ಸೂಕ್ತ ಕ್ರಮದ ಭರವಸೆ ನೀಡಿದ ಸಚಿವ ಚಲುವರಾಯ ಸ್ವಾಮಿ
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ವಿಸ್ತೀರ್ಣದಲ್ಲಾಗುತ್ತಿರುವ ಗಣನೀಯ ಇಳಿಕೆ, ಕೃಷಿ ಯೋಗ್ಯ ಹಡಿಲು ಭೂಮಿಯ ಹೆಚ್ಚಳ ಹಾಗೂ ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ ಕೃಷಿ ಉತ್ಪಾದನೆಯ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ತೀವ್ರ ಕಳವಳ ವ್ಯಕ್ತಪಡಿಸಿ, ಸಮಗ್ರ ಅಧ್ಯಯನಕ್ಕೆ ಆಗ್ರಹಿಸಿದರು.
ಶಾಸಕರು ಸದನದಲ್ಲಿ ಎತ್ತಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರಾದ ಎನ್. ಚೆಲುವರಾಯ ಸ್ವಾಮಿಯವರು, ಶಿವಮೊಗ್ಗದಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಸದರಿ ವಿಷಯದ ಕುರಿತು ವೈಜ್ಞಾನಿಕ ಅಧ್ಯಯನಕ್ಕಾಗಿ ಸಂಶೋಧನಾ ಪ್ರಸ್ತಾವನೆಯು ಕೃಷಿ ಆಯುಕ್ತಾಲಯದಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದರು.
ಕರಾವಳಿ ಪ್ರದೇಶದ ರೈತರಿಗೆ ನೆರವು ನೀಡಲು 2919-20 ನೇ ಸಾಲಿನಲ್ಲಿ ಕರಾವಳಿ ಪ್ಯಾಕೇಜ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿರುತ್ತದೆ. ಪ್ರಸ್ತುತ ಕೇಂದ್ರ ಪುರಸ್ಕೃತ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆ ಅಡಿ ಅಕ್ಕಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದುಈ ಕಾರ್ಯಕ್ರಮದಡಿ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆ ವಿಸ್ತರಿಸಲು ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ನೂತನ ತಳಿಗಳ ಬಳಕೆ ಮತ್ತು ಸುಧಾರಿತ ತಾಂತ್ರಿಕತೆಗಳ ಅಳವಡಿಕೆಯಿಂದ ಪ್ರಾತ್ಯಕ್ಷಿಕೆಗಳನ್ನು ಅನುಷ್ಠಾನ ಮಾಡಲು ಹಾಗೂ ಸಮಗ್ರ ಪೀಡೆ ಪೋಷಕಾಂಶಗಳ ನಿರ್ವಹಣೆ, ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ವಿತರಣೆ ಮಾಡುವುದರ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.