ಜಡ್ಕಲ್ -ಮುದೂರು ಗ್ರಾಮಗಳ ಪ್ಲಾಟಿಂಗ್ ಸಮಸ್ಯೆ ಸಹಿತ ಹಲವು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದ ಶಾಸಕರು

ಜಡ್ಕಲ್ ಹಾಗೂ ಮುದೂರು ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನೂರಾರು ಕುಟುಂಬಗಳು ಭೂ ಸಂಬಂಧಿ ಪ್ಲಾಟಿಂಗ್ ಸಮಸ್ಯೆ ಯಿಂದಾಗಿ ತಮ್ಮ ಜಮೀನಿನ ಮಾಲಿಕತ್ವದ ದಾಖಲೆಗಳನ್ನು ಪಡೆಯಲು ಆಗದೇ ಇರುವ ಸಮಸ್ಯೆಯ ವಿಚಾರವಾಗಿ ಆ ಭಾಗದ ಪ್ರಮುಖರ ನಿಯೋಗದೊಂದಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದರು.

ಪ್ರಸ್ತುತ ಸಾಕಷ್ಟು ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸದ್ಯದಲ್ಲಿಯೇ ಭಾದಿತ ರೈತರನ್ನು ಸೇರಿಸಿ ಗ್ರಾಮದಲ್ಲಿಯೇ ಉಪವಿಭಾಗಾಧಿಕಾರಿಗಳು, ಸರ್ವೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಸೂಕ್ತ ಕಾರ್ಯ ಯೋಜನೆ ಹಾಕಿಕೊಳ್ಳುವ ಭರವಸೆ ನೀಡಿದರು.

ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಸ್ಥಳೀಯ ವಿಶ್ವಾಸ ಹಾಗೂ ಸಾರ್ವಜನಿಕ ಮಾಹಿತಿಗೆ ಒತ್ತಾಯ:

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ( ಕೆ.ಪಿ.ಸಿ.ಎಲ್) ವತಿಯಿಂದ ಹೊಸಂಗಡಿ ಭಾಗದಲ್ಲಿ ವಾರಾಹಿ ನದಿ ಲಭ್ಯ ನೀರನ್ನು ಬಳಸಿಕೊಂಡು ವಿದ್ಯುತ್ ಯೋಜನೆ ಸಂಬಂಧಿಸಿದ ಇಲಾಖೆಯು ಕಾರ್ಯ ಯೋಜನೆ ಹಾಕಿ ಕೊಂಡಿರುವ ವಿಚಾರವನ್ನು ಆ ಭಾಗದ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಸಮಕ್ಷಮ ವಿಚಾರ ಪ್ರಸ್ತಾಪಿಸಿದ ಮಾನ್ಯ ಶಾಸಕರು ಸದರಿ ಪ್ರಸ್ತಾಪಿತ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲ. ಸ್ಥಳೀಯನ್ನು ಕತ್ತಲೆಯಲ್ಲಿಟ್ಟು ಯಾವುದೇ ಯೋಜನೆಯನ್ನು ಅನುಷ್ಠಾನ ಮಾಡಬಾರದು. ಇದರ ಬಗ್ಗೆ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ಪಡೆದು ಅವರ ಅಭಿಪ್ರಾಯಗಳನ್ನು ಕ್ರೋಢಿಕರಿಸ ಬೇಕು ಹಾಗೂ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವ ಕೆಲಸ ವಾಗಬೇಕು.ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ : ಆಂಬುಲೆನ್ಸ್ ಸೇವೆ ಮರು ಚಾಲನೆಗೆ ಜಿಲ್ಲಾಡಳಿತಕ್ಕೆ ಶಾಸಕರ ಒತ್ತಾಯ

ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರ ತುರ್ತು ಸೇವೆಗೆ ಲಭ್ಯವಿದ್ಧ 108 ಆಂಬುಲೆನ್ಸ್ ಸೇವೆಯು ಚಾಲಕರು ಇಲ್ಲ ಎಂಬ ಕಾರಣಕ್ಕೆ ನಿಂತು ಹೋಗಿದೆ. ಕ್ಷೇತ್ರದ ಇತರ ಕಡೆಯೂ ದಿನದ 24 ಗಂಟೆಯೂ ಸಮರ್ಪಕ ಆಂಬುಲೆನ್ಸ್ ಸೇವೆ ಇಲ್ಲದಾಗಿದೆ. ಕೆಳ ಹಂತದ ಅಧಿಕಾರಿಗಳು ಚಾಲಕರ ಕೊರತೆಯಿಂದ ಈ ರೀತಿ ಆಗಿವೆ ಎಂದು ಹೇಳುತ್ತಾರೆ. ಹಾಗಾಗಿ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಈ ಕೂಡಲೇ ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಸೇವೆ ವ್ಯತ್ಯಯವನ್ನು ಸರಿ ಪಡಿಸಬೇಕು ಹಾಗೂ ಕ್ಷೇತ್ರದ ಉಳಿದ ಕಡೆ ಇರುವ ಸಮಸ್ಯೆಗಳನ್ನು ಸರಿ ಪಡಿಸಲು ಜಿಲ್ಲಾಡಳಿತಕ್ಕೆ ಶಾಸಕರು ಒತ್ತಾಯಿಸಿದರು

ಜಡ್ಕಲ್ – ಮುದೂರು ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಮರ್ಪಕ ಸೇವೆ ಒದಗಿಸಲು ಒತ್ತಾಯ

ಜಡ್ಕಲ್ ಹಾಗೂ ಮುದೂರು ಗ್ರಾಮದಲ್ಲಿ ಬಸ್ ಸೇವೆ ಸಮರ್ಪಕವಾಗಿಲ್ಲ. ಆದರೆ ತಾಲೂಕು ಕೇಂದ್ರಗಳಿಗೆ ತೆರಳಲು ಅಲ್ಲಿನ ಗ್ರಾಮಸ್ಥರು ತುಂಬಾ ಸಮಸ್ಯೆ ಅನುಭವಿಸುತ್ತಿರುವುದರಿಂದ ಆ ಭಾಗದಲ್ಲಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವುದು ಹಾಗೂ ಇನ್ನುಳಿದಂತೆ ಕ್ಷೇತ್ರದ ಹೊಸಂಗಡಿ, ಸಿದ್ಧಾಪುರ, ವಂಡ್ಸೆ ಭಾಗದ ಗ್ರಾಮೀಣ ಪ್ರದೇಶಗಳಲ್ಲಿಯೂ ಬಸ್ ಬೇಡಿಕೆ ಇರುವುದರಿಂದ ಅಲ್ಲಿಗೂ ಬಸ್ ಸೇವೆ ಒದಗಿಸಲು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಶಾಸಕರು ಒತ್ತಾಯಿಸಿದರು.