ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಬಳಕೆಯಲ್ಲಿದ್ದ ಬಾರ್ಜ್ ಸೇವೆಯನ್ನು ಗಂಗೊಳ್ಳಿ-ಕುಂದಾಪುರ ನಡುವಿನ ಸಂಪರ್ಕಕ್ಕೆ ಬಳಸುವ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

ಸಿಗಂದೂರು ಸಂಪರ್ಕಕ್ಕೆ ಬಳಸುತ್ತಿದ್ದ ಬಾರ್ಜ್ ಸೇವೆ ನೂತನ ಸೇತುವೆ ನಿರ್ಮಾಣದ ನಂತರ ನಿಲ್ಲಿಸಲಾ ಗಿದೆ. ಆ ಬಾರ್ಜ್ನ್ನು ಗಂಗೊಳ್ಳಿ- ಕುಂದಾಪುರ ನಡುವೆ ಸಂಪರ್ಕ ಕಲ್ಪಿಸಲು ಪಂಚಗಂಗಾವಳ್ಳಿ ನದಿಗೆ ಒದಗಿಸಬೇಕು ಎಂದು ಸ್ಥಳೀಯರು ಹಲವು ರೀತಿಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಇದಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.
ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಾರ್ಜ್ನ ಕಾರ್ಯ ಕ್ಷಮತೆಯನ್ನು ಪರಿಶೀಲಿಸಿ, ಅದು ಉಪಯೋಗ ಯೋಗ್ಯವಾಗಿದ್ದಲ್ಲಿ ಅದನ್ನೇ ಬಳಕೆ ಮಾಡುವುದು ಅಥವಾ ಕಾರ್ಯಕ್ಷಮ ಕ್ಷೀಣಿಸಿದ್ದರೆ ಹೊಸ ಬಾರ್ಜ್ ಸೇವೆಗೆ ಒದಗಿಸುವ ಬಗ್ಗೆಯೂ ಮುಖ್ಯಮಂತ್ರಿ ಅವರೊಂದಿಗೂ ಮಾತುಕತೆ ನಡೆಸಲು ಸಂಸದರು ಮುಂದಾಗಿದ್ದಾರೆ. ಹೀಗಾಗಿ ಪಂಚಗಂಗಾವಳ್ಳಿ ನದಿಗೆ ಬಾರ್ಜ್ ಸೇವೆ ಒದಗಿಸುವ ಮೂಲಕ ಗಂಗೊಳ್ಳಿ ಯಿಂದ ಕುಂದಾಪುರಕ್ಕೆ ಹೋಗಲು ಅಥವಾ ಅಲ್ಲಿಂದ ವಾಪಾಸು ಆಗಲು ಸುಮಾರು 17ಕಿ.ಮೀ. ಸುತ್ತುವುದನ್ನು ತಪ್ಪಿಸಲು ಇದರಿಂದ ಸಾಧ್ಯವಿದೆ ಎಂದು ಶಾಸಕ ಗುರುರಾಜ್ ಗಂಟೆಹೊಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
