ಉಡುಪಿ ಜಿಲ್ಲೆಯ ಆಡಳಿತ ಶಕ್ತಿಕೇಂದ್ರವಾಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸಹಿತ ಮಣಿಪಾಲದಲ್ಲಿರುವ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಬಂದೋದಗಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ನೌಕರರ ವರ್ಗದವರು ಕೂಡಾ ಮಾಹಿತಿ ಪಡೆಯಲು, ಕರೆ ಮಾಡಲು ಕಚೇರಿಯಿಂದ ಹೊರ ಬರಬೇಕಾದ ಪರಿಸ್ಥಿತಿಯಿದ್ದು, ಸಮಸ್ಯೆಯನ್ನು ಬಗೆಹರಿಸುವಂತೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಆಗ್ರಹಿಸಿದ್ದಾರೆ.
ಕಂದಾಯ, ಜಿಲ್ಲಾ ಪಂಚಾಯತ್, ಮಹಿಳಾ, ಮಕ್ಕಳ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ನೋಂದಣಿ & ಮುದ್ರಾಂಕ, ನಗರ ಗ್ರಾಮಾಂತರ, ಸಹಿತ ಪ್ರಮುಖ ಇಲಾಖೆಗಳಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹಾಗೂ ಸಂಸದರ ಕಚೇರಿಯೂ ಇರುವುದರಿಂದ ದಿನ ನಿತ್ಯ ಹಲವು ಸಮಸ್ಯೆಯೊಂದಿಗೆ ಬರುವ ಸಾರ್ವಜನಿಕರು ಅಗತ್ಯ ಮಾಹಿತಿ ಅಥವಾ ಇತರ ಸಂಪರ್ಕದ ಸಲುವಾಗಿ ಕರೆ ಮಾಡಲು ತೊಡಕಾಗುತ್ತಿದೆ.
ಕಟ್ಟಡದ ಒಳಗೆ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಬಹು ಮಹಡಿ ಕಟ್ಟಡದಿಂದ ಕೆಳಗಿಳಿದು ಹೊರಗಡೆ ಬರಬೇಕಾದ ಸನ್ನಿವೇಶ ಇದೆ. ಜಿಲ್ಲಾ ಕಚೇರಿಯಲ್ಲಿ ನಡೆಯುವ ಕೆಡಿಪಿ, ದಿಶಾ ಹಾಗೂ ಕ್ಷೇತ್ರದ ಸಮಸ್ಯೆ ಗಳ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಮಯದಲ್ಲೂ ತುರ್ತು ಕರೆಗಳಿಗೆ ಸ್ಪಂದಿಸಲು ಆಗದ ಪರಿಸ್ಥಿತಿ ಇದ್ದು ನೆಟ್‌ವರ್ಕ್ ಸಮಸ್ಯೆ ಸ್ವತಃ ನನ್ನ ಅನುಭವಕ್ಕೂ ಬಂದಿದೆ. ಹಾಗಾಗಿ ಬಿಎಸ್ಎನ್ಎಲ್ ಸಹಿತ ಖಾಸಗಿ ನೆಟ್‌ವರ್ಕ್ ಸಂಸ್ಥೆಗಳಿಂದ ಉಂಟಾಗುತ್ತಿರುವ ಸಮಸ್ಯೆ ಗಳನ್ನು ಜಿಲ್ಲಾಡಳಿತ ಶೀಘ್ರವೇ ಸರಿಪಡಿಸಬೇಕು.
ಜಿಲ್ಲಾಡಳಿತದ ಅಧಿಕಾರಿ ಸಿಬ್ಬಂದಿ ಆದಿಯಾಗಿ ಎಲ್ಲರೂ ಕ್ಷೇತ್ರದ ಜನತೆಗೆ, ಜನ ಪ್ರತಿನಿಧಿಗಳಿಗೆ ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗುವ ಹಾಗೆ ಹಾಗೂ ಜಿಲ್ಲೆಯ ದೂರದ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಶಾಸಕರು ತಿಳಿಸಿದ್ದಾರೆ.