ಅಂತಾರಾಷ್ಟ್ರೀಯ ಉದ್ಯೋಗ ಮೇಳ ಯಶಸ್ಸಿಗೆ ಸಭೆ

ಉಪ್ಪುಂದ: ಇದೇ ಮೊದಲ ಬಾರಿಗೆ ಬೈಂದೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗ ಮೇಳದ ಯಶಸ್ವಿಗಾಗಿ ಶಾಸಕರಾದ ಗುರುರಾಜ ಗಂಟಿಹೊಳೆಯವರು ಕಾರ್ಯಕರ್ತದಲ್ಲಿ ಪ್ರಮುಖರ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.

ಬೈಂದೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಅರ್ಹ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಮಾಡಬೇಕು. ವಿಶೇಷವಾಗಿ ಬೈಂದೂರು ಕ್ಷೇತ್ರದ ಪ್ರತಿಬೂತ್ ನ ಪ್ರತಿ ಮನೆಗೂ ಉದ್ಯೋಗ ಮೇಳದ ಮಾಹಿತಿ ತಲುಪಿಸುವ ಕಾರ್ಯ ಆಗಬೇಕು. ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶ ಮತ್ತು ಅದಕ್ಕೆ ಉಚಿತವಾಗಿ ನೀಡುವ ತರಬೇತಿ, ಕೇಂದ್ರ ಸರ್ಕಾರದ ಸಹಯೋಗ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಅಭ್ಯರ್ಥಿಗಳಿಗೆ ತಿಳಿಸುವ ಮೂಲಕ ಹೆಚ್ಚು ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಮೇಳಕ್ಕೆ ಆಕರ್ಷಿಸಬೇಕು. ಇದರ ಜೊತೆಗೆ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ, ತಾಂತ್ರಿಕೇತರ ಕೋರ್ಸ್ ಗಳನ್ನು ಪೂರೈಸಿದ ಪದವೀಧರರು ಬರುವಂತೆ ಮಾಡಬೇಕು. ಪದವಿ ಪಡೆಯದ ಅನೇಕರಿಗೂ ಕೌಶಲ್ಯ ಆಧಾರಿತ ಉದ್ಯೋಗಗಳು ವಿದೇಶದಲ್ಲಿ ಲಭ್ಯವಿದೆ. ಇದರ ಬಗ್ಗೆಯೂ ಮೇಳದಲ್ಲಿ ಮಾಹಿತಿ ಸಿಗಲಿದೆ. ಹೀಗಾಗಿ ನಿರ್ದಿಷ್ಟ ವಿಷಯದಲ್ಲಿ ಆಸಕ್ತಿ ಹೊಂದಿರುವವರು ಬರುವಂತೆ ಮಾಡಬೇಕು. ನರ್ಸಿಂಗ್ ಕೋರ್ಸ್ ಪೂರೈಸಿದವರು, ವಿದ್ಯಾರ್ಥಿಗಳು ಹೆಚ್ಚು ನೋಂದಣಿಯಾಗುವಂತೆ ವಿಶೇಷ ಗಮನಹರಿಸಲು ಶಾಸಕರು ತಿಳಿಸಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ಮತ್ತು ನೋಂದಣಿ ಹೆಚ್ಚಿಸುವ ಸಂಬಂಧ ಸಭೆಯಲ್ಲಿದ್ದವರಿಂದ ಸಲಹೆ ಪಡೆಯಲಾಯಿತು.