ಬೈಂದೂರು ವಿಧಾನ ಸಭಾ ಕ್ಷೇತ್ರದ ಕುಮ್ಕಿ, ಪೋರಂಬೊಕು ಮಿತಿಯ 94ಸಿ ಅರ್ಜಿಗಳಿಗೆ ಹಕ್ಕು ಪತ್ರ ಒದಗಿಸಲು ಶಾಸಕರ ಒತ್ತಾಯ

ಕರಾವಳಿ ಜಿಲ್ಲೆಗಳಲ್ಲಿ ವಿಶೇಷವಾಗಿ ಬೈಂದೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 94 ಸಿ ಅಡಿ ಅರ್ಜಿ ಹಾಕಿಯೂ ಈವರೆಗೂ ಹಕ್ಕು ಪತ್ರ ಸಿಗದೇ ನೂರಾರು ಕುಟುಂಬಗಳು ವಿವಿಧ ಸರಕಾರಿ ಸೌಲಭ್ಯ ವಂಚಿತರಾಗಿದ್ದಾರೆ. ಕೂಡಲೇ ಸರಕಾರ ಹಕ್ಕುಪತ್ರ ವಿತರಿಸಬೇಕು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರು ಪ್ರಸ್ತಾಪಿಸಿದ ಚುಕ್ಕೆ ರಹಿತ ಪ್ರಶ್ನೆಗೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ.ಆರ್.ಜೆಡ್ ಹಾಗೂ ಪೋರಂಬೊಕು ಸ್ಥಳವನ್ನು ಅಕ್ರಮಿಸಿ ಒಟ್ಟು 1428 ಅರ್ಜಿ ಗಳಿವೆ. ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ 261 ಅರ್ಜಿಗಳು ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಮ್ಕಿ ಮಿತಿಯಲ್ಲಿ 94 ಸಿ ಅಡಿ ಒಟ್ಟು 849 ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ ಎಂದರು.

ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಮ್ಕಿ ಮಿತಿ, ಪೋರಂಬೊಕು ಹಾಗೂ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಿದ್ದು 94 ಸಿ ಅರ್ಜಿ ಹಾಕಿರುವ ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರ ಒದಗಿಸಲು ಬೈಂದೂರು ಶಾಸಕರು ಪ್ರಶ್ನೆ ಮೂಲಕ ಸದನದಲ್ಲಿ ಪ್ರಸ್ತಾಪಿಸಿರುವ ಜತೆಗೆ ಕಂದಾಯ ಸಚಿವರಿಗೂ ಪತ್ರ ಮುಖೇನ ಮನವಿ ಮಾಡಿದ್ದಾರೆ.