ಅರ್ಹ ಫಲಾನುಭವಿಗಳಿಗೆ 94 ಸಿಯಡಿ ಹಕ್ಕು ಪತ್ರ ವಿತರಣೆ

ಬೈಂದೂರು ತಾಲೂಕು ಕಚೇರಿಯಲ್ಲಿ ದಿನಾಂಕ 16-01-2025 ರಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆಯವರು ಬೈಂದೂರು ತಾಲೂಕಿನಲ್ಲಿ ಸರಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ತಾಲೂಕಿನ ಒಟ್ಟು 20 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು, ವಾಸ್ತವ್ಯದ ಹಕ್ಕು ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರೂ ಕೂಡ ಹಕ್ಕು ಪತ್ರ ಇಲ್ಲದೇ ಸರಕಾರದ ಯಾವುದೇ ಸೌಲಭ್ಯ ಪಡೆಯದೇ ಇರುವ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವುದನ್ನು ಕಂಡಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯಾವೊಂದೂ 94 ಸಿ ಅರ್ಜಿದಾರರು ಹಕ್ಕು ಪತ್ರ ವಂಚಿತರಾಗದೆ ಉಳಿದು ಕೊಳ್ಳಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕು ಪತ್ರ ಒದಗಿಸಲು ಉದ್ದೇಶಿಸಲಾಗಿದೆ ಎಂದರು.

ಬೈಂದೂರು ತಾಲೂಕಿನ 06 ಗ್ರಾಮಗಳ ಒಟ್ಟು 20 ಜನ ಅರ್ಹ ಫಲನುಭವಿಗಳಿಗೆ ಹಕ್ಕು ಪತ್ರ ಒದಗಿಸಲಾಗಿದ್ದು, ಹಳ್ಳಿಹೊಳೆ ಗ್ರಾಮದ 07, ಹೇರೂರು ಗ್ರಾಮದ 09, ಜಡ್ಕಲ್ ಗ್ರಾಮದ 02, ಹಾಗೂ ನಾಡ ಗ್ರಾಮದ 02 ಫಲಾನುಭವಿಗಳು ತಮ್ಮ ವಾಸ್ತವ್ಯದ ಮನೆಯಡಿಯ ಭೂಮಿ ಹಕ್ಕು ಪಡೆದುಕೊಂಡಿದ್ದಾರೆ. ಬಾಕಿ ಉಳಿದ ಅರ್ಹ ಫಲನುಭವಿಗಳಿಗೂ ತ್ವರಿತವಾಗಿ 94ಸಿ ಯಡಿ ಹಕ್ಕು ಪತ್ರ ಮಂಜೂರಾತಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಶಾಸಕರು ಇದೇ ವೇಳೆ ಸೂಚಿಸಿದರು.