ರಾಜ್ಯದಲ್ಲಿ ಪ್ರಸ್ತುತ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಒದಗಿಸಿರುವ ವಾಹನಗಳ ಸುಸ್ಥಿತಿ ಹಾಗೂ ಹಲವಾರು ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಗಳು ಬಳಸುವ ವಾಹನಗಳು ಬಳಸಲು ಯೋಗ್ಯವಾಗಿಲ್ಲದೇ ಇರುವುದರಿಂದ ಅಂತಹ ವಾಹನಗಳನ್ನು ಗುರುತಿಸಿ ಸರ್ಕಾರ ಹೊಸ ವಾಹನಗಳನ್ನು ಒದಗಿಸಲು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
ವಿಧಾನ ಮಂಡಲ ಅಧಿವೇಶದಲ್ಲಿ ಈ ಬಗ್ಗೆ ಶಾಸಕರು ಕೇಳಿದ ಚುಕ್ಕೆ ರಹಿತ ಪ್ರಶ್ನೆ ಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ರಾಜ್ಯದಲ್ಲಿ ಪ್ರಸ್ತುತ ಒದಗಿಸಿರುವ ವಾಹನಗಳ ಪೈಕಿ 5778 ವಾಹನಗಳು ಸುಸ್ಥಿತಿಯಲ್ಲಿರುತ್ತದೆ. 130 ವಾಹನಗಳು ಬಳಸಲು ಯೋಗ್ಯವಾಗಿಲ್ಲ. ಬಳಸಲು ಯೋಗ್ಯವಿಲ್ಲದ ವಾಹನಗಳು ಹೆಚ್ಚಾಗಿ 15 ವರ್ಷಗಳನ್ನು ಪೂರೈಸಿರುತ್ತವೆ. ಮತ್ತು ಕೆಲವು ಮೈನರ್ ದುರಸ್ಥಿಗೆ ಒಳಪಟ್ಟಿರುತ್ತದೆ.
2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಒಳಾಡಳಿತ ಇಲಾಖೆಯಲ್ಲಿ ಹೊಸ ಮೊಬಿಲಿಟಿ ಯೋಜನೆಯನ್ನು ರೂ 50 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
