ಕುಂದಾಪುರ: ದಿನದಿಂದ ದಿನಕ್ಕೆ ರೈಲು ಪ್ರಯಾಣ ಎನ್ನುವುದು ಜನರಿಗೆ ಬಹಳಷ್ಟು ಅಗತ್ಯವಾಗಿರುವ ಮೂಲಸೌಕರ್ಯಗಳಲ್ಲಿ ಒಂದಾಗಿದೆ. ಕರಾವಳಿ ಭಾಗದ ಜನರ ಜೀವನದ ಕೊಂಡಿ ಆಗಿರುವ ಕೊಂಕಣ ರೈಲು ಸೇವೆ ಎನ್ನುವುದು ಸ್ಥಳೀಯ ಜನರಿಗೆ ಮರಿಚಿಕೆ ಆಗಿದ್ದು ಸೇನಾಪುರ ರೈಲು ನಿಲ್ದಾಣದಲ್ಲಿ ಮುಂಬಯಿ ಮತ್ತು ಬೆಂಗಳೂರು ಎಕ್ಸ್ಪ್ರೆಸ್ ರೈಲು ನಿಲುಗಡೆ ಮಾಡಲು ಸಂಸದರ ಜತೆ ಸೇರಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಕೊಂಕಣ ರೈಲ್ವೆ ಹೋರಾಟ ಸಮಿತಿ ಸೇನಾಪುರ ವತಿಯಿಂದ ಭಾನುವಾರ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಹೋರಾಟ ಸಮಿತಿಯಿಂದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.
ಸೇನಾಪುರದಲ್ಲಿ ಮುಂಬಯಿ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ನಿಲುಗಡೆ ಗೊಂಡರೆ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸುಮಾರು 25 ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಜನರ ಎರಡು ದಶಕಗಳ ಕಾಲದ ಹೋರಾಟದ ಫಲ ಶೀಘ್ರ ದೊರಕಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ. ವೈ. ರಾಘವೇಂದ್ರ ಅವರು ಆಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಸೇನಾಪುರ ರೈಲು ನಿಲ್ದಾಣದಲ್ಲಿ ಮುಂಬಯಿ ಮತ್ತು ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ನಿಲುಗಡೆ ಮಾಡಲು ಎಲ್ಲಾ ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೈಂದೂರು ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದಂತೆ ಸೇನಾಪುರ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ನಷ್ಟದಲ್ಲಿರುವ ಕೊಂಕಣ ರೈಲು ನಿಗಮವನ್ನು ಸದರ್ನ್ ರೈಲ್ವೆಗೆ ಮರ್ಜ್ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಮಾಜಿ ತಾ. ಪಂ. ಅಧ್ಯಕ್ಷ ಶಂಕರ ಶೆಟ್ಟಿ ಬೆಳ್ಳಾಡಿ ಮಾತನಾಡಿ, ಕೋಟ್ಯಾಂತರ ರೂಪಾಯಿ ಹಣ ವಿನಿಯೋಗ ಮಾಡಿ ಡಬ್ಬಲ್ ಟ್ರ್ಯಾಕ್ ಹಳಿ ನಿರ್ಮಾಣ ಮಾಡಿದ್ದರು ಯೋಜನೆಯ ಸದ್ಬಳಕೆ ಇನ್ನೂ ಕೂಡ ಆಗಿಲ್ಲ. ದಶಕಗಳಿಂದ ಹಲವಾರು ಹೋರಾಟಗಳನ್ನು ಮಾಡಿದ್ದರು ಸರಕಾರ ಯಾವುದೇ ರೀತಿ ಸ್ಪಂದನೆ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ರೀತಿಯ ಅನ್ಯಾಯ ಜನರಿಗೆ ಆಗಿದೆ. ಗ್ರಾಮೀಣ ಭಾಗದ ಜನರಿಗೆ ಬಹುಪಯೋಗಿ ಆಗಿರುವ ಮುಂಬಯಿ ಮತ್ತು ಬೆಂಗಳೂರು ರೈಲು ನಿಲುಗಡೆ ಜನಪ್ರತಿನಿಧಿಗಳು ಮತ್ತು ಸರಕಾರ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದರು. ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರೀತಿಯ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿದರು.

ಮಾಜಿ ತಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಡಿಕೆ ಮಾತನಾಡಿ, ನಮ್ಮ ಹೋರಾಟಕ್ಕೆ ಸಂಸದರು ಮತ್ತು ಶಾಸಕರು ಸ್ಪಂದನೆ ಮಾಡಿರುವುದು ಎರಡು ದಶಕಗಳ ಕಾಲದ ಬೇಡಿಕೆ ಈಡೇರಿಕೆ ಆಗುವ ಆಶಾಭಾವನೆ ಮೂಡಿದೆ ಎಂದರು.
ಮಾಜಿ ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ನಾಡ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ, ಆಲೂರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವಿ ಶೆಟ್ಟಿ ಆಲೂರು, ಹಕ್ಲಾಡಿ ಮಾಜಿ ಅಧ್ಯಕ್ಷ ಚೇತನ್ ಮೊಗವೀರ, ಮಾಜಿ ತಾ.ಪಂ ಸದಸ್ಯ ಸುರೇಂದ್ರ ಖಾರ್ವಿ ಗಂಗೊಳ್ಳಿ ಮತ್ತು ಕೆನಡಿ ಪಿರೇರಾ, ಕಡಿಕೆ ಪ್ರವೀಣ್ ಕುಮಾರ್ ಶೆಟ್ಟಿ, ಪಂಚಾಯಿತಿ ಸದಸ್ಯ ಬಸವ ನಾಯ್ಕ್, ಗ್ರಾಮಸ್ಥರು, ಹೋರಾಟ ಸಮಿತಿ ಸದಸ್ಯರು, ರೈಲ್ವೆ ಇಲಾಖೆ ರೀಜನಲ್ ಮ್ಯಾನೇಜರ್ ಬಾಲಸಾಹೇಬ್ ನಿಕ್ಕಮ್, ರೀಜನಲ್ ಟ್ರಾಫಿಕ್ ಮ್ಯಾನೇಜರ್ ವಿನಯ್ ಕುಮಾರ್, ಜನ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಸ್ಟೇಷನ್ ಮಾಸ್ಟರ್ ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಹೋರಾಟ ಸಮಿತಿ ವತಿಯಿಂದ ರೈಲ್ವೆ ಇಲಾಖೆ ರೀಜನಲ್ ಮ್ಯಾನೇಜರ್ ಅವರಿಗೆ ಮನವಿಯನ್ನು ನೀಡಲಾಯಿತು. ಗೋಪಾಲಕೃಷ್ಣ ನಾಡ ಸ್ವಾಗತಿಸಿ, ವಂದಿಸಿದರು.
