ನನ್ನ ನೆಲ, ನನ್ನ ಊರು, ನಮ್ಮ ಜನ ಎನ್ನುವ ಭಾವನೆ ಮೂಡಿದಾಗ ದೇಶ ಅಭಿವೃದ್ದಿಯ ಚಿಂತನೆ ಮೂಡುತ್ತದೆ – ಗುರುರಾಜ ಗಂಟಿಹೊಳೆ

ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.

ಬೈಂದೂರು ತಹಶೀಲ್ದಾರ ಹೆಚ್. ರಾಮಚಂದ್ರಪ್ಪ ದ್ವಜಾರೋಹಣಗೈದರು ಬಳಿಕ ಮಾತನಾಡಿದ ಅವರು ಈ ನೆಲದ ಕಾನೂನು ಸಂವಿದಾನಕ್ಕೆ ಗೌರವ ನೀಡುವ ಜೊತೆಗೆ ಸ್ವಾತಂತ್ರ ಭಾರತದ ಅಭಿವೃದ್ದಿ ಕನಸಿಗೆ ನಾವೆಲ್ಲ ಜೊತೆಯಾಗುವುದೆ ಸ್ವಾತಂತ್ರ್ಯ ಸಂಭ್ರಮದ ನಿಜಾರ್ಥ. ಈ ನೆಲ, ಜಲ, ಸಂಸ್ಕ್ರತಿಯ ರಕ್ಷಣೆ ನಮ್ಮೆಲ್ಲರ ಜವಬ್ದಾರಿ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಸ್ವಾತಂತ್ರ್ಯ ಎನ್ನುವುದು ಈ ದೇಶದ ಹಲವು ಮಹಾನ್ ನಾಯಕರ ತ್ಯಾಗ ಬಲಿದಾನ ಹೋರಾಟದ ಫಲವಾಗಿದೆ. ನನ್ನ ನೆಲ ನನ್ನ ಊರು ನಮ್ಮ ಜನ ಎನ್ನುವ ಭಾವನೆ ಮೂಡಿದಾಗ ದೇಶ ಅಭಿವೃದ್ದಿಯ ಚಿಂತನೆ ಮೂಡುತ್ತದೆ. ಅಭಿವೃದ್ದಿ ಹೊಂದಿದ ರಾಷ್ಟ್ರಗಳನ್ನು ಕಂಡಾಗ ನಮ್ಮ ಗುರಿ ಬಹಳಷ್ಟಿದೆ ಎನ್ನುವ ಯೋಚನೆಯಾದರೆ ಸಾಗಿ ಬಂದ ದಾರಿ ಅವಲೋಕಿಸಿದಾಗ ಕಡಿಮೆ ಅವಧಿಯಲ್ಲಿ ನಮ್ಮ ದೇಶ ಜಗತ್ತಿನ ಕಣ್ಣು ತೆರೆಸಿದೆ ಎನ್ನುವ ಹೆಮ್ಮೆಯಿದೆ. ಮುಂದಿನ ದಿನದಲ್ಲಿ ಅದ್ದೂರಿ ಉತ್ಸವದ ಆಚರಣೆ ಮೂಲಕ ಸಾಂಸ್ಕೃತಿಕ ಸಂಭ್ರಮದ ಮೂಲಕ ಸಮೃದ್ದ ಬೈಂದೂರಿನ ಕನಸು ಗಟ್ಟಿಗೊಳಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಬೈಂದೂರು ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಮುಖ್ಯ ರಾಜ್‌ಕುಮಾರ್,ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ,ಕಂದಾಯ ಇಲಾಖೆಯ ಸಿಬಂದಿಗಳು,ಆರಕ್ಷಕ ಠಾಣೆಯ ಸಿಬ್ಬಂದಿಗಳು,ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯತ್ ಸಿಬಂದಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ರಾಘವ ಖಾರ್ವಿ,ಪೌರ ಕಾರ್ಮಿಕರಾದ ಕಮಲ ಹಾಗೂ ಉದಯ ಕುಮಾರ್ ಶೆಟ್ಟಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾನ್ಯರನ್ನು ಸಮ್ಮಾನಿಸಲಾಯಿತು. ಬಳಿಕ ಆರಕ್ಷಕ ಠಾಣೆ, ಅಗ್ನಿಶಾಮಕ ದಳ ಹಾಗೂ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿ ಅಜಯ್ ಭಂಡಾರ್‌ಕರ್ ವಂದಿಸಿದರು.