
ಉಡುಪಿ ಜಿಲ್ಲೆಯ ನೂತನ ಶಾಸಕರಲ್ಲಿ ಓರ್ವರಾದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ತನ್ನ ಕ್ಷೇತ್ರದ ಪ್ರಮುಖ ಹದಿನೈದು ಸ್ಥಳಗಳಿಗೆ ಟೂರ್ ಪ್ಯಾಕೇಜ್ ಒಂದನ್ನು ಆರಂಭಿಸುವ ಉತ್ಸಾಹದಲ್ಲಿದ್ದಾರೆ.
ತಿಂಗಳ ಮೊದಲ ವಾರ ಬೈಂದೂರು ತಾಲೂಕಿನ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ವಿಶಿಷ್ಟ ಯೋಜನೆ ಇದು. ಕೊಲ್ಲೂರಿಂದ ಆರಂಭವಾಗುವ ಧಾರ್ಮಿಕ ಕ್ಷೇತ್ರ ದರ್ಶನದಲ್ಲಿ ಹಲವು ದೇವಸ್ಥಾನಗಳಿಗೆ ಕರೆದೊಯ್ಯುವ ವ್ಯವಸ್ಥೆಯೂ ಇದೆ.
ಒಂದೇ ದಿನದಲ್ಲಿ ಪ್ರವಾಸಿ ತಾಣ ಪರಿಚಯಿಸುವ ಈ ಯೋಜನೆ ಕುರಿತು ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳೊಂದಿಗೆ ಶಾಸಕರ ತಂಡ ಮಾತುಕತೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಹದಿನೈದು ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳ ದರ್ಶನ ಆರಂಭಗೊಳ್ಳಬಹುದು. ಮುಂದಿನ ಜನವರಿಯಲ್ಲಿ ಈ ತೀರ್ಥಯಾತ್ರೆ ಹಾಗೂ ವಿಹಾರ ಪ್ರವಾಸಿಗರಿಗೆ ಒದಗಬಹುದು.
ಧಾರ್ಮಿಕವೇ ಬೇಕು ಎಂಬವರಿಗೆ ಕೊಲ್ಲೂರಿಗೆ ಬರುವ ಭಕ್ತರು ಬೆಳಗ್ಗೆ ಮೂಕಾಂಬಿಕೆ ತಾಯಿಗೆ ಪೂಜೆ ಸಲ್ಲಿಸಿ, ಸಂಜೆ ಪೂಜೆಗೆ ಮತ್ತೆ ಕೊಲ್ಲೂರಿಗೆ ಬಿಡುವ ರೀತಿಯ ಪ್ಯಾಕೇಜ್ ಇದೆ. ಇತರ ಪ್ರವಾಸಿ ತಾಣಗಳ ವೀಕ್ಷಣೆ ಮಾಡುವುದಕ್ಕೆ ಇಚ್ಛಿಸಿದರೆ ಜಲಪಾತ, ಕರಾವಳಿ ತೀರ, ಸನ್ಸೆಟ್, ಚಂದ್ರೋದಯ ಹೀಗೆ ಬೈಂದೂರಿನ ಎಲ್ಲ ಪ್ರವಾಸಿ ತಾಣ ದರ್ಶನ ಮಾಡಿಸಿ ಹೊರಟಲ್ಲಿಗೆ ಬೈಂದೂರಿಗೆ ತಂದು ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ. ಬೈಂದೂರು ಕ್ಷಿತಿಜ ನೇಸರ ಧಾಮದಿಂದ ಸೋಮೇಶ್ವರ ಬೀಚ್ ಅದ್ಭುತದ ಅನಾವರಣ ಇಲ್ಲಿ ಆಗುವುದು ಖಚಿತ.
ಬೈಂದೂರು ಒಂದರಲ್ಲೇ ಏನುಂಟು?
ಚಾರಣ ಪ್ರಿಯರಿಗಿದೆ ಸ್ವರ್ಗ. ಕೂಸಳ್ಳಿ, ಮೇಗಣಿ, ಅರಿಶಿನಗ ಕಣ್ಣಿಗೆ ಹಬ್ಬ ನೀಡುವುದಷ್ಟೇ ಅಲ್ಲ ಚಾರಣಕ್ಕೂ ಹೇಳಿ ಮಾಡಿಸಿದ ಸ್ಥಳ. ಬೆಳ್ಳಲ್ ತೀರ್ಥ ಪೌರಾಣಿಕ ಹಿನ್ನೆಲೆ ಹೊಂದಿರುವ ಪ್ರಕೃತಿ ಸೌಂದರ್ಯದ ಗಣಿ, ಮರವಂತೆ ತಾಸಿ ಬೀಚ್ ಕಡಲು ಸೌಪರ್ಣಿಕಾ ನದಿಯ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಒಂದು ರೋಚಕ ಅನುಭವ ನೀಡುತ್ತದೆ. ಸೋಮೇಶ್ವರ ಬೀಚ್, ಒತ್ತಿನೆಣೆ ಕ್ಷಿತಿಜ ನೇಸರ ಧಾಮ, ತೂದಳ್ಳಿ ಫಾಲ್ಸ್, ಮೇಗಣಿ ಫಾಲ್ಸ್, ಆನೆಜರಿ, ಬೆಳ್ಳಲ್ ತೀರ್ಥ, ಗಂಗೆಬೈಲು, ತ್ರಾಸಿ ಮರವಂತೆ ಬೀಚ್, ಗಂಗೊಳ್ಳಿ ಲೈಟ್ ಹೌಸ್, ಕೊಲ್ಲೂರು ಘಾಟಿ, ಬೈಂದೂರು ಕಡಲತೀರ, ಕೊಲ್ಲೂರು, ಶಂಕರನಾರಾಯಣ, ಸೌಕೂರು ಶ್ರೀದುರ್ಗಾಪರಮೇಶ್ವರಿ, ಕೆರಾಡಿ ಮೂಡುಗಲ್ಲುವಾರ, ಸೇನೇಶ್ವರ, ಸೋಮೇಶ್ವರ, ಉಪ್ಪುಂದ ದುರ್ಗಾಪರಮೇಶ್ವರಿ, ತಲ್ಲೂರು ಶ್ರೀ ಮಹಾಲಿಂಗೇಶ್ವರ, ಆನೆಗುಡ್ಡೆ ಸಿದ್ಧಿವಿನಾಯಕ, ಬನ್ನೂರು ಶ್ರೀ ಮಹಾಲಿಂಗೇಶ್ವರ, ಗುಜ್ಜಾಡಿ ಗುಹೇಶ್ವರ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಹಳ್ಳಿಹೊಳೆ ಹಲವರಿಮಠ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ, ಮೆಟ್ಕಲ್ಲುಡ್ಡ ವಿನಾಯಕ ಧಾರ್ಮಿಕ ಕ್ಷೇತ್ರಗಳು, ಆಳರಸರ ಸೇನಾಪುರ, ಪಡುಕೋಣೆ, ಕದ್ರುಗಳು ಬೈಂದೂರು ಕ್ಷೇತ್ರದ ಐತಿಹಾಸಿಕ ಸ್ಥಳಗಳು, ಸೂರ್ಯಾಸ್ತಮಾನ, ಸೂರ್ಯೋದಯ, ಚಂದ್ರಾಸ್ತಮಾನದ ವಿಹಂಗಮ ನೋಟಕ್ಕೂ ಬೈಂದೂರು ಕ್ಷೇತ್ರದಲ್ಲಿ ಅವಕಾವಿರುವ ತಾಣಗಳು. ಬೈಂದೂರು ಒತ್ತಿನೆಣಿ ಕ್ಷಿತಿಜ ನೇಸರಧಾಮ ಬೆಳದಿಂಗಳ ಊಟಕ್ಕೆ ಹೇಳಿ ಮಾಡಿಸಿದ ಜಾಗ ಒತ್ತಿನೆಣಿ ಕ್ಷಿತಿಜ ನೇಸರಧಾಮದಲ್ಲಿ ವಿಶಾಲ ಕಡಲು, ನದಿ ಸಮುದ್ರಗಳ ವಿಹಂಗಮ ನೋಟದ ಜತೆ ಕಡಲು ಕೂಡ ಹೆಚ್ಚು ದೂರದವರೆಗೆ ಸಮತಟ್ಟಾಗಿದ್ದು, ಹೆಚ್ಚು ಅಪಾಯಕಾರಿಯಲ್ಲ. ಸಂಜೆ ಸೂಯಾಸ್ತಮಾನ, ಚಂದ್ರೋದಯ ಬೇರೊಂದು ಲೋಕ ಸೃಷ್ಟಿಸಿದರೆ, ಸೂರ್ಯೋದಯ ಚಂದ್ರೋದಯ ಒಂದೇ ಸ್ಥಳದಲ್ಲಿ ಕುಳಿತು ವೀಕ್ಷಿಸಬಹುದು.
ಶಾಸಕ ಗಂಟಿಹೊಳೆ ಕಲ್ಪನೆ:
ಬೈಂದೂರು ಕ್ಷೇತ್ರದ ಪರಂಪರೆ, ಸಾಂಸ್ಕೃತಿಕ ವೈವಿಧ್ಯ, ಸಂಸ್ಕೃತಿ ಉಳಿಸಿಕೊಂಡು ಪ್ರವಾಸಿಗರನ್ನು ಸೆಳೆಯುವ ಜತೆ ಭಕ್ತರಿಗೆ ದೇವಸ್ಥಾನಗಳ ದರ್ಶನ ಮಾಡಿಸುವುದು ಈ ಯೋಜನೆಯ ಉದ್ದೇಶ. ಈಗಾಗಲೇ ಸಾರಿಗೆ ಅಧಿಕಾರಿಗಳ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಆರಂಭದಲ್ಲಿ ತಿಂಗಳ ಮೊದಲ ದಿನ ಅಂತ ನಿಶ್ಚಯಿಸಲಾಗಿದ್ದು, ಬೇಡಿಕೆ ಹೆಚ್ಚಾದಂತೆ ವಿಸ್ತರಣೆ ಆಗಲಿದೆ ಎಂಬ ನಂಬಿಕೆ ಶಾಸಕ ಗುರುರಾಜ ಗಂಟಿಹೊಳೆ ಅವರಿಗಿದೆ. ಜನವರಿಯಲ್ಲಿ ಉಡುಪಿ ಪರ್ಯಾಯ ನಡೆಯುತ್ತದೆ. ಈ ಸಂದರ್ಭ ಬೈಂದೂರು ಕ್ಷೇತ್ರದಲ್ಲಿ ಈ ಟೂರ್ ಪ್ಯಾಕೇಜ್ ಆರಂಭಗೊಂಡರೆ, ಉಡುಪಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇನ್ನಷ್ಟು ತೆರೆದುಕೊಳ್ಳುತ್ತದೆ. ದೂರದೂರಿನಿಂದ ಬರುವವರು ಇಲ್ಲಿನ ಸೌಂದರ್ಯ ಸವಿಯಲು ಅವಕಾಶ ದೊರೆಯುತ್ತದೆ. ಪ್ರತಿ ಕ್ಷೇತ್ರದಲ್ಲೂ ಹೀಗಾಗಬೇಕು ಎಂಬುದು ಪ್ರವಾಸಿಪ್ರಿಯರ ಒತ್ತಾಯ
ವರದಿ: ಹರೀಶ ಮಾಂಬಾಡಿ
