ಸನಾತನ ಧರ್ಮದ ಅಪಮಾನ, ಅವನತಿಗೆ ಆಹ್ವಾನ!


ನಮ್ಮದೇ ಮಣ್ಣಲ್ಲಿ ಹುಟ್ಟಿ ನಮ್ಮ ಸನಾತನ ಧರ್ಮದ ತಳಹದಿಯಲ್ಲಿ ಬೆಳೆದು ಕೊನೆಗೆ ತಮ್ಮ ಧರ್ಮದ ಬಗ್ಗೆಯೇ ಟೀಕೆ ಮಾಡುವ ಪ್ರಚಾರದ ತೆವಲು ಹಿಡಿದ ಸಾಕಷ್ಟು ಮಂದಿಗಳ ಗುಂಪು ನಮ್ಮ ದೇಶದಲ್ಲಿದೆ.ಈ ಗುಂಪಿಗೆ ಹೊಸದೊಂದು ಹೆಸರು ಸೇರ್ಪಡೆಯಾಗಿದ್ದು, ಆ ಹೆಸರೇ ತಮ್ಮ ಅಪ್ಪ ಹಾಗೂ ಅಜ್ಜನ ಹೆಸರಿನಿಂದ ಅಧಿಕಾರಕ್ಕೆ ಬಂದ ಉಪನಿಧಿ ಸ್ಟಾಲಿನ್. ಸನಾತನ ಧರ್ಮ ಒಂದು ಡೇಂಘೀ, ಮಲೇರಿಯಾ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ ಸನಾತನ ಧರ್ಮದ ಮೇಲೆ ನಿಂತಿರುವ ಭವ್ಯ ದೇಶ ಭಾರತಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಈ ಹಿಂದೆ ಇವರ ತಂದೆ ಸ್ಟಾಲಿನ್, ತಾತ ಕರುಣಾನಿಧಿ ಹುಟ್ಟುವುದಕ್ಕೂ ಮುನ್ನ ಹುಟ್ಟಿರುವ ಹಾಗೂ ಇವರುಗಳಿಂದಲೇ ತಗೆಯಲಾಗದ ಸನಾತನ ಧರ್ಮವನ್ನ ಅಪ್ಪನ ಕೃಪೆಯಿಂದ ಮಂತ್ರಿಯಾದ ಉದಯನಿಧಿ ಸ್ಟಾಲಿನ್ ತಗೆದು ಬಿಡುತ್ತಾರೆ ಎನ್ನುವುದು ಕೇವಲ ತಿರುಕನ ಕನಸು ಅಷ್ಟೇ.

ತಮಿಳುನಾಡು ಜನತೆ ನಿಜಕ್ಕೂ ಮುಗ್ದರು ಇವರ ಭಾವನಾತ್ಮಕ ಹೇಳಿಕೆಗೆ ಮನಸೋತು ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುತ್ತಾರೆ.ನನಗೆ ನಿಜಕ್ಕೂ ಆಶ್ಚರ್ಯ ಎನಿಸಿದ್ದು, ಉಪನಿಧಿ ವಿವಾದತ್ಮಕ ಹೇಳಿಕೆ ನೀಡುವ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮಂತ್ರಿಗಳು ಅದೇ ಸಭೆಯಲ್ಲಿ ಕುಳಿತಿದ್ದು, ಉಪನಿಧಿಯ ಹೇಳಿಕೆಗೆ ಚಪ್ಪಾಳೆ ತಟ್ಟಿದ್ದರು. ಈ ಹಿಂದೆ ಕರ್ನಾಟಕದಲ್ಲಿ ಒಬ್ಬ ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕೊನೆ ಉಸಿರೆಳೆದಿದ್ದ. ಪ್ರತಿ ಬಾರಿ ಪದೇ ಪದೇ ಹಿಂದೂಗಳ ಅಥವಾ ಸನಾತನ ಧರ್ಮದ ಬಗ್ಗೆ ಟೀಕೆ ಮಾಡುವುದೇ ದೊಡ್ಡ ಸಾಧನೆ ಎಂದು ತಿಳಿದಿರುವ ಕೆಲ ಕಮಂಗಿ ರಾಜಕಾರಣಿಗಳಿಗೆ ನನ್ನದೊಂದು ಚಿಕ್ಕ ಸಲಹೆ. ತಮಿಳುನಾಡು ಸಾಕಷ್ಟು ಅಭಿವೃದ್ಧಿ ಕಾಣಬೇಕಾದ ಅಗತ್ಯವಿದೆ. ಈ ಹಿಂದೆ ಬಸವಣ್ಣ ವಿಶ್ವ ಕಂಡ ಶ್ರೇಷ್ಠ ದಾರ್ಶನಿಕರಾದರು. ಇದಕ್ಕೆ ಕಾರಣ ಬಸವಣ್ಣನಿಗೆ ಸಮಾಜದಲ್ಲಿನ ಅಸಮಾನತೆಯನ್ನ, ಸಾಮಾಜಿಕತೆಯನ್ನ ಸುಧಾರಿಸುವ ಅನೇಕ ಆಲೋಚನೆಗಳಿತ್ತು. ಹಾಗೇ ಅವರು ಸಮಾಜವನ್ನ ತಿದ್ದುವ ಕೆಲಸ ಮಾಡಿದ್ರು. ಬಸವಣ್ಣನ ಒಂದು ಮಾತು ಇಂದಿಗೂ ನನಗೆ ನೆನಪಿಗೆ ಬರುತ್ತದೆ. ಲೋಕದ ಡೊಂಕ ನೀವೇಕೆ ತಿದ್ದುವರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಅವರಿವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮ ದೇವ ಎಂದು, ಬದಲಾವಣೆ ಎಂದರೆ ಅದು ನಮ್ಮಲ್ಲಿ ಮೊದಲು ಆಗಬೇಕಾದ ಪರಿವರ್ತನೆ ನಾವು ಬದಲಾವಣೆಯಾಗದ ಹೊರತು ಸಮಾಜದ ಬದಲಾವಣೆ ನಿಜಕ್ಕೂ ಸಾಧ್ಯವಿಲ್ಲ. ತಮಿಳುನಾಡಿಗೆ ಪ್ರವಾಸಕ್ಕಾಗಿ ಜನ ಇಂದು ಬರುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಅಲ್ಲಿನ ಸನಾತನ ದೇವಾಲಯಗಳೇ ಕಾರಣ, ದೇವಾಲಯಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಹಣಗಳು ಸ್ಟಾಲಿನ್ ಗೆ ಅಗತ್ಯವಿದೆ. ಆದರೆ ಸನಾತನ ಧರ್ಮ ಮಾತ್ರ ಇವರಿಗೆ ಡೆಂಗ್ಯೂ, ಮಲೇರಿಯಾ ರೀತಿ ಕಾಣಿಸುತ್ತದೆ. ಉತ್ತರನ ಪೌರುಷ ಓಲೆಯ ಮುಂದೆ ಎನ್ನುವ ಮಾತಿನಂತೆ ಸ್ಟಾಲಿನ್ ಹಾಗೂ ಅವರ ಮಗನ ಪೌರುಷ ಕೇವಲ ಉತ್ತರ ಪೌರುಷ ಎನ್ನಬಹುದೇ ವಿನಃ ಬೇರೆಯಾವುದೇ ವ್ಯಾಖ್ಯಾನಗಳು ನನಗೆ ಸಿಗುತ್ತಿಲ್ಲ. ಭಾರತದ ಅಖಂಡತೆಯಲ್ಲಿ ಹಿಂದೂ ಧರ್ಮದ ಪಾತ್ರ ಸಾಕಷ್ಟಿದೆ, ಇದಕ್ಕೆ ಕಾರಣ ಸನಾತನತೆ ಹಿಂದೂ ಧರ್ಮ ಕೇವಲ ಒಂದು ಧರ್ಮವಲ್ಲ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಇರುವ ಪರಿಪೂರ್ಣ ವ್ಯವಸ್ಥೆ. ವಿಶ್ವಕ್ಕೆ ಮಾನವತೆಯ ಪರಿಚಯ ಮಾಡಿಸಿದ್ದು, ನಮ್ಮಿ ಸನಾತನ ಧರ್ಮ, ಅತಿಥಿ ದೇವೋ ಭವ ಎಂದು ಕರೆದದ್ದು ನಮ್ಮ ಸನಾತನ ಧರ್ಮ.

ಧರ್ಮೋ ರಕ್ಷತಿ ರಕ್ಷಿತಃ ಧರ್ಮವನ್ನು ನೀನು ರಕ್ಷಣೆ ಮಾಡು ಧರ್ಮ ನಿನ್ನನ್ನು ರಕ್ಷಣೆ ಮಾಡುತ್ತದೆ ಎಂದು ಸಮಾಜಕ್ಕೆ ಸಾರಿದ ಸನಾತನ ಧರ್ಮ ನಮ್ಮ ಹಿಂದೂ ಧರ್ಮ. ಮಹಾಕಾವ್ಯಗಳಾದ ರಾಮಾಯಣ ಮಹಾಭಾರತದಂತ ಬದುಕಿನ ಅರ್ಥ ನೀಡಬಲ್ಲ ಮಹಾಕಾವ್ಯಗಳನ್ನ ಸಮಾಜಕ್ಕೆ ನೀಡಿದ ಭವ್ಯ ಧರ್ಮ ನಮ್ಮ ಸನಾತನ ಹಿಂದೂ ಧರ್ಮ. ಹಿಂದೂ ಧರ್ಮವೆಂದರೆ ನೀವು ತಿಳಿದಂತೆ ಶಾಲು ತಿಲಕವನ್ನಿಟ್ಟ ಮಾತ್ರಕ್ಕೆ ಆತ ಹಿಂದೂ ಆಗಲು ಸಾಧ್ಯವಿಲ್ಲ. ತನ್ನ ಬದುಕಿನ್ನುದ್ದಕ್ಕೂ ನ್ಯಾಯ, ನಿಷ್ಠೆ, ಪ್ರಾಮಾಣಿಕತೆ, ತ್ಯಾಗ, ಕರುಣೆ ಇವೆಲ್ಲವನ್ನೂ ಕಾಪಾಡಿಕೊಂಡು ಸಮಾಜದ ಏಳ್ಗೆಗಾಗಿ ಶ್ರಮಿಸುವವನು ನಿಜವಾದ ಹಿಂದೂ ಅದು ನಮ್ಮ ಧರ್ಮದ ಹಿರಿಮೆ. ಇಡೀ ವಿಶ್ವವೇ ನಮ್ಮ ಹಿಂದೂ ಧರ್ಮವನ್ನು ಒಪ್ಪಿಕೊಂಡಿದೆ ಇದಕ್ಕೆ ಉತ್ತಮ ಉದಾಹರಣೆ ಸ್ವಾಮಿ ವಿವೇಕಾನಂದರು ನಮ್ಮ ದೇಶವನ್ನ ಉದ್ದೇಶಿಸಿ ಅಮೇರಿಕಾದ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಮಾತು. ಸನಾತನ ಧರ್ಮ ನಮಗೆ ಜೀವನದ ಮೌಲ್ಯವನ್ನು ಅರಿಯಲು ಸಹಾಯ ಮಾಡುತ್ತದೆ. ಮನುಷ್ಯನ ಹುಟ್ಟು ಹಾಗೂ ಆತನ ಸಾವು ಎರಡು ಕೂಡ ವಿಧಿ ಲಿಖಿತವಾದದ್ದು, ಆದರೆ ಆತನ ಜೀವನವನ್ನು ಕಟ್ಟಿಕೊಂಡು ಭವ್ಯತೆ ಹಾಗೂ ರಾಷ್ಟ್ರಪ್ರೇಮವನ್ನು ಸಾರುವುದು ಧರ್ಮದ ಶಿಕ್ಷಣವೇ. ನಾವೆಲ್ಲರೂ ಇಂದು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಪೂರ್ವ ಜನ್ಮದ ಪುಣ್ಯವಿರಬಹುದು. ಭವ್ಯ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದದ್ದು, ನಮ್ಮ ಶ್ರೇಷ್ಠ ಹಿಂದೂ ಧರ್ಮ. ಭರತ ಭೂಮಿಯಿಂದ ಸೃಷ್ಟಿಯಾದ ಹೆಸರೇ ಭಾರತ ಇಂತಹ ಸನಾತನ ಭೂಮಿ ಅದರ ಬೆಳಕು ಗಾಳಿ, ನೀರನ್ನ ಸವಿದು ಈಗ ಅದೇ ಸನಾತನ ಧರ್ಮದ ಬಗ್ಗೆ ಎಲುಬಿಲ್ಲದ ನಾಲಿಗೆಯಂತೆ ಮಾತನಾಡುವ ನಿಮ್ಮಂತ ಸೋ ಕಾಲ್ಡ್ ಬುದ್ದಿಜೀವಿಗಳಿಗೆ ಮುಂಬರುವ ದಿನಗಳಲ್ಲಿ ಸರಿಯಾಗಿ ಜನ ಉತ್ತರ ನೀಡಲಿದ್ದಾರೆ. ಮನುಷ್ಯ ಜನ್ಮ ಒಂದು ಅದ್ಭುತ ಜನ್ಮ ಆ ಜನ್ಮವನ್ನು ನಾವು ನಮಗೆ ಬೇಕಾದ ರೀತಿಯಲ್ಲಿ ಬದುಕಬಹುದು ಎಂದ ಮಾತ್ರಕ್ಕೆ ಮನಸ್ಸಿಗೆ ತೋಚಿದ ಹಾಗೇ ಮಾತನಾಡಿ ಅದು ವಿವಾದವಾಗಿ ಅದರ ಮೂಲಕ ಒಂದಿಷ್ಟು ಸಮುದಾಯದ ಮತವನ್ನ ಸೆಳೆಯಬಹುದು ಎನ್ನುವ ಹುಚ್ಚು ಕಲ್ಪನೆಗೆ ಜನ ಸರಿಯಾದ ಉತ್ತರವನ್ನ ಕೊಟ್ಟೆ ಕೊಡುತ್ತಾರೆ. ಸನಾತನ ಧರ್ಮವನ್ನು ಟಿಕೀಸುವ ಬರದಲ್ಲಿ ಉಪನಿಧಿ ಸ್ಟಾಲಿನ್ ತಮ್ಮ ಅವನತಿಯ ಮೊದಲ ಹೆಜ್ಜೆಯನ್ನ ಇಟ್ಟಾಗಿದೆ.

ಸಮಾಜದಲ್ಲಿ ಸನಾತನತೆ ಹೋಗಲಾಡಿಸಬೇಕು ಎನ್ನುವ ಉಪನಿಧಿ ಅದನ್ನು ಮೊದಲು ಅವರ ಮನೆಯಲ್ಲಿ ಅನುಸರಿಸಲು ಸಾಧ್ಯವಿದೆಯಾ ಎನ್ನುವುದನ್ನು ಅರಿತುಕೊಳ್ಳಲಿ. ಉಪನಿಧಿ ಸ್ಟಾಲಿನ್ ರವರ ತಾಯಿಗೆ ದೇವರು ಹಿಂದೂ ಸಂಸ್ಕೃತಿ ಎಂದರೆ ಎಲ್ಲಿಲ್ಲದ ಭಕ್ತಿ, ಇದೆ ಸ್ಟಾಲಿನ್ ಮುಖ್ಯಮಂತ್ರಿಯಾಗಲು ಅನೇಕ ಪೂಜೆ ಪುನಸ್ಕಾರಗಳನ್ನು ಉಪನಿಧಿ ಸ್ಟಾಲಿನ್ ತಾಯಿ ಮಾಡಿದ್ದರು. ಮೊದಲು ಇವರಿಗೆ ಇವರ ಮನೆಯವರನ್ನು ಸ್ವತಹ ಇವರ ತಾಯಿಯವರನ್ನೇ ಸನಾತನತೆಯಿಂದ ದೂರ ಮಾಡಲು ಸಾಧ್ಯವಿಲ್ಲ ಇನ್ನೂ ಇಡೀ ದೇಶದಲ್ಲಿ ಸನಾತನತೆಯನ್ನು ದೂರ ಮಾಡುತ್ತಾರೆಯೇ, ಕೈಲಾಗದವನ ಕೊನೆಯ ಅಸ್ತ್ರವೇ ಅಪಪ್ರಚಾರ ಅಂತಹದ್ದೇ ದಾರಿಯಲ್ಲಿ ನಡೆಯಲು ಉಪನಿಧಿ ಮುಂದಾಗಿದ್ದು, ಇವರ ಅಸ್ತ್ರವನ್ನ ಒಪ್ಪುವ ಹಾಗೂ ಅದರಂತೆ ನಡೆಯುವ ಯಾವ ಕೆಲಸಗಳು ಕೂಡ ಜನರ ಅಭಿವೃದ್ಧಿಗೆ ಗುಲಗಂಜಿಯಷ್ಟು ಪ್ರಯೋಜನಕಾರಿಯಾಗಲ್ಲ. ಚುನಾವಣೆ ಬಂದಾಗ ಜನರಿಗೆ ಆಸೆ ತೋರಿಸಿ ದುಡ್ಡು ಸೀರೆ, ಟಿವಿಯನ್ನು ಹಂಚಿ ಅಧಿಕಾರಕ್ಕೆ ಬರುವುದು. ತಮ್ಮ ವಂಶಪರಂಪರೆ ಮೂಲಕ ರಾಜಕೀಯದಲ್ಲಿ ಒಂದಿಷ್ಟು ಅಧಿಕಾರವನ್ನ ಪಡೆದುಕೊಳ್ಳುವುದು ಸಾಧನೆಯಲ್ಲ. ಒಬ್ಬ ಪಕ್ಷದ ಕಾರ್ಯಕರ್ತನಾಗಿ ಜನರ ನೋವು ನಲಿವುಗಳನ್ನು ಹತ್ತಿರದಿಂದ ನೋಡಿ ಅದನ್ನ ಅರಿತು ಸಾಮಾನ್ಯ ಜನರೊಂದಿಗೆ ಸಾಮಾನ್ಯವಾಗಿ ಬದುಕಿದರೆ ಮಾತ್ರ ಅವರ ಕಷ್ಟ ಅರ್ಥವಾಗಲು ಸಾಧ್ಯ. ಅದನ್ನು ಹೇಳಿಕೊಡುವುದು ಕುಟುಂಬ ರಾಜಕಾರಣವಲ್ಲ ಸನಾತನ ಧರ್ಮ. ಜನರ ಅಸಹಾಯಕತೆಯನ್ನು ತಮ್ಮ ಓಟ್ ಬ್ಯಾಂಕ್ ರಾಜಕಾರಣ ಉಪಯೋಗಿಸಿಕೊಂಡು, ಸತ್ತ ಹೆಣದ ಮೇಲೆ ಕರುಣೆಯ ರಾಜಕೀಯ ಮಾಡಿ, ಇನ್ನೊಬ್ಬರನ್ನು ತುಳಿದು ಅಧಿಕಾರದ ಕುರ್ಚಿಗೆ ಏರುವ ಅಂಧ ಮನಸ್ಸಿನ ನಿಮ್ಮಂತ ಜನರಿಗೆ ಸನಾತನ ಎಂದರೆ ಏನು ಎಂದು ತಿಳಿಯಲು ಏಳು ಜನ್ಮ ಕೊಟ್ಟರು ಸಾಲದು.

ಸನಾತನ ಧರ್ಮವನ್ನ ಟೀಕೆ ಮಾಡುವ ಉಪನಿಧಿ ಸ್ಟಾಲಿನ್ ಗೆ ತಮ್ಮ ರಾಜ್ಯದ ಬಾವುಟದ ಚಿಹ್ನೆ ನೆನಪಿದೆಯೇ, ಅದು ಕೂಡ ಸನಾತನತೆಯ ಪ್ರತೀಕ ಹಾಗೆಂದು ಆ ಭಾವುಟದ ಚಿಹ್ನೆಯನ್ನೇ ಬದಲಿಸುತ್ತಿರೋ? ಸುಮ್ಮನೆ ಲಾಜಿಕ್ ಇಲ್ಲದೆ ನಿಮ್ಮ ತಮಿಳುನಾಡಿನ ಸಂಸ್ಕೃತಿ ಪರಂಪರೆಯನ್ನು ತಿಳಿಯದೆ ಕೇವಲ ಯಾರದೋ ಮೇಲಿನ ಅಂಧಭಕ್ತಿಯಿಂದ ಓಲೈಕೆಯ ರಾಜಕಾರಣದಿಂದ ಜನರನ್ನು ಮರಳು ಮಾಡಬಹುದು ಎನ್ನುವುದು ಕೇವಲ ನಿಮ್ಮ ಭ್ರಮೆ ಅಷ್ಟೇ.. ಜನ ನಿಮ್ಮನ್ನು ಅಧಿಕಾರದ ಕುರ್ಚಿಯಲ್ಲಿ ಕುಳಿಸಿದ್ದಾರೆ ಅದರ ಸಲುವಾಗಿಯಾದರು ಕನಿಷ್ಠ ಪಕ್ಷ ಜನರ ಹಿತಕ್ಕಾಗಿ ದುಡಿಯುವ ಹಾಗೇ ಜನರ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ತರಲು ಚಿಂತನೆ ನೆಡೆಸಿ, ಸಮಾಜ ಸುಧಾರಣೆಯ ತತ್ವಗಳನ್ನು ಪಾಲಿಸಿ ನಿಮ್ಮಲ್ಲಿರುವ ಕೆಲ ಮೌಢ್ಯತೆಯನ್ನ ದೂರ ಮಾಡಿ. ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿ ನಿಮಗೆ ಒಂದಿಷ್ಟು ಪ್ರಚಾರ ಸಿಕ್ಕಿದೆ ಎಂದುಕೊಂಡರೆ ಅದು ನಿಮ್ಮ ಮೂರ್ಖತನದ ಪರಮಾವಧಿ, ಜನರ ಉದ್ದೇಶಗಳು ಅವರ ಕನಸುಗಳನ್ನು ಪೂರ್ಣಗೊಳಿಸುವ ಬಗ್ಗೆ ಅವಲೋಕಿಸಿ ಅದನ್ನ ಬಿಟ್ಟು ಸಿಕ್ಕಿರುವ ಕುರ್ಚಿಯಲ್ಲಿ ಕುಳಿತು ರಾಜ್ಯದ ಜನರಿಗೆ ಒಂದು ಕಣ್ಣಿಗೆ ಬಣ್ಣ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸ ಮಾಡಬೇಡಿ. ಅಂದ ಹಾಗೇ ನೀವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದರೆ ನಾವು ಹಿಂದೂಗಳು ಕ್ಷಮಿಸುತ್ತೇವೆ ಯಾಕೆಂದರೆ ತಪ್ಪು ಮಾಡುವ ಮನುಷ್ಯರನ್ನ ಕ್ಷಮಿಸುವ ಔದಾರ್ಯತೆಯನ್ನ ನಮ್ಮ ಧರ್ಮ ಹೇಳಿಕೊಟ್ಟಿದೆ. ಹಾಗೇಯೇ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ನೀಡಲು ಕೂಡ ನಮ್ಮ ಸನಾತನ ಧರ್ಮ ಹೇಳಿಕೊಟ್ಟಿದೆ.

✍️ ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು.