ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಹರ್ಕೂರು ಗ್ರಾಮದ ಹಿಂದುಳಿದ ಕೊರಗ ಸಮುದಾಯದ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಅವರೊಂದಿಗೆ ಭೋಜನ ಸವಿದು, ಸಮಸ್ಯೆಗಳನ್ನು ಆಲಿಸಿದ್ದಾರೆ.
ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ಕೂರು ಗ್ರಾಮದ ಮದುಕೊಡ್ಡು ಎಂಬಲ್ಲಿನ ಕೊರಗ ಸಮುದಾಯದ ಸುರೇಂದ್ರ ಎಂಬುವವರ ಮನೆಯಲ್ಲಿ ಮಂಗಳವಾರ ರಾತ್ರಿ ಶಾಸಕರು ವಾಸ್ತವ್ಯ ಹೂಡಿದ್ದರು. ಮನೆಯವರ ಜೊತೆ ಕುಳಿತು ಆತ್ಮೀಯವಾಗಿ ಭೋಜನ ಸವಿದ ಅವರು, ಸಾಮಾನ್ಯರಲ್ಲಿ ಸಾಮಾನ್ಯರಂತೆ ರಾತ್ರಿ ವಿಶ್ರಾಂತಿ ಪಡೆದರು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಬಾಗಿನ ನೀಡಿ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.



ಸಮಸ್ಯೆಗಳ ಆಲಿಕೆ ಮತ್ತು ಸಂವಾದ
ಬರಿ ವಾಸ್ತವ್ಯಕ್ಕೆ ಸೀಮಿತವಾಗದೆ, ಸಮುದಾಯದ ಮುಖಂಡರ ಜೊತೆ ಸುದೀರ್ಘ ಸಂವಾದ ನಡೆಸಿದ ಗಂಟಿಹೊಳೆ ಅವರು ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. “ಕೊರಗ ಸಮುದಾಯವು ಹಿಂದೂ ಸಮಾಜದ ಅವಿಭಾಜ್ಯ ಅಂಗ. ಕಲೆ, ಸಾಹಿತ್ಯ ಮತ್ತು ಪರಂಪರೆಯ ಉಳಿವಿನಲ್ಲಿ ಈ ಸಮುದಾಯದ ಪಾತ್ರ ದೊಡ್ಡದಿದೆ. ಅವರ ನೋವು-ನಲಿವುಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ,” ಎಂದು ಶಾಸಕರು ಹೇಳಿದರು.
