ಇತ್ತೀಚೆಗಷ್ಟೇ ದೇಶಾದ್ಯಂತ ಗಾಂಧಿ ಜಯಂತಿ ವಿಜೃಂಭಣೆಯಿಂದ ನಡೆದಿದೆ. ಸತ್ಯ, ಅಹಿಂಸೆಗಳಷ್ಟೇ ಸ್ವಚ್ಛತೆಗೂ ಪ್ರಾಮುಖ್ಯ ಕೊಟ್ಟ ಗಾಂಧೀಜಿಯವರ ಆದರ್ಶವನ್ನು ಕೃತಿಮುಖೇನ ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೆ ತಂದಿದ್ದರು. ಮೊನ್ನೆಯೂ ಮಾನ್ಯ ಪ್ರಧಾನಿಗಳ ಅಪೇಕ್ಷೆಯಂತೆ ದೇಶಾದ್ಯಂತ ‘ಸ್ವಚ್ಛತೆಯೇ ಸೇವೆ’ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಪ್ರಧಾನಿಯವರ ಎಲ್ಲ ಕರೆಗಳನ್ನು ವಿರೋಧಿಸುವ ಅಥವಾ ನಿರ್ಲಕ್ಷಿಸುವ ಕಾಂಗ್ರೆಸಿಗರು ಮೊನ್ನೆ ಮಾತ್ರ ತಾವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗಾಂಧೀಜಿಯ ಹೆಸರನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ, ಗಾಂಧೀಜಿಯವರನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಚಿತ್ರಿಸಿಕೊಂಡು ರಾಜಕೀಯ ನಡೆಸುವ ಕಾಂಗ್ರೆಸಿಗರು ಮೊನ್ನೆ ನಡೆಸಿದ ಸ್ವಚ್ಛತಾ ಕಾರ್ಯಕ್ರಮ ಗಾಂಧಿಜಿಯವರ ತತ್ತ್ವಗಳನ್ನು ಪಾಲಿಸಲಿಕ್ಕಾಗಿಯೋ ಆಥವಾ ಇದೂ ಕೇವಲ ರಾಜಕೀಯ ಅಜೆಂಡಾ ಮಾತ್ರವಾಗಿತ್ತೋ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಏಕೆಂದರೆ ಕಾಂಗ್ರೆಸಿನ ನಡೆಯಲ್ಲಿ ಹಲವು ವೈರುಧ್ಯಗಳಿವೆ. ಗಾಂಧಿಜಿಯವರ ಕೆಲವು ನಡೆ-ನುಡಿಗಳನ್ನು ಮಾತ್ರ ಎತ್ತಿಕೊಂಡು ರಾಜಕೀಯ ನಡೆಸುವ ಕಾಂಗ್ರೆಸ್ ಗಾಂಧೀಜಿಯ ಇನ್ನೂ ಹಲವು ಬಹುಮುಖ್ಯ ಧೋರಣೆಗಳನ್ನು ಮುಚ್ಚಿಡುತ್ತದೆ. ಗಾಂಧೀಜಿಯವರ ಹಿಂದುತ್ವದ ಪರಿಕಲ್ಪನೆ, ಗೋಹತ್ಯಾ ನಿಷೇಧದ ಬಗ್ಗೆ ಅವರಿಗಿದ್ದ ಧೋರಣೆ ಮೊದಲಾದ ಸಂಗತಿಗಳನ್ನು ಸ್ಪರ್ಶ ಕೂಡ ಮಾಡದೇ ‘ನಕಲಿ ಗಾಂಧಿತನ’ ತೋರುವುದು ಕಾಂಗ್ರೆಸಿನ ಜಾಯಮಾನ. ಅದಕ್ಕೆ ಇಂಬು ಕೊಡುವಂತೆ ಮಾಡಿದ್ದು ಇತ್ತೀಚೆಗೆ ರಾಜ್ಯದ ಅಬಕಾರಿ ಸಚಿವರು ಕೊಟ್ಟ ಅಚ್ಚರಿಯ ಹೇಳಿಕೆ!
ಕಾಂಗ್ರೆಸ್ ವಿವಾದವನ್ನೇ ಅಪ್ಪಿಕೊಂಡು ಮುದ್ದಾಡುವಂತಹ ಪಕ್ಷವೆಂದರೆ ತಪ್ಪಾಗುವುದಿಲ್ಲ. ಕಾಂಗ್ರೆಸಿಗರು ವಿವಾದವಾಗಲಿ; ಆ ವಿವಾದದ ಮೂಲಕವಾದರೂ ತಮ್ಮ ಹೆಸರು ಮುನ್ನೆಲೆಗೆ ಬರಲಿ ಎಂದು ಹೇಳಿಕೆ ಕೊಡುತ್ತಾರೋ ಎನ್ನುವ ಪ್ರಶ್ನೆ ಈಗ ಜನರಲ್ಲಿ ಮೂಡಿದೆ. ಮಾತೆತ್ತಿದರೆ ಗಾಂಧಿ ಹೆಸರು ಪ್ರಸ್ತಾಪಿಸುವ ಕಾಂಗ್ರೆಸ್ ಪಕ್ಷದವರು ವಿರೋಧ ಮಾಡುವುದು ಮಾತ್ರ ಗಾಂಧಿ ತತ್ವವನ್ನೇ ಎನ್ನುವುದು ಆಶ್ಚರ್ಯಕರ. ಇತ್ತೀಚೆಗಷ್ಟೇ ಅಬಕಾರಿ ಖಾತೆ ಸಚಿವ ಆರ್. ಬಿ. ತಿಮ್ಮಾಪೂರ “ಜನಸಂಖ್ಯೆಗೆ ತಕ್ಕಂತೆ ಮದ್ಯದಂಗಡಿ ಇಲ್ಲ. ಗ್ರಾಮೀಣ ಭಾಗದಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿ ತೆರೆಯಬೇಕು” ಎನ್ನುವ ಹೇಳಿಕೆ ಕೊಟ್ಟಿದ್ದಾರೆ! ಈ ಹೇಳಿಕೆಯನ್ನು ಕೇಳಿದಾಗ ಕಾಂಗ್ರೆಸಿನ ಇಬ್ಬಗೆ ನೀತಿ, ವೈಚಾರಿಕ ಅಸ್ಪಷ್ಟತೆ ಎಷ್ಟರಮಟ್ಟಿಗಿದೆ ಎಂದು ಅಂದಾಜಿಸಬಹುದು. ಮಹಾತ್ಮ ಗಾಂಧೀಜಿಯವರು ಕುಡಿತದ ಬಗ್ಗೆ ಹೀಗೆಂದಿದ್ದರು: “ಕುಡಿತದ ಅಭ್ಯಾಸವು ಮನುಷ್ಯನ ಆತ್ಮವನ್ನು ನಾಶಪಡಿಸುತ್ತದೆ ಮತ್ತು ಅವನನ್ನು ಮೃಗವಾಗಿ ಪರಿವರ್ತಿಸುತ್ತದೆ. ಹೆಂಡತಿ, ತಾಯಿ ಮತ್ತು ಸಹೋದರಿಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಆತ ಅಸಮರ್ಥನಾಗುತ್ತಾನೆ.” ಕುಡಿತವನ್ನು ಕಟುವಾಗಿ ಟೀಕಿಸದ, ನಶಾಮುಕ್ತ-ಸದೃಢ ಭಾರತದ ಕನಸುಕಂಡ ಮಹಾತ್ಮ ಗಾಂಧೀಜಿಯೆಲ್ಲಿ? ಗಾಂಧೀಜಿಯ ಹೆಸರಿನಲ್ಲಿ ಆಡಳಿತ ನಡೆಸುವ ಈ ನಕಲಿ ಗಾಂಧಿವಾದಿಗಳೆಲ್ಲಿ? ಇಂಥ ತಾತ್ವಿಕ ಸಂಗತಿಗಳಲ್ಲೇ ಸ್ಪಷ್ಟತೆಯಿರದ ಕಾಂಗ್ರೆಸಿಗರು ಗಾಂಧಿ ಜಯಂತಿಯಂದು ಪೊರಕೆ ಹಿಡಿದುಬಿಟ್ಟರೆ ಅದರಲ್ಲಿ ಅರ್ಥವಿದೆಯೇ?
ಈಗಾಗಲೇ ರಾಜ್ಯ ಬರಗಾಲದಿಂದ ತತ್ತರಿಸಿಹೋಗಿದೆ. ಈ ನಡುವೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ಜನರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಕಾರಣವಾಗಿದೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿ ಬೇಕು ಎನ್ನುವ ಹೇಳಿಕೆ ನೀಡುವುದನ್ನು ನೋಡಿದರೆ ಮಾನ್ಯ ಅಬಕಾರಿ ಮಂತ್ರಿಯವರ ಗುರಿ ರಾಜ್ಯದ ಜನರನ್ನು ಕುಡುಕರನ್ನಾಗಿಸುವುದೇ ಅಥವಾ ಅವರನ್ನು ಜೀವನಮಟ್ಟವನ್ನು ಸುಧಾರಿಸುವುದೇ ಎನ್ನುವ ಪ್ರಶ್ನೆ ಏಳುತ್ತದೆ. ನಾಡಿನ ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಬಗ್ಗೆ ಕಾಳಜಿಯಿರದ ಸರ್ಕಾರಕ್ಕೆ ಮದ್ಯದಂಗಡಿ ಹೆಚ್ಚಿಸುವ ಯೋಚನೆ ಬಂದಿದ್ದು ಹೇಗೆ? ಎಂದು ಪ್ರಶ್ನೆ ಮಾಡಿಕೊಂಡರೆ ವಿಷಾದ ಮಾತ್ರ ಉತ್ತರವಾಗಿ ನಿಲ್ಲುತ್ತದೆ. ಆನ ಸರ್ಕಾರವನ್ನು ಆಯ್ಕೆ ಮಾಡುವುದು ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಲೆಂದು. ಅದನ್ನು ಬಿಟ್ಟು ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿ ತೆರೆಯಲಿ ಎಂದಲ್ಲ. ತಮ್ಮದು ಜನಸ್ನೇಹಿ ಸರ್ಕಾರ ಎನ್ನುವ ಕಾಂಗ್ರೆಸ್‌ನಲ್ಲಿರುವ ಇಂತಹ ನಾಯಕರು ಮಾತ್ರ ತಾವು ಸಮಾಜದ ಸ್ವಾಸ್ಥ್ಯ ಕೆಡಿಸುವ ಕುಡುಕ ಸ್ನೇಹಿ ಸರ್ಕಾರ ಎಂದು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಅಷ್ಟಕ್ಕೂ ಸಮಾಜದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಗಬೇಕಿರುವುದೇನು? ಸ್ವಸ್ಥ-ಸದೃಢ ಸಮಾಜದ ಪರಿಕಲ್ಪನೆ ಹೇಗಿರಬೇಕು? ಮಹಾತ್ಮ ಗಾಂಧೀಜಿಯವರ ಕನಸಿನ ಸಮಾಜ ಹೇಗಿತ್ತು? ಇವನ್ನೆಲ್ಲ ರಾಜಕೀಯ ಮುಂದಾಳುಗಳು ಗಂಭೀರವಾಗಿ ಚಿಂತಿಸಿ ಹೆಜ್ಜೆಯಿಟ್ಟರೆ ಇಂಥ ಅಪಸವ್ಯಗಳಿಗೆ ಅಂತ್ಯ ಹಾಡಬಹುದು. ಜನಸಂಖ್ಯೆಗೆ ಅನುಸಾರವಾಗಿ ಆಗಬೇಕಿರುವುದು ಉತ್ತಮ ಸರ್ಕಾರಿ ಆಸ್ಪತ್ರೆ, ಶಾಲೆಗಳು, ಮೂಲಭೂತತ ಸೌಕರ್ಯಗಳೇ ಹೊರತು ಮದ್ಯದಂಗಡಿಗಳಲ್ಲ.
ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಯಲ್ಲಿ ರಾಜ್ಯ ಸಾಕಷ್ಟು ಹಿಂದೆ ಉಳಿದಿದೆ. ಹಲವಾರು ಜಿಲ್ಲೆಗಳ ಜನ ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ಇಲ್ಲದೆ, ತುರ್ತು ಪರಿಸ್ಥಿತಿಗಳಲ್ಲಿ ನೂರಾರು ಕಿ.ಮೀ. ದೂರದ ಆಸ್ಪತ್ರೆಗಳನ್ನು ತಲುಪಲಾರದೆ ಸಂಕ್ಷಟವನ್ನು ಅನುಭವಿಸುತ್ತಿದ್ದಾರೆ. ರಸ್ತೆ ಅಪಘಾತ, ಹೆರಿಗೆ ಮೊದಲಾದ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯಿಲ್ಲದ ಕಾರಣದಿಂದ ಅದೆಷ್ಟೋ ಹಸುಗೂಸುಗಳು, ತಾಯಂದಿರು, ಯುವಕರು ಅಸುನೀಗುತ್ತಿದ್ದಾರರೆ. ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ಜನರು ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿ ಸುಸಜ್ಜಿತ ಆಸ್ಪತ್ರೆಯ ಅವಕಾಶ ಇಲ್ಲದಿರುವುದು. ಹಾಗೇ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ವೈದ್ಯರ ಕೊರತೆ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವಲಂತ ಸಮಸ್ಯೆಯಾಗಿ ಉಳಿದುಬಿಟ್ಟಿದೆ. ಇನ್ನು ರಾಜ್ಯದೆಲ್ಲೆಡೆ ಶಾಲೆಗಳಲ್ಲಿ ಉತ್ತಮ ಕಟ್ಟಡದ ವ್ಯವಸ್ಥೆಯಿಲ್ಲ. ಓದಲು ಬರುವ ಮಕ್ಕಳು ಕ್ಲಾಸ್‌ರೂಮ್‌ಗಳಲ್ಲಿ ಕುಳಿತುಕೊಳ್ಳಲು ಹೆದರುತ್ತಾರೆ. ಏಕೆಂದರೆ ಮಾಳಿಗೆ ಯಾವಾಗ ನಮ್ಮ ಮೇಲೆ ಬೀಳುವುದೋ ಎಂಬಷ್ಟು ಕಟ್ಟಡಗಳು ಜೀರ್ಣಾವಸ್ಥೆ ತಲುಪಿವೆ. ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಲ್ಲಿ ಆ ಭಯದ ವಾತಾವರಣದಿಂದಲೇ ಮರದ ಕೆಳಗೆ ಮಕ್ಕಳನ್ನ ಕೂರಿಸಿ ಪಾಠ ಮಾಡುತ್ತಾರೆ. ಹಾಗೇ ಎಲ್ಲಾ ವಿಷಯವನ್ನು ಒಬ್ಬರೇ ಶಿಕ್ಷಕರು ಪಾಠ ಮಾಡುವ ಶಾಲೆಗಳು ಕೂಡ ಸಾಕಷ್ಟಿವೆ. ಕೇವಲ ಅತಿಥಿ ಶಿಕ್ಷಕರನ್ನು ನೇಮಿಸಿ ಪಾಠ ಮಾಡುವ ಶಾಲೆಗಳ ಸಂಖ್ಯೆಯೂ ಗಣನೀಯವಾಗಿದೆ. ಇಂತಹ ವ್ಯವಸ್ಥೆಯನ್ನ ಸರಿಪಡಿಸದೆ ಸುಖಾಸುಮ್ಮನೆ ನಾವು ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಭಾಷಣ ಬಿಗಿದುಕೊಂಡು, ಮದ್ಯದಂಗಡಿಗಳನ್ನು ಹೆಚ್ಚಿಸುವ ಯೋಚನೆ ಮಾಡಿದರೆ ಪ್ರಯೋಜನ ಏನಿದೆ? ಇಂದು ಕರ್ನಾಟಕದಲ್ಲಿ ಕೆಲ ಸರ್ಕಾರಿ ಶಾಲೆಗಳು ಚೆನ್ನಾಗಿವೆ ಎಂದರೆ ಅದಕ್ಕೆ ಕಾರಣ ಆ ಗ್ರಾಮದ ಸ್ಥಳೀಯ ದಾನಿಗಳು ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು. ಸರ್ಕಾರದ ಅನುದಾನ ಸಮರ್ಪಕವಾಗಿ ಬಾರದೆ ಇರುವ ಕಾರಣ ಗ್ರಾಮಸ್ಥರು ಒಟ್ಟಾಗಿ ಸೇರಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಗನುಗುಣವಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿ. ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳತ್ತ ಬರುವಂತೆ ಮಾಡುವ ಯೋಜನೆಯನ್ನು ರೂಪಿಸಲಿ. ಅದನ್ನು ಬಿಟ್ಟು ಜನರ ದಾರಿತಪ್ಪಿಸುವ ಮದ್ಯದಂಗಡಿಗಳ ಅಭಿವೃದ್ಧಿಯತ್ತ ಗಮನಹರಿಸಿದರೆ ರಾಜ್ಯದ ಭವಿಷ್ಯ ಯಾವ ನಿಟ್ಟಿನಲ್ಲಿ ಸಾಗೀತು?
ಸರ್ಕಾರಿ ಯೋಜನೆಯೊಂದನ್ನು ಪಡೆಯಬೇಕಾದರೆ ಜನರ ಚಪ್ಪಲಿ ಕೂಡ ಸವೆದುಹೋಗುವಷ್ಟು ಮಂದಗತಿಯಲ್ಲಿ ಕೆಲಸಗಳು ನಡೆಯುತ್ತವೆ. ಸರ್ವರ್ ಸಮಸ್ಯೆಗಳು ಗ್ರಾಮೀಣ ಭಾಗದ ಜನರನ್ನ ಹಿಂಡಿ ಹಿಪ್ಪೆ ಮಾಡುತ್ತಿವೆ. ಕೆಲ ಅಧಿಕಾರಿಗಳ ಉಡಾಫೆ, ಉದ್ಧಟತನ, ಸೇವಾ ಮನೋಭಾವನೆಯ ಕೊರತೆ, ಭ್ರಷ್ಟತೆಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ. ಬಹುತೇಕ ಅಧಿಕಾರಿ ವರ್ಗ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಜನರ ಹಿಡಿ ಶಾಪಕ್ಕೆ ಗುರಿಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಡುತ್ತಿದ್ದು, ಜನರಿಗೆ ಮನೆ, ನೀರು, ವಿದ್ಯುತ್ ಸೌಕರ್ಯಗಳು ಇಲ್ಲದಂತಹ ಸಾಕಷ್ಟು ಕುಟುಂಬ ರಾಜ್ಯದಲ್ಲಿವೆ. ಅವರಿಗೆ ಸೌಕರ್ಯಗಳನ್ನು ನೀಡುವ ಕೆಲಸ ಮಾಡಬೇಕೇ ಹೊರತು ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿ ಮಾಡುವುದು ಯಾವುದೇ ಜನಾನುರಾಗಿ ಸರ್ಕಾರದ ಆದ್ಯತೆಯಾಗಬಾರದು. ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭಾಗ್ಯಗಳ ಮೂಲಕ ಜನರನ್ನು ಆಕರ್ಷಿಸಿ, ಬಹುಮತವನ್ನು ಸಾಧಿಸಿ, ಇದೀಗ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಗಳನ್ನು ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ. ಮದ್ಯದಂಗಡಿಗಳನ್ನು ಹೆಚ್ಚಿಸುವ ಕುರಿತು ಅಬಕಾರಿ ಸಚಿವರು ನೀಡಿದ ಹೇಳಿಕೆ ಸಮಾಜದ ಪ್ರಜ್ಞಾವಂತ ಜನರು ಚಿಂತಿಸಬೇಕಾದದ್ದು. ಜನಸ್ನೇಹಿ, ಅಭಿವೃದ್ಧಿಶೀಲ ಯೋಚನೆಗಳನ್ನು ಬಿಟ್ಟು ಇಂಥ ಅಪ್ರಬುದ್ಧ ಯೋಜನೆಗಳ ಹಿಂದೋಡಿದರೆ ಸರ್ಕಾರ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗುವುದರಲ್ಲಿ ಆಶ್ಚರ್ಯವಿಲ್ಲ. ಇನ್ನಾದರೂ ಸಚಿವರು ಇಂತಹ ಅಸಡ್ಡೆಯ ಹೇಳಿಕೆಯನ್ನ ಕೊಡದೆ ಜನರಿಗೆ ಸಹಾಯವಾಗುವಂತೆ ನಡೆದುಕೊಳ್ಳಲಿ ಎನ್ನುವುದು ನಮ್ಮ ಆಶಯ.