ಚಿತ್ರಕೂಟ ಆಯುರ್ವೇದ ಸಂಸ್ಥೆ ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

ಕುಂದಾಪುರ: ಚಿತ್ರಕೂಟ ಆಯುರ್ವೇದ ಸಂಸ್ಥೆಯನ್ನು ಆರಂಭಿಸುವ ಮೂಲಕ ಆಲೂರಿಗೆ ಡಾ| ಬಾಯರಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಇದರ ಯಶಸ್ಸು ಕೇವಲ ಅವರಿಗೆ ಮಾತ್ರವಲ್ಲ, ಇಡೀ ಊರಿಗೆ ಸಲ್ಲುತ್ತದೆ. ಈ ಪುಟ್ಟ ಊರಿಗೆ ಚಿಕಿತ್ಸೆಗಾಗಿ ವಿದೇಶಿಗರು ಕೂಡ ಬರುತ್ತಿರುವುದು ಹೆಮ್ಮೆಯ ವಿಚಾರ. ಸಂಸ್ಥೆ ಇನ್ನಷ್ಟು ಪ್ರಗತಿ ಕಾಣಲಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಗುರುವಾರ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಶ್ವ ವಾಯು ಪುನರ್ವಸತಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.

ಸಮ್ಮಾನ ಸ್ವೀಕರಿಸಿದ ಆಯುರ್ವೇದ ಗುರು ಡಾ| ರಘುರಾಮ ಶಾಸ್ತ್ರೀ ಮಾತನಾಡಿ, ಎಲ್ಲರೂ ಕನಸು ಕಾಣು ವುದು ಸಹಜ. ಆದರೆ ಅದನ್ನು ನನಸು ಮಾಡುವುದು ಮುಖ್ಯ. ಆ ಕಾರ್ಯವನ್ನು ಡಾ| ರಾಜೇಶ್‌ ಬಾಯರಿ ಮಾಡಿದ್ದಾರೆ ಎಂದರು.

ಗ್ರಾಮೀಣ ಭಾಗದಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದರ ಹಿಂದೆ ಅವರ ಅಪಾರ ಪರಿಶ್ರಮ, ಸೇವಾ ಮನೋಭಾವ ಇದೆ ಎಂದು ಉಡುಪಿ ಎಸ್‌ಡಿಎಂಸಿ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್‌ ಪೂಜಾರಿ ಹೇಳಿದರು.