ಸಂಜೀವಿನಿ ಒಕ್ಕೂಟ, ಪಶು ಸಖಿ, ಕೃಷಿ ಸಖಿಯರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸದನದಲ್ಲಿ ಶಾಸಕರ ಆಗ್ರಹ

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ 2025 ನೇ ಸಾಲಿನ ಮುಂಗಾರು ಅಧಿವೇಶನದಲ್ಲಿ ಎನ್ ಆರ್ ಎಲ್ ಎಂ ಯೋಜನೆಯಡಿ ಸಂಜೀವಿನಿ ಒಕ್ಕೂಟಗಳಡಿ ಕಾರ್ಯನಿರ್ವಹಿಸುತ್ತಿರುವ ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಕೃಷಿ ಸಖಿ ಹಾಗೂ ಪಶು ಸಖಿ ಮುಂತಾದ ಸಿಬ್ಬಂದಿಗಳು ಅತ್ಯಂತ ಕಡಿಮೆ ವೇತನ ಹಾಗೂ ಅಸಮರ್ಪಕ ಪ್ರಯಾಣ ಭತ್ಯೆ ಪಡೆಯುತ್ತಿರುವ ವಿಚಾರ ಹಾಗೂ ವೇತನ ಹಾಗೂ ಪ್ರಯಾಣ ಭತ್ಯೆ ಸೇರಿದಂತೆ ಇನ್ನಿತರ ಸೌಲಭ್ಯದ ಬೇಡಿಕೆ ಸಲ್ಲಿಸಿರುವ ವಿಚಾರದ ಕುರಿತು ಹಾಗೂ ಸದರಿ ಸಿಬ್ಬಂದಿಗಳ ನ್ಯಾಯಯುತ ಬೇಡಿಕೆ ಈಡೇರಿಸಲು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟೆ ಹೊಳೆ ಇವರು ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಉತ್ತರಿಸಿ ಈ ಎಲ್ಲಾ ವಿಚಾರಗಳು ಸರಕಾರದ ಗಮನದಲ್ಲಿದೆ. ಸದರಿ ಸಿಬ್ಬಂದಿಗಳು ವಿವಿಧ ಬೇಡಿಕೆಗೆ ಸಲ್ಲಿಸಿದ್ದ ಮನವಿ ಕುರಿತು ಮಾನ್ಯ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಮಟ್ಟದ ಎಂಬಿಕೆ, ಎಲ್ ಸಿ ಆರ್ ಪಿ, ಪಶು ಮತ್ತು ಕೃಷಿ ಸಖಿಯರ ಮಹಾ ಒಕ್ಕೂಟದ ಪ್ರತಿನಿಧಿಗಳೊಂದಿಗೆ ದಿನಾಂಕ 17.07.2025 ರಂದು ಸಭೆ ಜರುಗಿಸಲಾಗಿದೆ. ಬೇಡಿಕೆಯನ್ನು ಪರಿಗಣಿಸಿ ಎಂಬಿಕೆ, ಎಲ್ ಸಿ ಆರ್ ಪಿ, ಕೃಷಿ ಸಖಿ ಮತ್ತು ಪಶು ಸಖಿಯರ ಗೌರವ ಧನ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

ನರೇಗಾ ಯೋಜನೆಯಡಿಯಲ್ಲಿ ಸಂಜೀವಿನಿ ಕಛೇರಿ ಕಟ್ಟಡ ನಿರ್ಮಾಣಕ್ಕೆ ಅವಕಾಶ : ನರೇಗಾ ಯೋಜನೆಯಡಿಯಲ್ಲಿ ಸಂಜೀವಿನಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದ್ದು ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 707 ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಅದರಲ್ಲಿ 318 ಕಟ್ಟಡ ಗಳು ಮುಕ್ತಾಯವಾಗಿದ್ದು, 389 ಕಟ್ಟಡಗಳು ಪ್ರಗತಿಯಲ್ಲಿವೆ. ಉಡುಪಿ ಜಿಲ್ಲೆಯಲ್ಲಿ 12 ಕಡೆ ಸಂಜೀವಿನಿ ಕಛೇರಿ ಕಟ್ಟಡ ನಿರ್ಮಾಣದ ಗುರಿ ಹೊಂದಲಾಗಿದೆ.

ರಾಜ್ಯದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ( ಎನ್.ಎಲ್.ಆರ್.ಎಂ )ದಡಿ ಒಟ್ಟು ಸರಿ ಸುಮಾರು 3 ಲಕ್ಷ ಸಂಜೀವಿನಿ ಸ್ವ ಸಹಾಯ ಗುಂಪುಗಳ ಮೂಲಕ 32 ಲಕ್ಷ ಸದಸ್ಯರು ಇರುವುದಾಗಿ ಸಚಿವರು ಶಾಸಕರ ಪ್ರಶ್ನೆ ಗೆ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರೀಯ ಜೀವನೋಪ ಅಭಿಯಾನದಡಿ 5953 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು ಸದರಿ ಒಕ್ಕೂಟಗಳ ಪೈಕಿ 412 ಸ್ವಂತ ಕಚೇರಿ, 3951 ಪಂಚಾಯಿತಿ ಕಚೇರಿಗಳಲ್ಲಿ, 621 ಇತರೆ ಸರಕಾರಿ ಕಚೇರಿಗಳಲ್ಲಿ ಹಾಗೂ 969 ಕಚೇರಿಗಳು ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.