ಶಿಕ್ಷಣ ನೀತಿ ಬೇಕಿರುವುದು ಸರಕಾರಕ್ಕೋ, ವಿದ್ಯಾರ್ಥಿಗಳಿಗೋ?

ಆಧುನಿಕ ಜಗತ್ತಿನಲ್ಲಿ ಗ್ರಾಮ-ಗ್ರಾಮಗಳ, ನಗರ-ನಗರಗಳ ನಡುವಿನ ಪರಸ್ಪರ ಸ್ಪರ್ಧೆಯ ಮನೋಭಾವ ಹೋಗಿ, ದೇಶ-ದೇಶಗಳ ನಡುವೆ ಆರೋಗ್ಯಕರ ಸ್ಪರ್ಧಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಈ ಮೂಲಕ ಇಡೀ ವಿಶ್ವವೇ ಒಂದು ‘ಗ್ಲೋಬಲ್ ವಿಲೇಜ್’ನಂತಾಗಿದೆ. ಹಾಗಾಗಿ, ನಮ್ಮ ಇಂದಿನ ಮಕ್ಕಳು ವಿಶ್ವಮಟ್ಟದಲ್ಲಿ ಬೆಳೆಯಬೇಕಾದ ವಾತಾವರಣ ಸಹಜವಾಗಿಯೇ ನಿರ್ಮಾಣವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಅನುಪಮ ಕೊಡುಗೆಯನ್ನು ನೀಡಬಲ್ಲದು.

ಸಿಂಧೂ ನಾಗರಿಕತೆಯ ಕಾಲಘಟ್ಟದಲ್ಲಿ ಭಾರತೀಯ ಗುರುಕುಲ ಪದ್ಧತಿಯ ಶಿಕ್ಷಣ ಕ್ರಮವಿತ್ತು. ಮಾನವನಿಗೆ ಅಕ್ಷರಜ್ಞಾನ ಮತ್ತು ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಪ್ರಭಾವಶಾಲಿಯಾಗಿ ಬೋಧಿಸಿದ ಪರಿಣಾಮ ಈ ಪದ್ದತಿಯನ್ನು ಇಡೀ ಜಗತ್ತು ಬೆರಗುಗಣ್ಣುಗಳಿಂದ ನೋಡಿತ್ತು. ಪ್ರಾಕ್ಟಿಕಲ್ ಬದುಕಿನೊಂದಿಗೆ ಶಿಕ್ಷಣ ಮತ್ತು ಶಾಸ್ತ್ರ- ಸಂಸ್ಕಾರಗಳ ಆಚರಣೆಯಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಈ ಎರಡು ವಿಷಯಗಳು ಭಾರತೀಯರನ್ನು ಸದಾ ರಾಷ್ಟ್ರಪ್ರೇಮಿ ಗಳನ್ನಾಗಿ, ಧರ್ಮಾಚರಣೆಯಲ್ಲಿ ಉತ್ತುಂಗದಲ್ಲಿಟ್ಟವು. ಇದು ಬ್ರಿಟಿಷರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಹಾಗಾಗಿ ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿಯು ಭಾರತದಲ್ಲಿ ತಳವೂರು ವಂತಾಯಿತು. ಆದರೆ ಮೆಕಾಲೆ ಪದ್ಧತಿಯನ್ನನುಸರಿಸಿದರೆ ಭಾರತದ ಯುಮವಿದ್ಯಾರ್ಥಿ ಸಮೂಹ ಜಾಗತಿಕ ಸ್ಪರ್ಧೆಗೆ ಅಣಿ ಗೊಳ್ಳಲು ಅಸಾಧ್ಯ. ಆದ್ದರಿಂದ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿರುವುದು ಇಂದಿನ ಜರೂರು.

ಮೆಕಾಲೆ ಪದ್ಧತಿ ಭಾರತದಲ್ಲಿ ತಳವೂರಿದ್ದು ಹೇಗೆ ಎಂಬುದನ್ನು ಕೊಂಚ ಅವಲೋಕಿಸೋಣ. ನಮ್ಮ ಗುರುಕುಲ ಪದ್ಧತಿಯ ವಿಷಯ ಲಂಡನ್ನಿನ ಹೌಸ್ ಆಫ್ ಲಾರ್ಡ್‌ವರೆಗೂ ತಲುಪಿ ಚರ್ಚೆಯ ವಿಷಯವಾಯಿತು. ಹೀಗಾಗಿ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ ಎಂಬುವವನಿಗೆ ಇದರ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಆದೇಶಿಸಲಾಯಿತು. ಈತನ Minute of Indian Education ಎಂಬ ವರದಿ ಯಲ್ಲಿ ಆಂಗ್ಲ ಮಾಧ್ಯಮ ಮತ್ತು ಐರೋಪ್ಯ ನೀತಿಯನ್ನು ಹೇಗೆ ಹೇರಬೇಕು ಎಂಬುದರ ವಿವರ ದಾಖಲಾಗಿತ್ತು. ಇದಕ್ಕೆ ಸಂಪೂರ್ಣ ಬೆಂಬಲವಿತ್ತ ವಿಲಿಯಂ ಬೆಂಟಿಕ್, ಮೆಕಾಲೆಗೆ ಎಲ್ಲ ತರಹದ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ನೀಡುತ್ತಾನೆ. ಈ ಮೂಲಕ 1834ರ ಜೂನ್‌ನಲ್ಲಿ President of the General committee of public instruction (GCPI) ಆಗಿ ಮೆಕಾಲೆ ಭಾರತಕ್ಕೆ ಬಂದಿಳಿಯುತ್ತಾನೆ.

ಭಾರತದಲ್ಲಿ ಶಿಕ್ಷಣಕ್ಕೆಂದೇ ಮೊಟ್ಟಮೊದಲು Charter Act- 1813ರಲ್ಲಿ 1 ಲಕ್ಷ ರು. ಹಣವನ್ನು ಮೀಸಲಿಡಲಾಗಿರು ತ್ತದೆ. ಇದರ ಮುಂದಿನ ಭಾಗವಾಗಿ ‘ಮಾಡರ್ನ್ ಎಜುಕೇಷನ್’ ಎಂಬ ಹೆಸರಿನಲ್ಲಿ ಪುರಾತನ ಭಾರತೀಯ ಶಿಕ್ಷಣ ಪದ್ಧತಿಯ ಜಾಗಕ್ಕೆ ಇಂಗ್ಲಿಷ್, ಅರೇಬಿಕ್, ಯುರೋಪಿನ ಗಣಿತ, ಲಾಭದಾಯಕ ಹೂಡಿಕೆ ಎಂಬ ಪೆಡಂಭೂತವನ್ನು ಸಮಸ್ತ ಭಾರತೀಯರ ಹೆಗಲಿಗೆ ನೇತುಹಾಕಿ ಹೊರಡುತ್ತಾನೆ. ಆದರೆ ಅಮೃತ ಕಾಲದ ಮಹತ್ತರ ಘಟ್ಟಕ್ಕೆ ಬಂದು ನಿಂತರೂ, ಈ ಮೆಕಾಲೆ ಶಿಕ್ಷಣ ಪದ್ಧತಿಯು ಸುಧಾರಿಸದಿರುವುದು ವಿಪರ್ಯಾಸ. ತಮ್ಮ ರಾಜಕೀಯ ಪ್ರತಿಷ್ಠೆಗೆ, ತಂತಮ್ಮ ಪಕ್ಷದ ಮಾಲೀಕರನ್ನು ಮೆಚ್ಚಿಸಲಿಕ್ಕೆ, ತಮ್ಮದೇ ಮಕ್ಕಳ ಮೇಲೆ ಮತ್ತು ಅವರ ಶಿಕ್ಷಣದ ಜತೆಗೆ ಕೆಲವರು ಆಟವಾಡುತ್ತಿದ್ದಾರೆ.

ಆಧುನಿಕ ಜಗತ್ತಿನಲ್ಲಿ ಗ್ರಾಮ-ಗ್ರಾಮಗಳ, ನಗರ-ನಗರಗಳ ನಡುವಿನ ಪರಸ್ಪರ ಸ್ಪರ್ಧೆಯ ಮನೋಭಾವ ಹೋಗಿ, ದೇಶ-ದೇಶಗಳ ನಡುವೆ ಆರೋಗ್ಯಕರ, ಸ್ಪರ್ಧಾತ್ಮಕ ಬೆಳವಣಿಗೆ ಗಳು ನಡೆಯುತ್ತಿವೆ. ಈ ಮೂಲಕ ಇಡೀ ವಿಶ್ವವೇ ಒಂದು ‘ಗ್ಲೋಬಲ್ ವಿಲೇಜ್’ನಂತಾಗಿದೆ. ಹಾಗಾಗಿ, ನಮ್ಮ ಇಂದಿನ ಮಕ್ಕಳು ವಿಶ್ವಮಟ್ಟದಲ್ಲಿ ಬೆಳೆಯಬೇಕಾದ ವಾತಾವರಣ ಸಹಜ ವಾಗಿಯೇ ನಿರ್ಮಾಣವಾಗಿದೆ. ಸದ್ಯ ಐರೋಪ್ಯ ರಾಷ್ಟ್ರಗಳನ್ನು ನೋಡುವುದಾದರೆ, ಕೈಗಾರಿಕಾ ಕ್ರಾಂತಿಯಾದ ಮೇಲೆ ಒಂದು ಮಹತ್ತರ ಕಾಲಘಟ್ಟಕ್ಕೆ ಜಗತ್ತು ತನ್ನನ್ನು ತೆರೆದುಕೊಂಡಿತು. ಆ ಮೂಲಕ ಉದ್ಯೋಗ, ಶಿಕ್ಷಣ, ಮೂಲಭೂತ ಸೌಕರ್ಯ, ಮಾನವ ಹಕ್ಕುಗಳ ಹಂಚಿಕೆ ಕುರಿತಾಗಿ ಜಾಗೃತಿ ಮೂಡಿತು. ಇಂಥ ವಿಚಾರದಲ್ಲಿ ಏಕರೂಪದ ವ್ಯವಸ್ಥೆಯನ್ನು ಎಲ್ಲ ರಂಗದಲ್ಲೂ ಜಾರಿಗೊಳಿಸುತ್ತ ಬರಲಾಯಿತು. ಇದರಲ್ಲಿ ಶಿಕ್ಷಣ ಕ್ಷೇತ್ರವು ಆದ್ಯತೆಯ ವಲಯವಾಗಿ ಪರಿಗಣಿಸಲ್ಪಟ್ಟಿದೆ.

ಜಪಾನ್‌ನಂಥ ದೇಶಗಳಲ್ಲಿ ಶಿಕ್ಷಣವನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಪರಿಗಣಿಸಿ, ಮುಂದಿನ ಜನಾಂಗವನ್ನು ತಯಾರು ಗೊಳಿಸುವ ಏಕರೂಪದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಅವರು ಉಳಿದ ದೇಶಗಳಿಗಿಂತ ನೂರು ಹೆಜ್ಜೆ ಮುಂದಿದ್ದಾರೆ ಎನ್ನಬಹುದು. ಹಾಗಾಗಿ, ನಮ್ಮ ದೇಶದಲ್ಲೂ ಶಿಕ್ಷಣದಲ್ಲಿ ಬದಲಾವಣೆ ಮತ್ತು ಸುಧಾರಣೆ ತರಲು ಆಯಾ ಕಾಲಘಟ್ಟದ ಸರಕಾರಗಳು ಹಲವು ಬಾರಿ ಕ್ರಮ ವಹಿಸಿವೆ ಎನ್ನಬಹುದು. ಈ ಹಿಂದೆ 1968ರಲ್ಲಿ ಇಂದಿರಾ ಗಾಂಧಿಯವರು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ತಂದರು. ನಂತರ ರಾಜೀವ್‌ ಗಾಂಧಿಯವರು 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಷ್ಕರಿಸಿ ನೋಡಿದರು. ಇದಾಗಿ ದಶಕಗಳೇ ಕಳೆದರೂ ಅದೇ ಶಿಕ್ಷಣ ನೀತಿಯು ನಿಂತ ನೀರಿನಂತೆ, ಉರುಹೊಡೆದ ವಿದ್ಯಾರ್ಥಿ ಯಂತೆ, ಕಲಿಸಿದ್ದನ್ನೇ ಕಲಿಸುತ್ತ ಬಂದು, ಈ ವಲಯವು ಯಾರನ್ನು ಮತ್ತು ಯಾತಕ್ಕಾಗಿ ತಯಾರು ಮಾಡುತ್ತಿದ್ದೇವೆ ಎಂಬುದನ್ನೇ ಮರೆತುಹೋಗುವಷ್ಟು ಜಡ್ಡು ಹಿಡಿದಿತ್ತು.

ಇಂಥ ಸಂದರ್ಭದಲ್ಲಿ ಬದಲಾದ ಜಾಗತಿಕ ವಿದ್ಯಮಾನ, ಸ್ಪರ್ಧಾತ್ಮಕ ಯುಗ, ಹೊಸ ಹೊಸ ಬೆಳವಣಿಗೆಗಳಿಂದಾಗಿ ಜನರೂ ಸರಕಾರಕ್ಕೆ ಬಿಸಿ ಮುಟ್ಟಿಸಲಾರಂಭಿಸಿದರು. ಈ ವಿಚಾರದಲ್ಲಿ ಪ್ರಧಾನಿ ಮೋದಿಯವರ ಸರಕಾರವು ಒಂದು ತಜ್ಞರ ಸಮಿತಿ ಯನ್ನು ನೇಮಿಸಿ, ಆಮೂಲಾಗ್ರ ಅಧ್ಯಯನದ ವರದಿ ಪಡೆದು ಕೊಂಡು, ಪ್ರಸಕ್ತ ಬದುಕಿಗೆ ಬೇಕಾದ ಮತ್ತು ಭವಿಷ್ಯದ ಯೋಚನೆ -ಯೋಜನೆಗೆ ಪೂರಕವಾಗುವಂತೆ 2020ರ ಜುಲೈನಲ್ಲಿ ‘ಒಂದು ದೇಶ, ಒಂದು ಶಿಕ್ಷಣ’ ಎಂಬಂತೆ ‘ರಾಷ್ಟ್ರೀಯ ಶಿಕ್ಷಣ ನೀತಿ’ ಯನ್ನು ಜಾರಿಗೆ ತಂದಿತು. ಭಾರತದಲ್ಲಿನ ಕಲಿಕಾಕ್ರಮ, ಪಠ್ಯಕ್ರಮ ಮತ್ತು ಪಠ್ಯದ ಮಿತಿ ಇತ್ಯಾದಿಯನ್ನು ಈ ಎನ್ ಸಿಇಆರ್‌ಟಿ ತಜ್ಞರ ತಂಡವು ಗಮನಿಸುತ್ತಿರುತ್ತದೆ. ಸಿಬಿಎಸ್‌ಇ ಶಿಕ್ಷಣ ಕ್ರಮವು ದೇಶಾದ್ಯಂತ ಏಕರೂಪದ ಮತ್ತು ಪ್ರಾಕ್ಟಿಕಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದರಿಂದ, ವಿದ್ಯಾರ್ಥಿಗಳು ಗ್ರಹಿಸುವುದಕ್ಕೆ ಮತ್ತು ಅವರ ಪ್ರತಿಭೆಯ ಅಭಿವ್ಯಕ್ತಿಗೆ ಸೂಕ್ತ ವೇದಿಕೆಯಾಗಿಯೂ ಪರಿಗಣಿಸಲ್ಪಟ್ಟಿದೆ.

ಈ ಮೊದಲು ದೇಶದಲ್ಲಿ ಹಲವು ಸ್ಟೇಟ್ ಎಜುಕೇಷನ್ ಬೋರ್ಡ್‌ಗಳಿದ್ದರೂ, ವಿದ್ಯಾರ್ಥಿಗಳ ಆದ್ಯತೆ ಮತ್ತು ಆಸಕ್ತಿಯ ಮೇರೆಗೆ ಆಯಾ ರಾಜ್ಯಗಳು ನಿಧಾನವಾಗಿ ಸುಧಾರಣೆಯ ಮತ್ತು ಏಕರೂಪದ ರಾಷ್ಟ್ರೀಯ ಶಿಕ್ಷಣ ನೀತಿಯ ಕಡೆಗೆ ಗಮನ ಕೊಡಲು ಪ್ರಾರಂಭಿಸಿದವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ 6 ತಿಂಗಳ ಹಿಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಮೊದಲ ದಿನವೇ, ‘ನಾವು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪೋದಿಲ್ಲ. ನಮ್ಮದೇ ಆದ ಸ್ಟೇಟ್ ಎಜುಕೇಷನ್‌ ಪಾಲಿಸಿಯನ್ನು (ಎಸ್‌ಇಪಿ) ಜಾರಿಗೆ ತರುತ್ತೇವೆ ಎಂದು ಘೋಷಿಸಿತು.

ನುರಿತ ಶಿಕ್ಷಣ ತಜ್ಞರು ಹಲವು ವರ್ಷಗಳ ಕಾಲ ಸತತ ಅಧ್ಯಯನ ನಡೆಸಿ, ಜನಾಭಿಪ್ರಾಯ ಸಂಗ್ರಹಿಸಿ, ಇತರ ದೇಶ ಗಳೊಂದಿಗೆ ನಮ್ಮ ಮಕ್ಕಳು ಮುಂದಿನ ದಶಕಗಳವರೆಗೆ ಹೇಗೆ ಪ್ರತಿಸ್ಪರ್ಧಿಗಳಾಗಿ ಬೆಳೆಯಬಹುದು ಎಂಬುದನ್ನು ಗಹನವಾಗಿ ಅರಿತು ವರದಿ ಸಲ್ಲಿಸಿರುತ್ತಾರೆ. ಈ ಕುರಿತು ಗಂಭೀರತೆ ಮತ್ತು ಜಾಣನಡೆ ತೋರಬೇಕಾದ ಸರಕಾರ, ಮಕ್ಕಳ ಭವಿಷ್ಯತ್ತಿನ ವಿಚಾರದಲ್ಲೂ ರಾಜಕೀಯವನ್ನು ತೂರಿಸುತ್ತಿದೆ ಎಂದು ಜನಸಾಮಾನ್ಯರು ಮಾಧ್ಯಮಗಳ ಮುಂದೆ ಅಲವತ್ತುಕೊಳ್ಳುವಂತಾಯಿತು.

ಹಾಗಿದ್ದರೆ, ರಾಜ್ಯ ಸರಕಾರವು ಇಷ್ಟೊಂದು ವಿರೋಧಿಸುವಂಥ ಈ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇರುವುದಾದರೂ ಏನು ಎಂಬುದನ್ನು ಗಮನಿಸೋಣ: 34 ವರ್ಷಗಳ ಬಳಿಕ ಈ ದೇಶದ ಶಿಕ್ಷಣದಲ್ಲಿ, ವಿಶ್ವಮಟ್ಟದಲ್ಲಿ ಗುರುತಿಸುವಂಥ ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಮೋದಿ ಸರಕಾರ ಹೇಳಿತು. Universalize education and make India a global knowledge superpower ow ಧೈಯದೊಂದಿಗೆ ಇದರ ಉಪಕ್ರಮಕ್ಕೆ ನಾವು ಮುಂದಾಗಿದ್ದೇವೆ ಎಂದು ಮೋದಿಯವರು ಹೇಳಿದರು.

ಈ ನೀತಿಯಲ್ಲಿ ಕಲಿಕೆಯ ವ್ಯವಸ್ಥೆಯ ಪರಿಷ್ಕರಣೆ, ಕೌಶಲ ಆಧರಿತ ಶಿಕ್ಷಣ, ವೈಚಾರಿಕತೆ, ಸಮಸ್ಯೆಗಳನ್ನು ಹಲವು ವಿಧಗಳಲ್ಲಿ ಸರಿಪಡಿಸುವಂಥ ಬುದ್ಧಿಮತ್ತೆಗೆ ಆದ್ಯತೆಯಿದೆ. ಸರ್ವರೂ ಸಮಾನರಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಹೊಂದಲು ಅವಕಾಶವಿದೆ. ವಿಶ್ವಮಟ್ಟದಲ್ಲಿರುವ ಸ್ಪರ್ಧೆಯನ್ನು ನಮ್ಮ ಮಕ್ಕಳು ಸುಲಭವಾಗಿ ಎದುರಿಸುವಂತಾಗಬೇಕೆಂಬ ಉದ್ದೇಶದಿಂದ, ಪ್ರಾಕ್ಟಿಕಲ್ ಮತ್ತು ತಾಂತ್ರಿಕ ಬೋಧನೆಯ ಮೂಲಕ ಶಿಕ್ಷಣ ಕಲಿಕೆಗೆ ಆದ್ಯತೆ ಸೇರಿದಂತೆ, ಹೊಸ ಪದ್ಧತಿಯಲ್ಲಿ ಕಲಿಕೆಯ ವಿಂಗಡನೆಯು ಮಕ್ಕಳನ್ನು ಶಿಕ್ಷಣದ ಕಡೆಗೆ ಹೆಚ್ಚು ಸೆಳೆಯುವಲ್ಲಿ ಮತ್ತು ಸರಳ ಮಾರ್ಗದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೊಡಗುವಂತಾಗುವಲ್ಲಿ ಇದನ್ನು ರೂಪಿಸಲಾಗಿದೆ ಎನ್ನಬಹುದು.

ಈ ಹಿಂದೆ ಇದ್ದ 1042 ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರ ವಾಗಿ ಪರಿಷ್ಕರಿಸಿ, 5+3+3+4 ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಸಾಮಾನ್ಯವಾಗಿ ನಾವು ಹಿಂದೆ ಕಲಿಸುತ್ತಾ ಬಂದಿದ್ದ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣ ಎಂಬ ವಿಧಾನಕ್ಕಿಂತ ಕ್ರಾಂತಿಕಾರಿಯಾದ ಬದಲಾವಣೆಯಿದು ಎನ್ನಬಹುದಾಗಿದೆ. ಯಾಕೆಂದರೆ, ಪ್ರತಿ ಶೈಕ್ಷಣಿಕ ಹಂತದಲ್ಲೂ ಮೂಲ ಕೌಶಲದೊಂದಿಗೆ ಜೀವನ ಸಾಮರ್ಥ್ಯ ರೂಪಿಸುವ ಒಂದು ಶಕ್ತಿಯುತ ವಿಧಾನ ಇದಾಗಿದೆ ಎಂದು ಹಲವು ತಜ್ಞರು ಕೂಡ ವಿವಿಧ ಮಾಧ್ಯಮಗಳ ಮೂಲಕ ಬೆಂಬಲಿಸಿದ್ದಾರೆ. ಮೊದಲ 5 ವರ್ಷಗಳನ್ನು ಫೌಂಡೇಷನ್ ಹಂತವೆಂದು (ಪೂರ್ವ ಪ್ರಾಥಮಿಕದ ಮೊದಲ 3 ವರ್ಷಗಳಲ್ಲಿ ತಮಾಷೆ ನಗುವಿನ ಮೂಲಕ ವಿವಿಧ ಚಟುವಟಿಕೆಗಳ ಕಲಿಕೆ. ನಂತರದ 2 ವರ್ಷಗಳಲ್ಲಿ ಶಿಕ್ಷಣದ ಮೂಲಹಂತ ಮತ್ತು ಅಂಕಿ- ಸಂಖ್ಯೆಗಳನ್ನು ಕಲಿಸುವ ಹಂತ) ಕರೆಯಲಾಗಿದೆ. ಪ್ರಿಪರೇಟರಿ ಹಂತದಲ್ಲಿ, ಕಲಿಕೆಯ ಪ್ರಾಥಮಿಕ ಹಂತವಾದ 3ನೇ, 4ನೇ ಮತ್ತು 5ನೇ ತರಗತಿಯಲ್ಲಿ ಬಹುಮುಖಿ ಬೋಧನಾ ವಿಧಾನಕ್ಕೆ ಆದ್ಯತೆ ನೀಡಲಾಗಿದೆ. ಹೊಸ ವಿಷಯಗಳ, ಆವಿಷ್ಕಾರಗಳ, ಅನ್ವೇಷಣಾ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಲು ಒತ್ತುಕೊಡಲಾಗುತ್ತದೆ. ಮುಂದಿನ ಹಂತದ ಪಠ್ಯ ಕ್ರಮವು ಆಳವಾದಾಗ ಅವನ್ನು ಸುಲಭ ವಾಗಿ ಅರಿತುಕೊಳ್ಳಲು ಈ ಹಂತವು ಸಮಗ್ರವಾಗಿ ತಯಾರು ಮಾಡುತ್ತದೆ.

ಮಾಧ್ಯಮಿಕ ಹಂತವು 3 ವರ್ಷದ ಹಂತ. ಇದರಲ್ಲಿ 6, 7, ಮತ್ತು 8ನೇ ತರಗತಿಯ ಮಕ್ಕಳಿಗೆ ಪ್ರತಿ ವಿಷಯದ ಬಗ್ಗೆ ಆಳವಾದ ಅಧ್ಯಯನಕ್ಕೆ ಒತ್ತು ನೀಡಲಾಗಿದೆ. ಅನ್ವೇಷಣೆ, ವಿಮರ್ಶೆಯ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪ್ರಾಜೆಕ್ಟ್ ಆಧರಿತ ಪ್ರಾಕ್ಟಿಕಲ್ ಕಲಿಕೆಗೆ ಕೂಡ ಆದ್ಯತೆ ನೀಡಲಾಗಿದೆ. ಸೆಕೆಂಡರಿ ಹಂತವು ಕೊನೆಯ ಹಂತದ 4 ವರ್ಷಗಳ ಕಲಿಕಾ ಕ್ರಮವಾಗಿದ್ದು, 9ರಿಂದ 12ನೇ ತರಗತಿವರೆಗೆ ಒಳಗೊಂಡಿದೆ. ಇದು ವಿದ್ಯಾರ್ಥಿ ಗಳನ್ನು ಅವರ ಮುಂದಿನ ಭವಿಷ್ಯಕ್ಕಾಗಿ ಪೂರ್ಣ ರೀತಿಯಲ್ಲಿ ಸಿದ್ಧಗೊಳಿಸುವಂತೆ ರೂಪುಗೊಂಡಿದೆ. ಅದು, ಉನ್ನತ ಶಿಕ್ಷಣ ವಾಗಿರಬಹುದು, ವೃತ್ತಿಪರ ಕೌಶಲ ಆಧರಿತ ಮಾರ್ಗಗಳಿರ ಬಹುದು. ವಿದ್ಯಾರ್ಥಿಗಳು ತಾವು ಬಯಸಿದ್ದನ್ನು ಯಾವುದೇ ವಿಭಾಗದಲ್ಲಿ ಆರಿಸಿಕೊಂಡು ಅಧ್ಯಯನ ಮಾಡಬಹುದಾದ ಸುವರ್ಣಾವಕಾಶವನ್ನು ಈ ಹಂತವು ಒದಗಿಸುತ್ತದೆ. ಈ ಮೂಲಕ, ನೈಜ-ಪ್ರಪಂಚದ ಕೌಶಲ ಮತ್ತು ಅದನ್ನು ಎದುರಿ ಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಿಗೆ ಅದು ನೀಡುತ್ತದೆ.

ದೇಶದ, ಪೋಷಕರ ಮತ್ತು ಕಲಿಕಾರ್ಥಿಗಳ ಭವಿಷ್ಯದ ಕುರಿತು ಇಷ್ಟೆಲ್ಲಾ ಉತ್ತಮ ಅಂಶಗಳನ್ನು ಒಳಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಜಾರಿಗೆ ತರುತ್ತಿರುವ, ಪೂರ್ವ ತಯಾರಿ ಮತ್ತು ಸಮಗ್ರ ವಿಚಾರಧಾರೆಯಿಲ್ಲದ, ಏಕತೆ ಬೋಧಿಸದ, ದೇಶ-ವಿದೇಶಗಳ ಕಠಿಣತಮ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬ ಅಂಶಗಳಿಲ್ಲದ ರಾಜ್ಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದೆ. ಅಂಥ ಅವಸರವಾದರೂ ಏನಿದೆ ಎಂಬುದು ಜನರಿಗೆ ತಿಳಿಯದ ವಿಷಯವಾಗಿದೆ.

ಪಠ್ಯಕ್ರಮ ಮತ್ತು ಶಿಕ್ಷಣ ನೀತಿಯ ನಡುವಿನ ವ್ಯತ್ಯಾಸದ ಅರಿವಿಲ್ಲದ, ಕೇವಲ ರಾಜಕೀಯ ಪ್ರತಿಷ್ಠೆಯ ಹಠಕ್ಕೆ ನಾಡಿನ ಮಕ್ಕಳ ಭವಿಷ್ಯದ ಜತೆಗೆ ಆಟವಾಡುವ ಮತ್ತು ಶಿಕ್ಷಣದ ಹಕ್ಕನ್ನು ಬಲವಂತವಾಗಿ ಹೇರುವ ಈ ಒಂದು ನಿರಂಕುಶ ಮನೋಭಾವ ವನ್ನು ಕರ್ನಾಟಕ ಸರಕಾರವು ಕೂಡಲೇ ಕೈಬಿಡಬೇಕು. ರಾಜ್ಯದ ಶಿಕ್ಷಣ ತಜ್ಞರು, ಪೋಷಕರು, ವಿದ್ಯಾರ್ಥಿ ಸಮೂಹ ಇದರ ಕುರಿತು ಜಾಗೃತಿ ಮೂಡಿಸಿ, ಇದು ಜಾರಿಯಾಗದಂತೆ ತಡೆಯಲು ಪ್ರಬಲ ಹೋರಾಟಕ್ಕೆ ಇಳಿಯಬೇಕಿದೆ. ರಾಜಕೀಯ ಪಕ್ಷದ ಸ್ವತ್ತೂ ಅಲ್ಲ, ನಮ್ಮ ಶಿಕ್ಷಣ ನಮ್ಮ ಹಕ್ಕು. ಬಲವಂತದ ಹೇರಿಕೆಯನ್ನು ಸಂಘಟಿತರಾಗಿ ವಿರೋಧಿಸಿ ಹತ್ತಿಕ್ಕೋಣ.