ಬೈಂದೂರು : ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಇದೆ. ಅಧಿಕಾರಿಗಳು ಕೇವಲ ಸಮಸ್ಯೆಗಳ ಪಟ್ಟಿ ಮಾಡುವುದಲ್ಲ. ಬದಲಾಗಿ ಸರಿಪಡಿಸುವ ಚಿಂತನೆಬೇಕು. ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಅಗತ್ಯ. ಸಾರ್ವಜನಿಕರೊಂದಿಗೆ ವಿಶ್ವಾಸ ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಸೂಚಿಸಿದರು.
ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಮಳೆಗಾಲದ ಆರಂಭ ಮತ್ತು ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕೆ ಕುರಿತು ಗುರುವಾರ
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ವಂಡ್ಸೆ ಹೋಬಳಿಯಲ್ಲಿ ಒಂದು ಜೀವ ಹಾನಿ ಸೇರಿ 55 ಮನೆಗಳು ಭಾಗಶಃ ಹಾನಿಗೀಡಾಗಿವೆ. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 30 ಪ್ರಕರಣಗಳು ಸಂಭವಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಹೇಳಿದರು. ತಹಸೀಲ್ದಾರರಿಗೆ, ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮವಾಗಿ ದೋಣಿ ಹಾಗೂ ಜಾಕೆಟ್ ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ ಮುಂದಾಗಬೇಕು. ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಸೂಚಿಸಿದರು.
ಬೇಸಿಗೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಪೂರೈಕೆಗಾಗಿ ಪೈಪ್ಲೈನ್ ಹೊಂಡಗಳು ತೆರೆದಿದ್ದು, ಬಹುತೇಕ ಕಡೆ ಮುಚ್ಚದಿರುವ ಪರಿಣಾಮ ಅಪಾಯಕಾರಿಯಾಗಿದೆ. ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳುವ ಕುರಿತು ದೂರುಗಳ ಬಗ್ಗೆ ಚರ್ಚಿಸಲಾಯಿತು. ಮುಂಗಾರಿನ ಆರಂಭದಲ್ಲೆ ಮೆಸ್ಕಾಂಗೆ 23 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದರು.
ಇಡೂರು- ಕುಂಜ್ಞಾಡಿ, ಕೆಳಹೊಸೂರು ಶಾಲೆಯಲ್ಲಿ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಹಾಳಾಗಿದೆ. ಯಡಮೊಗೆ ಗ್ರಾಪಂ ಎದುರುಗಡೆ ಒಂದು ವರ್ಷದಿಂದ ಮರ ಬೀಳುವ ಸ್ಥಿತಿಯಲ್ಲಿದೆ. ಶಾಲೆಗಳಲ್ಲಿ ರೀಪುಗಳು ಸರಿಯಿಲ್ಲ ಮೊದಲಾದ ಹಲವು ದೂರುಗಳ ಬಗ್ಗೆ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು.
ಬೈಂದೂರು ತಹಸೀಲ್ದಾರ್ ಕೆ. ಶ್ರೀಕಾಂತ ಹೆಗ್ಡೆ , ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಎಚ್. ಜಿ., ಬೈಂದೂರು ತಾಪಂ ಇಒ ಭಾರತಿ ಎನ್., ಕುಂದಾಪುರ ತಾಪಂ ಇಒ ಶಶಿಧರ, ಬೈಂದೂರು ವೃತ್ತನಿರೀಕ್ಷಕ ಸವಿತ್ರ ತೇಜ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ಷೇತ್ರ ವ್ಯಾ ಪ್ತಿಯ ಎಲ್ಲಾ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.
ಡೆಂಗ್ಯೂ ಅರಿವು ಮೂಡಿಸಿ
ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂಬ ತಾಲೂಕು ವೈದ್ಯಾಧಿಕಾರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಗ್ರಾಪಂನಿಂದ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.
ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ
ಈ ಹಿಂದೆ ನರೇಗಾ ಯೋಜನೆಯಡಿ 45 ಕಾಲುಸಂಕಗಳನ್ನು ನಿರ್ಮಿಸಲಾಗಿತ್ತು, ಆದರೆ ಇತ್ತೀಚೆಗೆ ಸರ್ಕಾ ರ ಈ ಯೋಜನೆಯಿಂದ
ಕಾಲುಸಂಕ ನಿರ್ಮಿಸದಂತೆ ನಿರ್ಬಂಧಿಸಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ
ಮಾಡಿಕೊಡುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಮುಂಜಾಗೃತಾ ಕ್ರಮಕೈಗೊಳ್ಳುವ ಮೂಲಕ ಅನಾಹುತಗಳನ್ನು ತಪ್ಪಿಸಬಹುದು. ಈ ಬಗ್ಗೆ ಜನಪ್ರತಿನಿಧಿಗಳು, ಮಾಧ್ಯಮ, ಸಾರ್ವಜನಿಕರೊಂದಿಗೆ ಅಧಿಕಾರಿಗಳ ವಿಶೇಷ ಕಾಳಜಿಯಿದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. -ಗುರುರಾಜ ಗಂಟಿಹೊಳೆ, ಶಾಸಕ
Courtesy : vijayavani