ಯಕ್ಷಗಾನ ಕಲಾರಂಗವೆಂಬುದು ವಿಸ್ಮಯ: ಶಾಸಕ ಗಂಟಿಹೊಳೆ

ಯಕ್ಷಗಾನ ಕಲಾರಂಗದ 88ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ಉಡುಪಿ ಇದರ ವಿದ್ಯಾಪೋಷಕ್‌ನಡಿ 88ನೆಯ ಮನೆಯನ್ನು ಶನಿವಾರ ಹಸ್ತಾಂತರಿಸಲಾಯಿತು.

ಎಂಎಸ್‌ಆರ್‌ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ.ಶಾರದಾಎಂ. ಇವರು ತಮ್ಮ ಪತಿ ಕೃಷ್ಣಮೂರ್ತಿ ಕೆ.ಇವರ ಸ್ಮರಣೆಯಲ್ಲಿ, 7,00,000 ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು ಬೈಂದೂರು ತಾಲೂಕಿನ ಜಡ್ಕಲ್ ಸೆಲ್ಕೋಡ್ ನಿವಾಸಿಗಳಾದ ಚಿಕ್ಕಮ್ಮ ಮತ್ತು ಶಂಕರ ನಾಯ್ಕ್ ಇವರ ಪುತ್ರ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್‌ಗೆ ನಿರ್ಮಿಸಿಕೊಡಲಾಗಿದೆ. ಇದು ಶಾರದಾ ಎಂ ಅವರ ಪ್ರಾಯೋಜಕತ್ವದ ಎರಡನೇ ಮನೆಯಾಗಿದೆ. ಸ್ವಸ್ತಿಕ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97ಅಂಕ ಪಡೆದಿದ್ದು, ವಿದ್ಯಾಪೋಷಕ್ ಅಡಿಯಲ್ಲಿ ಈತನನ್ನು ಆಯ್ಕೆ ಮಾಡಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾನಿ ಶಾರದಾ ಎಂ ಅವರು, ನನ್ನ ಪತಿ ಕೃಷ್ಣಮೂರ್ತಿಯವರ ಹಲವು ಆಸಕ್ತಿಗಳಲ್ಲಿ ಛಂದಸ್ಸಿನ ಕುರಿತ ಆಳವಾದ ಅಧ್ಯಯನವೂ ಒಂದು. ಅವರಿಗೆ ‘ಛಂದೋಗತಿ’ ಎಂಬ ಪುಸ್ತಕವನ್ನು ಬರೆಯಬೇಕೆಂಬ ಕನಸಿತ್ತು. ಅದು ಈಡೇರಿರಲಿಲ್ಲ. ಹಾಗಾಗಿ ಅವರ ಸ್ಮೃತಿಯಲ್ಲಿ ನೀಡಿದ ಈ ಮನೆಗೆ ಅದೇ ಹೆಸರಿಟ್ಟಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗ ನನ ಗೊಂದು ವಿಸ್ಮಯವೇ ಆಗಿದೆ. ಅವರ ಸಾಮಾಜಿಕ-ಶೈಕ್ಷಣಿಕ-ಕಲಾ ಸಂಬಂಧಿ ಕಾರ್ಯಕ್ರಮಗಳ ವಿಶ್ವರೂಪ ಅನ್ಯ ಸಂಘಟನೆಗಳಿಂದ ಅಸಾಧ್ಯ. ಅವರ ಕ್ಲಪ್ತತೆ, ಪರಿಶ್ರಮ, ಪಾರದರ್ಶಕತೆ, ಬದ್ಧತೆ, ಅಚ್ಚುಕಟ್ಟುತನಕ್ಕೆ ಶರಣಾಗಿದ್ದೇನೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರು ಮಾತನಾಡಿ, ಆಹಾರ, ಔಷಧ, ಶಿಕ್ಷಣ ವಿಕ್ರಯ ಮಾಡಬಾರದೆಂದು ನಮ್ಮ ಮೂಲ ಸಂಸ್ಕೃತಿಯಲ್ಲಿದೆ. ಈ ಮೂರೂ ವಿಧದ ದಾನಗಳು ಈ ಸಂಸ್ಥೆಯಿಂದ ಆಗುತ್ತಿವೆ ಎಂದರು.

ವೇದಿಕೆಯಲ್ಲಿ ಖ್ಯಾತ ವಕೀಲ ರಾಮಚಂದ್ರ ಅಡಿಗ, ಬಿ.ಹರೀಶ್ ತಂತ್ರಿ, ಶಾರದಾ ಎಂ ಅವರ ಸಹೋದರ ಕೃಷ್ಣ ಭಟ್ ಮತ್ತು ಅವರ ಪತ್ನಿ ಪರಮೇಶ್ವರೀ, ಸಹೋದರಿ ಸರೋಜ,ಸಹೋದ್ಯೋಗಿ ಸುಬ್ರಹ್ಮಣ್ಯ ಭಟ್, ಸ್ನೇಹಿತೆ ಜೆಸಿಂತಾ, ಮಧುಕರ ಪೂಜಾರಿ, ವಿಠ್ಠಲ ಪೂಜಾರಿ, ವಿಷ್ಣುಮೂರ್ತಿ ಪ್ರಭು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಯು. ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ.ರಾಘವೇಂದ್ರ ರಾವ್, ಪ್ರಾಂಶುಪಾಲರಾದ ಅಮರೇಶ್ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವಾಗತಿಸಿದರು.