ಶಾಸಕ ಗುರುರಾಜ ಗಂಟಿಹೊಳೆ ಅವರ #WelcomeSehwag ಅಭಿಯಾನಕ್ಕೆ ಕೈಗೂಡಿಸಿದ ಶಾಲಾ ಮಕ್ಕಳು

ಬೆಂಗಳೂರು : ಜಾಗತಿಕವಾಗಿ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷ ದ್ವೀಪ ಭೇಟಿಯು ಬೈಂದೂರು ಕ್ಷೇತ್ರದಲ್ಲಿ ಮಾರ್ದನಿಸಿದೆ. ಲಕ್ಷದ್ವೀಪದ ಪ್ರವಾಸದ ಬಳಿಕ ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋದೊಂದಿಗೆ ಲಕ್ಷದ್ವೀಪದ ಪ್ರಾಕೃತಿಕ ಸೌಂದರ್ಯವನ್ನು ಹೊಗಳಿದ್ದರು. ಪ್ರಧಾನಿ ಒಂದು ಸಣ್ಣ ನಡೆಯು ಮಾಲ್ಡೀವ್ಸ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಮೂಲಕ ಅಲ್ಲಿನ ಬೀಚ್‌ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿತ್ತು. ಇದರ ಬೆನ್ನಲ್ಲೇ ದೇಶಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಯಾಯಿತು. ಇದಕ್ಕೆ ದೇಶದ ಖ್ಯಾತನಾಮರು ʼಎಕ್ಸ್‌ʼ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

ಖ್ಯಾತ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹವಾಗ್‌ ಅವರು ಉಡುಪಿ ಜಿಲ್ಲೆಯ ತ್ರಾಸಿ ಬೀಚ್ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ಬೀಚ್ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದರು. ಇದನ್ನು ಗಮನಿಸಿದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಕ್ಷೇತ್ರದ ವಿಶ್ವವಿಖ್ಯಾತ ತ್ರಾಸಿ ಮರವಂತೆ ಕಡಲ ತೀರಕ್ಕೆ ಸೆಹ್ವಾಗ್ ಅವರಿಗೆ ಸ್ವಾಗತ ಎಂದು ತಮ್ಮ X ಖಾತೆಯಲ್ಲಿ #WelcomeSehwag ಟ್ಯಾಗ್‌ ಮೂಲಕ ಸ್ವಾಗತಿಸಿದ್ದರು.

ಇದೀಗ ಈ ಅಭಿಯಾನಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಿಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಕಳುಹಿತ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾರಾಪತಿ ಮತ್ತು ಕಡಲತಡಿಗೆ ಹೊಂದಿಕೊಂಡ ಹಲವಾರು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸಾಥ್ ನೀಡಿದ್ದು, ತಾವೇ ತಯಾರಿಸಿದ ಪ್ಲೇ ಕಾರ್ಡ್ಸ್ ಪ್ರದರ್ಶಿಸುವ ಮೂಲಕ ವಿರೇಂದ್ರ ಸೆಹವಾಗ್‌ ಅವರನ್ನು ಬೈಂದೂರಿಗೆ ಕೈಬೀಸಿ ಕರೆಯುತ್ತಿದ್ದಾರೆ. ಮಕ್ಕಳ ಕೈಯಲ್ಲಿ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ, Viru Paaji We Welcome You, ಕೊಡಚಾದ್ರಿಯ ಚಾರಣ ಮರವಂತೆಯ ಬೀಚ್‌ ವಾಕ್ ಪಡುವರಿಯ ಸಮುದ್ರ ಸ್ನಾನ Lets Explore Byndoor ಎಂದೆಲ್ಲ ಬರೆದಿರುವ ಕಾರ್ಡುಗಳ ಜೊತೆಗೆ ಉತ್ಸಾಹದ ಧ್ವನಿಯೊಂದಿಗೆ ಘೋಷಣೆ ಕೂಗುತ್ತಾ ಸರ್ಕಾರಿ ಶಾಲಾ ಮಕ್ಕಳು ಬೈಂದೂರಿನ ಪ್ರವಾಸಿ ತಾಣಗಳ ಸೊಬಗನ್ನು ಆಸ್ವಾದಿಸಿ ಎಂದು ಮನವಿ ಮಾಡಿದರು.