ಮೋಜಣಿ -3 ತಂತ್ರಾಂಶ ಸಮಸ್ಯೆ ಸರಿಪಡಿಸುವಂತೆ ಕಂದಾಯ ಸಚಿವರಿಗೆ ಗಂಟಿಹೊಳೆ ಆಗ್ರಹ

ಸರ್ವೇ ಇಲಾಖೆಯ ಮೋಜಣಿ -3 ತಂತ್ರಾಂಶದ ನ್ಯೂನ್ಯತೆಗಳಿಂದಾಗಿ ಸಾರ್ವಜನಿಕರಿಂದ ಜಮೀನು ಹದ್ದು ಬಸ್ತು, 11ಈ, ಹಾಗೂ ಪೋಡಿ ಸಂಬಂಧ ನಾಡ ಕಚೇರಿ, ಜನ ಸ್ನೇಹಿ ಕೇಂದ್ರಗಳಲ್ಲಿ ಮೋಜಣಿ ತಂತ್ರಾಂಶದ ಮೂಲಕ ಹಾಕಲಾದ ಅರ್ಜಿಗಳು ಹಲವು ದಿನಗಳಿಂದ ಸರ್ವರ್ ಸಮಸ್ಯೆಯಿಂದ ಅಪ್ ಲೋಡ್ ಮಾಡಲಾಗದೇ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ 1.21 ಲಕ್ಷ ಅರ್ಜಿಗಳು ಮೋಜಣಿ – 3 ತಂತ್ರಾಂಶ ದ ತೊಡಕಿನಿಂದ ವಿಲೇ ಗೆ ಬಾಕಿ ಇದೆ. ಜನ ಸಾಮಾನ್ಯರಿಗೆ ತಮ್ಮ ಜಮೀನಿನ ಪೋಡಿ ಆಗುತ್ತಿಲ್ಲ, 11 E ನಕ್ಷೆ ಸಿಗುತ್ತಿಲ್ಲ.

ಈ ಕುರಿತು ಧ್ವನಿ ಎತ್ತಿರುವ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು, ಹದ್ದು ಬಸ್ತು ನಕ್ಷೆ ಕೂಡ ಕೈ ಸೇರುತ್ತಿಲ್ಲ. ದಿನ ನಿತ್ಯ ಸರ್ವೇ ಇಲಾಖೆ ಗೆ ಅಲೆದಾಡುವ ಪರಿಸ್ಥಿತಿ ಉದ್ಭವವಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಸಾಕಷ್ಟು ಅರ್ಜಿಗಳು ಬಾಕಿಯಾಗಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಸರ್ವೇ ದಾಖಲೆಗಳನ್ನು ಸಾರ್ವಜನಿಕರು ಸುಲಭವಾಗಿ ಹಾಗೂ ಸಕಾಲದಲ್ಲಿ ಪಡೆಯಲು ಕಂದಾಯ ಸಚಿವರು ಕೂಡಲೇ ಕ್ರಮ ವಹಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.