಟಿದ್ದರು. ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಿರ್ದೇಶನಕ್ಕೆ ಮೂರು, ಶ್ರೇಷ್ಠ ಸಂಗೀತಕ್ಕೆ 17 ಪಾರಿತೋಷಕಗಳು ಶ್ರೀ ಪ್ರಭು ಅವರಿಗೆ ಒಲಿದಿವೆ.
