ಗುರುರಾಜ್ ಪೂಜಾರಿ ಕಾಮನ್‍ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತದ ವೆಯ್ಟ್ ಲಿಫ್ಟರ್. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ-ಬೈಂದೂರು ಮೂಲದವರಾಗಿರುವ ಇವರು ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಟ್ರಕ್ ಚಾಲಕನ ಮಗನಾಗಿರುವ ಗುರುರಾಜನಿಗೆ ಒಟ್ಟು ನಾಲ್ವರು ಸಹೋದರರು. ಬಡತನದಲ್ಲೇ ಬಾಲ್ಯವನ್ನು ಕಳೆದ ಗುರುರಾಜ ಪೂಜಾರಿ, 2008ರಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ಕಂಡು, ಪ್ರಭಾವಿತರಾಗಿ ಅವರೂ ದೇಶಕ್ಕೆ ಪದಕ ಗೆಲ್ಲಲೇಬೇಕು ಎಂದು ದೃಢಸಂಕಲ್ಪ ಮಾಡಿದರು. ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ ಗುರುರಾಜ, ನಂತರ ಶಾಲೆಯ ಶಿಕ್ಷಕರ ಸಲಹೆಯ ಮೇರೆಗೆ, ವೇಟ್ಲಿಫ್ಟಿಂಗ್ನಲ್ಲಿ ತೊಡಗಿಕೊಂಡರು.
ಸಂಪೂರ್ಣವಾಗಿ ವೇಯ್ಟ್ ಲಿಫ್ಟರ್ ಆಗಿ ತರಬೇತಿ ಪಡೆಯಲು ಆರಂಭಿಸಿದ ಗುರುರಾಜ್, 2018ರ ಕಾಮನ್ವೆಲ್ತ್ ಟೂರ್ನಿಯಲ್ಲಿ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದರು. ಅವರಿಗೆ ಭಾರತೀಯ ಸೇನೆಯನ್ನು ಸೇರಬೇಕು ಎಂಬ ಆಸೆಯಿದ್ದರೂ, ಎತ್ತರದ ಕೊರತೆಯಿಂದಾಗಿ, ವಾಯುಸೇನೆಯಲ್ಲಿ ಉದ್ಯೋಗ ನೀಡಲಾಯಿತು. 2022ರ ಕಾಮನ್ವೆಲ್ತ್ ನಲ್ಲೂ ಇವರು ಪದಕ (ಕಂಚು) ಜಯಿಸಿದ್ದಾರೆ.