ಕುಂದಾಪುರ: ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರಿಗೆ ಅಭಿನಂದನೆ, ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ ವಿಶಿಷ್ಟ ಯೋಜನೆಯ 300 ಟ್ರೀಸ್ ಉದ್ಘಾಟನಾ ಸಮಾರಂಭ ಹಾಗೂ ಸಮೃದ್ಧ ಬೈಂದೂರು ಪರಿಕಲ್ಪನೆ ಅನಾವರಣ ಕಾರ್ಯಕ್ರಮ ತ್ರಾಸಿ ಕೊಂಕಣ ಖಾರ್ವಿ ಸಂಭಾಗಣದಲ್ಲಿ ಅದ್ದೂರಿಯಾಗಿ ಶನಿವಾರ ನಡೆಯಿತು.
ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಶಕಗಳ ಬೈಂದೂರು ಕ್ಷೇತ್ರದ ಸಂಪರ್ಕದ ಆಧಾರದಲ್ಲಿ ಸಮೃದ್ಧ ಬೈಂದೂರು ನಿರ್ಮಾಣಕ್ಕೆ ಹೆಜ್ಜೆ ಇಟ್ಟಿರುವುದು ಒಂದು ರೀತಿಯ ಸಾಮಾಜಿಕ ಕ್ರಾಂತಿ ಆಗಿದೆ. ಕನಸುಗಳೆ ಇಲ್ಲದ ವ್ಯವಸ್ಥೆಗಳ ನಡುವೆ ಸಮಾಜ ಕಟ್ಟುವುದು ಕಷ್ಟ ಎನ್ನುವಂತಹ ಪರಿಸ್ಥಿತಿಯಲ್ಲಿ ಉದ್ಯೋಗ, ಆರೋಗ್ಯ, ಶಿಕ್ಷಣ ವ್ಯವಸ್ಥೆ ಬಲಪಡಿಸುವಿಕೆ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಕೈಗೊಂಡಿರುವ ಯೋಜನೆ ನೂರಕ್ಕೆ ನೂರಷ್ಟು ಯಶಸ್ಸು ಹೊಂದಲಿದೆ ಎಂದು ಹೇಳಿದರು.
6.5 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ವಿದಾರ್ಥಿಗಳಿಗೆ ಶೆ.1% ಮಾತ್ರ ಸರಕಾರಿ ಉದ್ಯೋಗ ನೀಡಲು ಸಾಧ್ಯವಿದೆ. ಇನ್ನುಳಿದ ಉದ್ಯೋಗಾವಕಾಶವನ್ನು ಖಾಸಗಿ ವಲಯದಿಂದ ನೀಡಬೇಕಾಗಿರುವುದರಿಂದ ಕೈಗಾರಿಕಾ ಕ್ಷೇತ್ರದ ಸ್ಥಾಪನೆಗೆ ಅವಕಾಶವನ್ನು ನೀಡಬೇಕಾಗಿದೆ. ಬಡ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿರುವ ಸರಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದ ಒಂದರಲ್ಲೆ 300 ಶಾಲೆಗಳನ್ನು ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿರುವುದು ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿ ಆಗಲಿದೆ ಎಂದರು.ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರ ಆರೈಕೆಗೆಂದೆ ಪ್ರತ್ಯೇಕವಾದ ಆಸ್ಪತ್ರೆಯನ್ನು ತೆರೆಯಲು ಮುಂದಾಗಿರುವುದು ದಿವ್ಯಾಂಗರಿಗೆ ಇನ್ನಷ್ಟು ಆತ್ಮ ವಿಶ್ವಾಸ ನೀಡಲಿದೆ ಎಂದರು. ಸರಕಾರಿ ಶಾಲೆಗಳ ಉಳಿವಿಗೆ ಕೊಡುಗೆಯನ್ನು ನೀಡುತ್ತಿರುವ ಡಾ. ಶ್ರೀನಿವಾಸ ಶೆಟ್ಟಿ ಅವರ ಕೊಡುಗೆಯನ್ನು ಮಾಜಿ ಸಚಿವರು ಸ್ಮರಿಸಿದರು.
ಪತ್ರಕರ್ತ ಹರೀಶ್ ಪ್ರಕಾಶ್ ಕೋಣೆಮನೆ ಶುಭಾಶಂಸನೆಗೈದು ಮಾತನಾಡಿ, ಸರಕಾರ ಭಾಗ್ಯಗಳನ್ನು ನೀಡುತ್ತಾ ಕ್ರೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕಡೆಗಣಿಸುತ್ತಿರುವ ಸಂದರ್ಭದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆ ರಾಜ್ಯಕ್ಕೆ ಮಾದರಿ ಆಗಲಿದೆ. ಸಾಂಸ್ಕೃತಿಕ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮುಂದುರಿದ ಕ್ಷೇತ್ರ ಸುಂದರವಾದ ಬೈಂದೂರು ಆಗಿದ್ದು, ಆತ್ಮವಿಶ್ವಾಸ ಮತ್ತು ಒಡನಾಟದ ಬಲದಿಂದ ಶಾಸಕರು ಸಮೃದ್ಧ ಬೈಂದೂರು ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದಾರೆ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಮಾತನಾಡಿ, ಸಮಾಜಕ್ಕೆ ಒಳಿತನ್ನು ಮಾಡುವ ದೃಷ್ಟಿಯಿಂದ ವಿಶಿಷ್ಟವಾದ ಕಲ್ಪನೆಯೊಂದಿಗೆ ಸಮೃದ್ಧ ಬೈಂದೂರು ಕನಸನ್ನು ಕಾಣಲಾಗಿದೆ. ಕ್ಷೇತ್ರದ ಜನರ ಋಣವನ್ನು ತೀರಿಸುವ ಕೆಲಸ ಹಂತ ಹಂತವಾಗಿ ಮಾಡಲಾಗುವುದು ಸಮೃದ್ಧ ಬೈಂದೂರು ಪರಿಕಲ್ಪನೆಗೆ ಉದ್ಯಮಿಗಳು ಸೇರಿದಂತೆ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.
ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಪ್ರೊ. ಡಾ. ಅಣ್ಣಪ್ಪ ಶೆಟ್ಟಿ, ತ್ರಾಸಿ ಗ್ರಾ.ಪಂ ಅಧ್ಯಕ್ಷ ಮಿಥುನ್ ದೇವಾಡಿಗ, ರಾಮಕೃಷ್ಣ ಸೇರಿಗಾರ್, ಶಾಂತಾರಾಮ ಶೆಟ್ಟಿ, ಜನಾರ್ದನ ದೇವಾಡಿಗ ಉಪಸ್ಥಿತರಿದ್ದರು.
ಡಾ.ಹೆಚ್.ಎಸ್ ಶೆಟ್ಟಿ 300 ಟ್ರೀಸ್ ಯೋಜನೆ ಅನಾವರಣಗೊಳಿಸಿದರು. ಸಮೃದ್ಧ ಬೈಂದೂರು ಸಾಮಾಜಿಕ ಜಾಲತಾಣಗಳ ಖಾತೆಯನ್ನು ಅನಾವರಣಗೊಳಿಸಲಾಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಸೈನ್ಸ್ ಗೌರವ ಪುರಸ್ಕೃತರಾದ ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ (ಡಾ.ಹೆಚ್.ಎಸ್ ಶೆಟ್ಟಿ) ಅವರನ್ನು ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಬಿ. ಎಸ್. ಸುರೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ನಾವುಂದ ಪ್ರಾರ್ಥಿಸಿದರು. ಶಿಕ್ಷಕ ಸುಬ್ರಹ್ಮಣ್ಯ ನಿರೂಪಿಸಿ, ವಂದಿಸಿದರು.