ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 2024-25 ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿ ಪರ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ ಸ್ವ-ಉದ್ಯೋಗ ಸಂಬಂಧ ಸುಧಾರಿತ ಉಪಕರಣ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಮಾತನಾಡಿ ಬೈಂದೂರು ಕ್ಷೇತ್ರವು ಸಾಕಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿದ್ದು ವಿವಿಧ ವೃತ್ತಿಪರರು ಸ್ವ-ಉದ್ಯೋಗ ಮೂಲಕ ತಮ್ಮ ಜೀವನ ಮಟ್ಟ ಸುಧಾರಿಸಿಕೊಂಡು ಗೌರವಯುತ ಜೀವನ ನಡೆಸುತ್ತಿದ್ದಾರೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಶೈಕ್ಷಣಿಕ ಭವಿಷ್ಯ ಸೇರಿದಂತೆ ಕುಟುಂಬದ ಸುಭದ್ರ ಬದುಕಿಗೆ ಶ್ರಮಿಸುತ್ತಿದ್ದಾರೆ. ಇಂತಹ ವರ್ಗವು ಹೆಚ್ಚು ಹೆಚ್ಚು ಗ್ರಾಮೀಣ ಭಾಗದಲ್ಲಿ ಏಳಿಗೆ ಕಾಣುವುದರಿಂದ ಇಡೀ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಪಡೆದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿ ಕೊಳ್ಳಿ ಎಂದು ಸಂದೇಶ ನೀಡಿದರು.


ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 116 ಫಲಾನುಭವಿಗಳಿಗೆ ಟೈಲರಿಂಗ್ ಮೆಷಿನ್, ಗಾರೆ ವೃತ್ತಿಯ 37 ಮಂದಿ, ಮರಗೆಲಸ ವೃತ್ತಿಯ 22 ಮಂದಿ, ಎಲೆಕ್ಟ್ರಿಷಿಯನ್ ವೃತ್ತಿಯ 16 ಮಂದಿ, ಬ್ಯುಟಿಪಾರ್ಲರ್ ವೃತ್ತಿಯ 11 ಮಂದಿ, ಪ್ಲಮ್ಬಿಂಗ್ ವೃತ್ತಿಯ 04 ಮಂದಿ, ಕ್ಷೌರಿಕ ವೃತ್ತಿಯ 02 ಮಂದಿ, ಕಮ್ಮಾರಿಕೆ ವೃತ್ತಿಯ 01 ಮಂದಿ, ದೋಬಿ ವೃತ್ತಿಯ 01 ಮಂದಿ ಸೇರಿದಂತೆ ಒಟ್ಟು 210 ಫಲಾನುಭವಿಗಳಿಗೆ ಉಪಕರಣ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಗ್ರಾಮಾಂತರ ಕೈಗಾರಿಕೆ ಉಪ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
