ಸಣ್ಣ ವ್ಯಾಪಾರಸ್ಥರ ಹಿತ ಕಾಪಾಡುವಂತೆ ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ಗಂಟಿಹೊಳೆ

ಬೇಕರಿ, ಕಾಂಡಿಮೆಂಟ್ಸ್, ಹೋಟೆಲು, ಕಿರಾಣಿ ಅಂಗಡಿ, ಟೀ, ತರಕಾರಿ ಅಂಗಡಿ, ಮುಂತಾದ ಸಣ್ಣ ಸಣ್ಣ ವ್ಯಾಪಾರ ವಹಿವಾಟುಗಳನ್ನು ನಡೆಸುವವರ ಹಿತ ಕಾಪಾಡಲು ಹಾಗೂ ಭವಿಷ್ಯದಲ್ಲೂ ಸೂಕ್ತ ರಕ್ಷಣೆ ಒದಗಿಸಲು ಸದನದಲ್ಲಿ ಪ್ರಸ್ತಾಪಿಸಿದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿ ಹೊಳೆ : ಸರಕಾರದಿಂದ ಸೂಕ್ತ ಪರಿಹಾರ ಕ್ರಮದ ಭರವಸೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಇತ್ತೀಚಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಸಣ್ಣ ವ್ಯಾಪಾರ ವಹಿವಾಟುಗಳನ್ನು ನಡೆಸುವವರಿಗೆ ಯುಪಿಐ ವ್ಯವಹಾರ ಸಂಬಂಧ ಯಾವುದೇ ತಿಳುವಳಿಕೆ ನೀಡದೇ ತೆರಿಗೆ ನೋಟಿಸು ನೀಡಿರುವುದರಿಂದ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಸಣ್ಣ ವರ್ತಕರಿಗೆ ಸಮಸ್ಯೆ ಆಗಿರುವ ವಿಚಾರ ಸರಕಾರದ ಗಮನಕ್ಕೆ ಬಂದಿರುವ ಕುರಿತು ಹಾಗೂ ಈ ಎಲ್ಲಾ ಸಣ್ಣ ವ್ಯಾಪಾರಿಗಳ ಹಿತ ಕಾಪಾಡಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರು ಕಲಿಸದೇ ಸಣ್ಣ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ನೀಡಲು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಟ್ಟಿಹೊಳೆಯವರು ಸದನದಲ್ಲಿ ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರವರು ಮುಂಚಿತವಾಗಿ ಯಾವುದೇ ತಿಳುವಳಿಕೆ ನೀಡದೇ ಏಕಾ ಏಕಿ ನೋಟಿಸು ನೀಡಿರುವುದರಿಂದ ಹಲವು ಸಣ್ಣ ವ್ಯಾಪಾರಿಗಳಿಗೆ ಸಮಸ್ಯೆ ಆಗಿರುವ ವಿಚಾರ ಸರಕಾರದ ಗಮನದಲ್ಲಿದೆ ಎಂದಿದ್ದಾರೆ. ಮತ್ತು ಸಣ್ಣ ವ್ಯಾಪಾರಿಗಳ ಹಿತ ಕಾಪಾಡಲು ಈ ವಿಚಾರವಾಗಿ ಈ ಕೆಳಗಿನ ಕ್ರಮಗಳಾದ

  • ಕಾರಣ ಕೇಳುವ ನೋಟಿಸ್ ಪಡೆದ ವರ್ತಕರು ಪ್ರತ್ಯುತ್ತರ ಸಲ್ಲಿಸುವ ಹಾಗೂ ವೈಯುಕ್ತಿಕವಾಗಿ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿದೆ.
  • ವ್ಯಾಪಾರಿಗಳು ಸಲ್ಲಿಸಿದ ಸಾಕ್ಷಿ ದಾಖಲೆಗಳ ಆಧಾರದ ಮೇಲೆ ಇಲಾಖೆಯು ವಾರ್ಷಿಕ ವಹಿವಾಟನ್ನು ಪರಿಶೀಲಿಸಿ, ತೆರಿಗೆ ಬಾಧ್ಯತೆ ಇದೆಯೋ ಹಾಗೂ ನೋಂದಣಿ ಅವಶ್ಯಕತೆ ಇದೆಯೋ ಎಂದು ನಿರ್ಧರಿಸಲಾಗುವುದು.
  • ವಿಭಾಗಿಯ ಮಟ್ಟದಲ್ಲಿ ಮತ್ತು ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಗಳ ಮಟ್ಟದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
  • ವಿಭಾಗಿಯ ಮಟ್ಟದಲ್ಲಿ ನೋಂದಣಿ ಜಾಗೃತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ

ಎಂದು ಶಾಸಕರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ.